ಪುತ್ತೂರು: ಪುತ್ತೂರು ಕಂಬಳ ಕೂಟದಲ್ಲಿ ನಶೆಯಲಿದ್ದ ಅಪರಿಚಿತ ವ್ಯಕ್ತಿಯೋರ್ವ ಅಸಭ್ಯ ರೀತಿಯಲ್ಲಿ ವರ್ತಿಸಿದ್ದು ಬಿಟ್ಟರೆ ಯಾವುದೇ ಹಲ್ಲೆ ಪ್ರಕರಣ ನಡೆದಿಲ್ಲ ಎಂದು ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿ ಸಾನ್ಯಾ ಅಯ್ಯರ್ ಪ್ರತಿಕ್ರಿಯಿಸಿದ್ದಾರೆ.
ಮಾದ್ಯಮದ ಜತೆ ಮಾತನಾಡಿದ ಅವರು, ಪುತ್ತೂರು ಕೋಟಿ-ಚೆನ್ನಯ ಕಂಬಳ ಕೂಟಕ್ಕೆ ಅತಿಥಿಯಾಗಿ ಕರೆದಿದ್ದರು. ರಾತ್ರಿ ಸಭೆ ಮುಗಿದ ಬಳಿಕ ಕಂಬಳ ನೋಡುವುದೋಸ್ಕರ ಮರಳಿ ಬಂದಿದ್ದೆ. ವೀಕ್ಷಣೆಯ ನಂತರ ಹಿಂತಿರುಗುತಿದ್ದ ವೇಳೆಯಲ್ಲಿ ನಶೆಯಲ್ಲಿದ್ದ ಅಪರಿಚಿತ ಯುವಕ ನನ್ನ ಸ್ನೇಹಿತೆಯರೊಂದಿಗೆ ಅಸಭ್ಯ ರೀತಿಯಲ್ಲಿ ವರ್ತಿಸಿ ಕ್ಷಣ ಮಾತ್ರದಲ್ಲಿ ಅಲ್ಲಿಂದ ಪರಾರಿಯಾಗಿದ್ದ. ಈ ವಿಷಯ ತಿಳಿದು ಜನ ಸೇರಿದ್ದರು. ಆಯೋಜಕರು ನಮ್ಮನ್ನು ವೇದಿಕೆಗೆ ಕರೆದುಕೊಂಡು ಹೋಗಿದ್ದು ಈ ವೇಳೆ ಹೆಣ್ಣಿನ ಮೇಲಿನ ವರ್ತನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದೇನೆ. ಇದು ಆ ಸಂದರ್ಭದಲ್ಲಿ ಉಂಟಾಗುವ ಸಹಜ ಪ್ರಕ್ರಿಯಷ್ಟೇ ಎಂದವರು ಹೇಳಿದರು.
ಪುತ್ತೂರು ಕಂಬಳ ಕೂಟದಲ್ಲಿ ನಾನು ಯಾರಿಗೂ ಕಪಾಳ ಮೋಕ್ಷ ಮಾಡಿಲ್ಲ, ನನಗೂ ಯಾರೂ ಕಪಾಳ ಮೋಕ್ಷ ಮಾಡಿಲ್ಲ. ಈ ರೀತಿಯ ವಿಚಾರ ಹೇಗೆ ಹಬ್ಬಿತ್ತು ತಿಳಿದಿಲ್ಲ. ಲಕ್ಷಾಂತರ ಜನ ಭಾಗವಹಿಸಿದ ಕಾರ್ಯಕ್ರಮ ಅದಾಗಿದ್ದು ಅಪರಿಚಿತ ಯುವಕನ ಗುರುತು ಪತ್ತೆಯಾಗದ ಕಾರಣ ಪೊಲೀಸ್ ದೂರು ನೀಡಿಲ್ಲ ಎಂದು ಅವರು ಹೇಳಿದರು.
ಕಂಬಳ ಆಯೋಜಕರು ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ನಾವು ಸಭೆ ಮುಗಿಸಿ ಕಂಬಳಕ್ಕೆ ಮರಳಿ ಬರುವ ವಿಚಾರ ಅವರಿಗೆ ಗೊತ್ತಿರಲಿಲ್ಲ. ಮೊದಲೇ ತಿಳಿಸಿದ್ದರೆ ಸುರಕ್ಷತಾ ಕ್ರಮದಿಂದ ನಮ್ಮನ್ನು ಕರೆದೊಯ್ಯುತ್ತಿದ್ದರು. ಘಟನೆ ನಡೆದ ಮೇಲೆ ಆಯೋಜಕರು ಆರೋಪಿ ಪತ್ತೆಗೆ, ನಮ್ಮ ಸುರಕ್ಷತೆಗೆ ಗರಿಷ್ಟ ಸಹಕಾರ ನೀಡಿದ್ದಾರೆ ಎಂದ ಸಾನ್ಯಾ, ಕಂಬಳಕ್ಕೆ ತನ್ನದೇ ಆದ ಶ್ರೇಷ್ಠ ಪರಂಪರೆ ಇದೆ. ಪುತ್ತೂರಿನ ಕಂಬಳ ಉತ್ತಮ ರೀತಿಯಲ್ಲಿ ನಡೆದಿದೆ. ಯಾರೋ ಒಬ್ಬ ನಶೆಯಲ್ಲಿದ್ದ ವ್ಯಕ್ತಿಯ ವರ್ತನೆಯಿಂದ ಕಂಬಳಕ್ಕೆ ಧಕ್ಕೆ ಆಗುವುದಿಲ್ಲ ಎಂದರು.
ಇದನ್ನೂ ಓದಿ: ಗಂಗಾವತಿ: ಕಿಷ್ಕಿಂಧಾ ಅಂಜನಾದ್ರಿ ಹುಂಡಿ ಎಣಿಕೆ 26.23 ಲಕ್ಷ ರೂ.ಸಂಗ್ರಹ