Advertisement

ನ್ಯಾಯಾಂಗದ ಇತಿಹಾಸಕ್ಕೆ ಕಳಂಕ

06:20 AM Jan 13, 2018 | Team Udayavani |

ಬೆಂಗಳೂರು: ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ನಾಲ್ವರು ನ್ಯಾಯಮೂರ್ತಿಗಳು ಮಾಧ್ಯಮಗಳ ಮುಂದೆ ಬಂದು ಹೇಳಿಕೆ ನೀಡಿರುವುದು ನ್ಯಾಯಾಂಗದ ಇತಿಹಾಸಕ್ಕೆ ಒಂದು ಕಳಂಕ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಹಾಗೂ ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ಹೇಳಿದ್ದಾರೆ.

Advertisement

ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿ ನಡೆಸಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಆರೋಪ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನ್ಯಾಯಮೂರ್ತಿಗಳು ಬಹಿರಂಗಪಡಿಸಿದ ವಿಚಾರಗಳ ಬಗ್ಗೆ ತಕರಾರಿಲ್ಲ. ಅವರು ಹೇಳಿದ್ದು ತಪ್ಪು ಅಥವಾ ಸುಳ್ಳು ಎನ್ನಲೂ ಸಾಧ್ಯವಿಲ್ಲ. ಆದರೆ, ಮಾಧ್ಯಮಗಳ ಮುಂದೆ ಅದನ್ನು ಹೇಳಿದ್ದು ಸರಿಯಲ್ಲ ಎಂದರು.

ಪತ್ರಿಕಾಗೋಷ್ಠಿ ನಡೆಸಿ ಸುಪ್ರೀಂ ಕೋರ್ಟ್‌ನ ಆಂತರಿಕ ವಿಚಾರಗಳನ್ನು ಬಹಿರಂಗಪಡಿಸಿದ ನ್ಯಾಯಮೂರ್ತಿಗಳ ಕ್ರಮ ಅತ್ಯಂತ ಬೇಸರ ಮತ್ತು ಅತಂಕ ತಂದಿದೆ. ದೇಶದಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗವನ್ನು ತಿದ್ದುವ ಕೆಲಸ ಮಾಡುವ ಸ್ವತಂತ್ರ ಅಸ್ತಿತ್ವ ಹೊಂದಿರುವ ನ್ಯಾಯಾಂಗದಂತಹ ಸಂಸ್ಥೆ ತನ್ನೊಳಗಿನ ಸಮಸ್ಯೆಯನ್ನು ಮಾಧ್ಯಮಗಳ ಮೂಲಕ ಜನರೆದುರು ಹೇಳಿದರೆ ಅದರಿಂದ ಅತ್ಯಂತ ಕೆಟ್ಟ ಪರಿಣಾಮ ಉಂಟಾಗುತ್ತದೆ. ಹೀಗಾಗಿ ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಂತ್ಯಕ್ಕೆ ಮುನ್ನುಡಿ ಬರೆದಂತಾಗಿದೆಯೇ ಎಂಬ ನೋವು ಉಂಟಾಗಿದೆ ಎಂದು ಹೇಳಿದರು.

ಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ಶಾಸಕಾಂಗ, ಕಾರ್ಯಾಂಗಕ್ಕಿಂತ ಹೆಚ್ಚಿನ ನಂಬಿಕೆ ನ್ಯಾಯಾಂಗದ ಬಗ್ಗೆ ಇದೆ. ಹೀಗಿರುವಾಗ ನ್ಯಾಯಾಲಯದ ಆಡಳಿತದಲ್ಲಿ ಬದಲಾವಣೆ ಆಗಬೇಕು ಎಂಬ ನ್ಯಾಯಮೂರ್ತಿಗಳ ಹೇಳಿಕೆ ಒಳ್ಳೆಯದೆ. ಆದರೆ, ಮಾಧ್ಯಮಗಳ ಮುಂದೆ ಬಂದಿರುವುದು ತಪ್ಪು ಎಂದರು.

ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿ ನಡೆಸಿ ಆಂತರಿಕ ವಿಚಾರವನ್ನು ಬಹಿರಂಗಪಡಿಸಿದ್ದರಿಂದ ನ್ಯಾಯಾಂಗದ ಮೇಲಿನ ಜನರ ವಿಶ್ವಾಸ ಮತ್ತು ಭರವಸೆಗೆ ಧಕ್ಕೆಯಾಗಿದೆ. ಅವರ ಆರೋಪಗಳು, ಬಹಿರಂಗಪಡಿಸಿದ ವಿಚಾರಗಳಿಗೆ ಆಕ್ಷೇಪ ಇಲ್ಲ. ಈಗಿನ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಕೆಲ ಆರೋಪಗಳಿರುವುದೂ ಸತ್ಯ. ಈ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದರೂ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಮಾಧ್ಯಮಗಳ ಮುಂದೆ ಬರುವಂತಾಯಿತು ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಅದರ ಬದಲು ಸರ್ಕಾರದ ಗಮನಕ್ಕೆ ತರಬಹುದಿತ್ತು. ನ್ಯಾಯಮೂರ್ತಿಗಳ ಸಮಿತಿ ರಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದಿತ್ತು. ಆದರೆ, ಮಾಧ್ಯಮಗಳ ಮುಂದೆ ಬಂದಿರುವುದು ಒಂದು ಕಳಂಕಿತ ವಿದ್ಯಮಾನ ಎಂದು ಅಭಿಪ್ರಾಯಪಟ್ಟಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next