Advertisement

ಪ್ಲಾಸ್ಟಿಕ್‌ ಬಾಟ್ಲಲ್ಲಿ ಸೊಪ್ಪು ಬೇಸಾಯ!

10:41 AM Jun 17, 2019 | Suhan S |

ಶಿರಸಿ: ಬಿಸಿಲ ಬೇಗೆಗೋ, ದಣಿವು ನಿವಾರಿಸಿಕೊಳ್ಳಲೋ ಖರೀದಿಸುವ ತಂಪು ಪಾನೀಯ, ನೀರು ತುಂಬಿರುವ ಪ್ಲಾಸ್ಟಿಕ್‌ ಬಾಟಲಿಗಳನ್ನು ಪುನಃ ಬಳಸುವುದು ಅಪರೂಪ. ಇವು ಬಿಸಾಕು ವಸ್ತುಗಳಾಗಿ ಪರಿಸರದ ವಿನಾಶಕ್ಕೆ ಕಾರಣವಾಗುತ್ತಿರುತ್ತವೆ.

Advertisement

ಆದರೆ, ಶಿರಸಿಯಲ್ಲಿ ಇರುವ ತೋಟಗಾರಿಕಾ ಮಹಾ ವಿದ್ಯಾಲಯದಲ್ಲಿ ಸದ್ದಿಲ್ಲದೇ ಬಿಸಾಕು ಪ್ಲಾಸ್ಟಿಕ್‌ ಬಾಟಲಿಗಳನ್ನು ಬಳಸಿ ಪರಿಸರ ಜಾಗೃತಿ ಸಂದೇಶ ಬೀರುತ್ತಿವೆ.

ಏನಿದು ಮಾದರಿ?: ಅನುಪಯುಕ್ತ ನೀರಿನ ಬಾಟಲ್ಗಳೇ ತರಕಾರಿ ಸೊಪ್ಪಿನ ಗಿಡಗಳನ್ನು ಬೆಳೆಸುವ ಕುಂಡಗಳಾಗಿವೆ. ಒಂದಲ್ಲ, ಎರಡಲ್ಲ, ಹತ್ತಾರು ಜಾತಿಯ ಸೊಪ್ಪಿನ ಬೀಜಗಳನ್ನು ಬಿತ್ತಿ ಫಸಲು ತರುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಆಸಕ್ತಿಕರವಾಗಿ ತರಕಾರಿ ಅಂತರಿಕ್ಷ ಗಾರ್ಡನ್‌ ನಿರ್ಮಿಸಿದೆ. ತೋಟಗಾರಿಕಾ ವಿದ್ಯಾರ್ಥಿಗಳಿಗೆ ಇದು ವೆಜಿಟೇಬಲ್ ವರ್ಟಿಕಲ್ ಗಾರ್ಡನ್‌ ಆಗಿದೆ!

ಕಸದಲ್ಲೂ ರಸಾನುಭವ: ಕಾಲೇಜಿನ ಬಿಎಸ್‌ಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ತಂಡ ಇಂಥದೊಂದು ಪರಿಸರ ಸ್ನೇಹಿ ಗಾರ್ಡನ್‌ ವಿತ್‌ ವೆಜಿಟೇಬಲ್ ಬೆಳೆಸುತ್ತಿದೆ. ಕಾಲೇಜಿನ ದ್ವಾರದ ಅಂಚಿನಲ್ಲೇ ತೂಗಾಡುವ ಬಾಟಲಿಗಳಲ್ಲಿ ಇಟ್ಟು ಕೃಷಿ ಮಾಡಿದ್ದಾರೆ. ಇವರ ಗಾರ್ಡನ್‌ ಗಾಳಿ ಬಂದಾಗ ತೂರಾಡುತ್ತವೆ ಕೂಡ!

ತೋಟಗಾರಿಕಾ ಪ್ರದೇಶ ವ್ಯಾಪ್ತಿ ಹೊಂದಿರುವ ಈ ಭಾಗದಲ್ಲಿ ಕಳೆದ ದಶಕದಲ್ಲಿ ಅಂದಿನ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವಧಿಯಲ್ಲಿ ತೋಟಗಾರಿಕಾ ಕಾಲೇಜೊಂದು ಸ್ಥಾಪನೆಯಾಗಿತ್ತು. ನಾಡಿನ ವಿವಿಧೆಡೆ ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆಯಲ್ಲಿ ತೊಡಗಿದ್ದು ಪಠ್ಯದ ಜತೆ ಅದಕ್ಕೆ ಪೂರಕ ಚಟುವಟಿಕೆಗಳನ್ನು ವಿದ್ಯಾರ್ಥಿಗಳು ಕೈಗೊಳ್ಳುತ್ತಿದ್ದಾರೆ. ತರಕಾರಿ, ಹೂವು, ಅಲಂಕಾರಿ ಗಿಡ ಬೆಳೆಸುವುದು ಹೀಗೆ ತೋಟಗಾರಿಕೆ, ಕೃಷಿ ಪೂರಕ ಕಾರ್ಯಗಳನ್ನು ಕೂಡ ನಡೆಸಿ ಅನುಭವದ ಬುತ್ತಿಯನ್ನೂ ಕಟ್ಟಿಕೊಳ್ಳುತ್ತಿದ್ದಾರೆ.

Advertisement

ಬರೀ ಬಟಾಲಿಗಳಲ್ಲ: ಇಲ್ಲಿ ಬಾಟಲಿಗಳು ಕೇವಲ ಬರೀ ಬಾಟಲಿಗಳಲ್ಲ. ಅವು ಕೊಳೆಯದ ತ್ಯಾಜ್ಯಗಳೂ. ಸುಮಾರು 65ಕ್ಕೂ ಹೆಚ್ಚು ನೀರಿನ ಬಾಟಲಿಗಳನ್ನು ಸಂಗ್ರಹಿಸಿ ಬದಲಾಗಿ ಅವುಗಳನ್ನು ಅಡ್ಡಲಾಗಿ ಕೊರೆದು, ದಾರದಲ್ಲಿ ಕಾಲೇಜಿನ ಮುಂಭಾಗದಲ್ಲಿ ಇರುವ ಕಂಬಕ್ಕೆ ಕಟ್ಟಿ ಒಂದು ಆಕಾರ ನೀಡಿದ್ದಾರೆ. ಮನೆ ಮನೆಗಳಲ್ಲಿ ಪ್ರತಿಯೊಬ್ಬರೂ ಮಾಡಬಹುದಾದ ಮಾದರಿ ಸಿದ್ಧಗೊಳಿಸಿದ್ದಾರೆ. ಪ್ರಾಧ್ಯಾಪಕ ಶಿವಾನಂದ ಹೊಂಗಲ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಹೇಮಂತ, ಕೃಷ್ಣ, ಕಿರಣ, ಕಮಲಶ್ರೀ, ಕಾವ್ಯ ಈ ಹೊಸ ಮಾದರಿ ಮಾಡಿದ್ದಾರೆ.

ಕೊರೆದ ಬಾಟಲಿಗಳ ಒಳಗೆ ನಾರಿನ ಪುಡಿ ಹಾಕಿ ಸೊಪ್ಪಿನ ಬೀಜಗಳನ್ನು ಬಿತ್ತಲಾಗಿದೆ. ನಾಲ್ಕು ಬದಿಯಲ್ಲಿ ಕಂಬಗಳನ್ನು ನಿಲ್ಲಿಸಿ ಅದಕ್ಕೆ ಅಡ್ಡಲಾಗಿ ಹಾಕಿದ ಪಟ್ಟಿಗಳಿಗೆ ಎರಡು ಬದಿಯಲ್ಲಿ ಬಳ್ಳಿಗಳನ್ನು ಕಟ್ಟಿದ ಬಾಟಲಿಗಳನ್ನು ಹ್ಯಾಂಗಿಂಗ್‌ ಮಾಡಲಾಗಿದೆ. ನೀರು ತುಂಬದಂತೆ ಬಾಟಲಿ ಅಡಿ ಭಾಗದಲ್ಲಿ ಸಣ್ಣ ರಂಧ್ರ ಮಾಡಲಾಗಿದೆ. ಹರಿವೆಸೊಪ್ಪು, ಮೆಂತೆ, ಸಬ್ಬಸಗಿ, ಕೊತ್ತಂಬರಿ, ಪಾಲಕ್‌, ಈರುಳ್ಳಿ ಸೇರಿದಂತೆ 15ಕ್ಕೂ ಅಧಿಕ ಸೊಪ್ಪಿನ ಬೀಜ ಹಾಕಲಾಗಿದೆ. ಅವೀಗ ಎರಡು ನಾಲ್ಕು ಎಲೆಗಳೂ ಬಂದಿವೆ. ವಿದ್ಯಾರ್ಥಿಗಳ ಮೊಗದಲ್ಲಿ ನಗು ಅರಳಿದೆ.

ಈ ಮಾದರಿ ನೋಡಿ ಅರೆ ಜಾಗ ಇಲ್ಲದ ನಾವೂ ಮನೆಯ ವರಾಂಡದಲ್ಲೂ ಮಾಡಿಕೊಳ್ಳಬಹುದಲ್ಲ ಅನ್ನಿಸಿತು. ನಾವೂ ಪ್ರಯೋಗಿಸಿ ನೋಡುತ್ತೇವೆ. •ರೂಪಾ ಹೆಗಡೆ, ಗೃಹಿಣಿ

ಇಸ್ರೇಲ್ನಂತಹ ದೇಶದಲ್ಲಿ ಮಾಡಿದ್ದನ್ನು ಹೇಳಿದ್ದೆವು ವಿದ್ಯಾರ್ಥಿಗಳಿಗೆ. ಇವರೂ ಆಸಕ್ತಿಯಿಂದ ವೇಸ್ಟ್‌ ಬಾಟಲಿ ಬಳಸಿ ಸೊಪ್ಪಿನ ತರಕಾರಿ ಬೆಳೆಸಿದ್ದಾರೆ.•ಶಿವಾನಂದ ಹೊಂಗಲ್ ಪ್ರಾಧ್ಯಾಪಕ

ಒಂದು ಕಡೆ ನಗರದಲ್ಲಿ ಬೇಕಾಬಿಟ್ಟಿ ಬಾಟಲಿಗಳನ್ನು ಎಸೆಯುವವರು ಇದ್ದಾರೆ. ಇನ್ನೊಂದೆಡೆ ಇಂಥ ಮಾದರಿ ಕೆಲಸ ಮಾಡುವವರೂ ಇದ್ದಾರೆ!

•ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next