Advertisement

ಬಿಜೆಪಿ ಮಾಜಿ ನಗರಾಧ್ಯಕ್ಷ ಹೊಕ್ರಾಣಿ ಉಚ್ಚಾಟನೆ

06:39 PM Feb 05, 2021 | Team Udayavani |

ಬಾಗಲಕೋಟೆ: ಬಿಜೆಪಿ ನಗರ ಮಂಡಲ ಮಾಜಿ ಅಧ್ಯಕ್ಷ, ಬಿಟಿಡಿಎ ಮಾಜಿ ಸದಸ್ಯರೂ ಆಗಿರುವ ಯುವ ಮುಖಂಡ ಸಂತೋಷ  ಹೊಕ್ರಾಣಿ ಅವರನ್ನು ಪಕ್ಷದಿಂದ ಆರು ವರ್ಷಗಳ ಉಚ್ಛಾಟನೆ ಮಾಡಿದ್ದು, ಇದು ರಾಜಕೀಯ ಚರ್ಚೆ ಜೋರಾಗಿದೆ ಎನ್ನಲಾಗಿದೆ.

Advertisement

ಬಿಜೆಪಿ ನಗರ ಮಂಡಲ ಅಧ್ಯಕ್ಷ ಹಾಗೂ ಬಿಟಿಡಿಎ ಸದಸ್ಯರಾಗಿದ್ದ ವೇಳೆ ನಿತ್ಯ ಬಾಗಲಕೋಟೆ ಶಾಸಕ ಪಕ್ಕದಲ್ಲೇ ಇರುತ್ತಿದ್ದ ಸಂತೋಷ ಹೊಕ್ರಾಣಿ, ಈಚಿನ ದಿನಗಳಲ್ಲಿ ಅವರಿಂದ ದೂರವಾಗಿದ್ದಾರೆ. ಸಂಘ ಪರಿವಾರದ ಕಾರ್ಯಗಳಲ್ಲಿ ಸಕ್ರಿಯರಾಗಿರುವ ಹೊಕ್ರಾಣಿ ಪಕ್ಷದ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇದಕ್ಕೆ ರಾಜಕೀಯ ಕಾರಣಗಳು ಬೇರೆ ಬೇರೆಯಾಗಿದ್ದರೂ ಉಚ್ಛಾಟನೆ ಹಂತಕ್ಕೆ ಹೋಗಿರಲಿಲ್ಲ.

ಉಚ್ಛಾಟನೆಗೆ ಕಾರಣರಾದ್ರಾ ಎಚ್‌ಡಿಕೆ?: ಕಳೆದ ಜನವರಿ 31ರಂದು ಬಾಗಲಕೋಟೆಗೆ ಬಂದಿದ್ದ ಮಾಜಿ ಸಿಎಂ ಕುಮಾರಸ್ವಾಮಿ, ತಮ್ಮ ಪಕ್ಷ ಸಂಘಟನೆ-ಬಲವರ್ಧನೆ ವಿಷಯವಾಗಿ ಸಹಜವಾಗಿ ಕೆಲ ನಾಯಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಮುಧೋಳದ ಖ್ಯಾತ ವೈದ್ಯ ಸಡಾ|ರವಿ ಲಕ್ಷೆನ್ನವರ ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರ್ಪಡೆಗೊಂಡಿದ್ದಾರೆ. ಅದರ ಮುಂದುವರಿದ ಭಾಗವಾಗಿ ಬಾಗಲಕೋಟೆಯಲ್ಲಿ ಯುವ ನಾಯಕ ಎಂದೇ ಗುರುತಿಸಿಕೊಂಡಿರುವ ಸಂತೋಷ ಹೊಕ್ರಾಣಿ ಅವರನ್ನೂ ಸೆಳೆಯುವ ಪ್ರಯತ್ನ ಮಾಡಿದ್ದು, ನೇರವಾಗಿ ಅವರ ಮನೆಗೆ ಭೇಟಿ ನೀಡಿ ಆಹ್ವಾನ ಕೂಡ ನೀಡಿದ್ದಾರೆ.

 ಇದನ್ನೂ ಓದಿ:156 ಮಂದಿ ರೌಡಿಶೀಟರ್‌ಗಳ ಪರೇಡ್‌

ಚುನಾವಣೆ ಇನ್ನೂ ಎರಡು ವರ್ಷವಿದೆ. ನಾನು ಬಿಜೆಪಿ ಪಕ್ಷದಲ್ಲಿದ್ದೇನೆ. ಇಲ್ಲಿಯೇ ಟಿಕೆಟ್‌ ಕೇಳುತ್ತೇನೆ. ಪಕ್ಷದ ಹಿರಿಯರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ನೋಡೋಣ. ಸದ್ಯಕ್ಕೆ ಯಾವುದೇ ರಾಜಕೀಯ ನಿರ್ಧಾರ ಕೈಗೊಳ್ಳುವುದಿಲ್ಲ. ಜೆಡಿಎಸ್‌ ಸೇರ್ಪಡೆಯೂ ಸದ್ಯಕ್ಕೆ ಆಗುತ್ತಿಲ್ಲ. ಮುಂದಿನ ಬೆಳವಣಿಗೆ ನೋಡೋಣ ಎಂದು ಹೊಕ್ರಾಣಿ ಹೇಳಿಕೊಂಡಿದ್ದರು.

Advertisement

ಅವರ ಮನೆಗೆ ಕುಮಾರಸ್ವಾಮಿ ಭೇಟಿ ನೀಡಿದ ನಾಲ್ಕೇ ದಿನಗಳಲ್ಲಿ ಉಚ್ಛಾಟನೆ ಮಾಡಿದ್ದು, ಇದೇ ಕಾರಣಕ್ಕೆ ಹೊಕ್ರಾಣಿ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಯಿತಾ ? ಬೇರೆ ಕಾರಣಗಳಿವೆಯಾ ? ಎಂಬ ಚರ್ಚೆ ನಡೆಯುತ್ತಿದೆ.

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಉಚ್ಛಾಟನೆ ; ಅವರಾದಿ

ಬಾಗಲಕೋಟೆ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯ ಸಂತೋಷ ಹೊಕ್ರಾಣಿ ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದರಿಂದ ಪಕ್ಷದ ಜಿಲ್ಲಾ ಅಧ್ಯಕ್ಷ ಎಸ್‌.ಟಿ. ಪಾಟೀಲರ ಸೂಚನೆ ಮೇರೆಗೆ ಉಚ್ಛಾಟನೆ ಮಾಡಲಾಗಿದೆ ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ಬಸವರಾಜ ಅವರಾದಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಂತೋಷ ಹೊಕ್ರಾಣಿ ಕಳೆದ 4-5 ವರ್ಷಗಳಿಂದ ಪಕ್ಷ ಯಾವುದೇ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿಲ್ಲ. ಅಲ್ಲದೇ ಅವರಿಗೆ ಪಕ್ಷದಲ್ಲಿ ಯಾವುದೇ ಪದಾಧಿಕಾರಿ ಜವಾಬ್ದಾರಿ ಇಲ್ಲ. ಪಕ್ಷದ ಹಿರಿಯರ ಮತ್ತು ವ್ಯವಸ್ಥೆ ವಿರುದ್ಧ ಗುಂಪು ಕಟ್ಟಿಕೊಂಡು ಬಾಗಲಕೋಟೆ ಶಾಸಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೆಲ ಹಿಂಬಾಲಕರಿಂದ ಪೋಸ್ಟ್‌ ಮಾಡಿಸುತ್ತಿದ್ದಾರೆ. ಇದರಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟು ಮಾಡುತ್ತಿರುವುದರಿಂದ ಇತರೆ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಕಳೆದ ಜ.31ರಂದು ಜಾತ್ಯತೀತ ಜನತಾಳದ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಕುಮಾರಸ್ವಾಮಿ ಅವರು ಪಕ್ಷದ ಸಂಘಟನೆಯ ಸಮಾವೇಶಕ್ಕೆ ಆಗಮಿಸಿದ್ದ ವೇಳೆ, ಹೊಕ್ರಾಣಿ ಅವರ ಮನೆಗೆ ಭೇಟಿ ನೀಡಿದ್ದಾರೆ. ಆ ಸಮಯದಲ್ಲಿ ಜೆಡಿಎಸ್‌ಗೆ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಕಾರಣ ಅವರು ಪಕ್ಷದಲ್ಲಿ ಮುಂದುವರಿದರೆ ಕಾರ್ಯಕರ್ತರನ್ನು ದಾರಿ ತಪ್ಪಿಸಿ, ಗೊಂದಲವುಂಟು ಮಾಡುವ ಸಾಧ್ಯತೆ ಇರುವುದರಿಂದ ಸಂತೋಷ ಹೊಕ್ರಾಣಿ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ನಗರ ಮಂಡಲ ಅಧ್ಯಕ್ಷ ಬಸವರಾಜ ಅವರಾದಿ ಉಚ್ಛಾಟಿಸಿದ್ದಾರೆಂದು ಮಾಧ್ಯಮ ಪ್ರಮುಖ ಸಂಗಮೇಶ ಹಿತ್ತಲಮನಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next