ನವದೆಹಲಿ: ಸಂತೂರ್ ವಾದಕ ಹಾಗೂ ಖ್ಯಾತ ಸಂಗೀತ ಸಂಯೋಜಕ ಪಂಡಿತ್ ಭಜನ್ ಸೊಪೋರಿ(73ವರ್ಷ) ಅವರು ಗುರುವಾರ( ಜೂನ್ 02) ನಿಧನರಾಗಿರುವುದಾಗಿ ವರದಿ ತಿಳಿಸಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಗುರ್ಗಾಂವ್ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇದನ್ನೂ ಓದಿ:ಸುರ್ಜೇವಾಲಾ ಸಂಧಾನ: ಭಿನ್ನಮತ ಮರೆಯಲು ಮುಂದಾದ ಡಿಕೆಶಿ- ಸಿದ್ದರಾಮಯ್ಯ
ಪಂಡಿತ್ ಭಜನ್ ಸೊಪೋರಿ ಅವರು 1948ರಲ್ಲಿ ಜನಿಸಿದ್ದು, ಪಂಡಿತ್ ಭಜನ್ ಅವರ ಕುಟುಂಬ ಮೂಲತಃ ಕಾಶ್ಮೀರ ಕಣಿವೆ ಪ್ರದೇಶದವರಾಗಿದ್ದು, ಸೊಪೋರೆಯಿಂದ ವಲಸೆ ಬಂದಿದ್ದರು. ಅವರು ಭಾರತೀಯ ಶಾಸ್ತ್ರೀಯ ಸಂಗೀತದ ಸೂಫಿಯಾನಾ ಘರಾನಾ ಶೈಲಿಗೆ ಪ್ರಸಿದ್ಧರಾಗಿದ್ದರು.
ಸೊಪೋರಿ ಅವರು ಪತ್ನಿ ಹಾಗೂ ಪುತ್ರರಾದ ಸೌರಭ್ ಮತ್ತು ಅಭಯ್ ಸೇರಿದಂತೆ ಕುಟುಂಬ ವರ್ಗವನ್ನು ಅಗಲಿದ್ದಾರೆ. ಭಜನ್ ಸೊಪೋರೆ ಅವರ ಇಬ್ಬರು ಪುತ್ರರು ಕೂಡಾ ಸಂತೂರ್ ವಾದಕರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಸಂತೂರ್ ವಾದಕ ಪಂಡಿತ್ ಭಜನ್ ಸೊಪೋರಿ ಅವರು 2004ರಲ್ಲಿ ಪದ್ಮಶ್ರೀ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿ ಪಡೆದಿದ್ದರು. 1992ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಜಮ್ಮು-ಕಾಶ್ಮಿರ ಸ್ಟೇಟ್ ಲೈಫ್ ಟೈಮ್ ಅಚಿವ್ ಮೆಂಟ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.