Advertisement

Santhekatte: ಪರ್ಯಾಯ ರಸ್ತೆಯೂ ಸಮಸ್ಯೆಗಳ ಆಗರ

03:52 PM Oct 14, 2024 | Team Udayavani |

ಉಡುಪಿ: ಸಂತಕಟ್ಟೆಯ ಓವರ್‌ಪಾಸ್‌ ಕಾಮಗಾರಿಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವುದೇ ಯಮಯಾತನೆಯಾಗಿದೆ. ಇದರ ನಡುವೆ ಸ್ಥಳೀಯರ ಸಂಚಾರಕ್ಕಾಗಿ ರೂಪಿಸಿರುವ ಪರ್ಯಾಯ ರಸ್ತೆಯೂ ಸಮಸ್ಯೆಯ ಆಗರವಾಗಿದೆ.

Advertisement

ಉಡುಪಿಯಿಂದ ಬ್ರಹ್ಮಾವರ ಕಡೆ ಹೋಗು ವವರಿಗೆ ಹಾಗೂ ನೇಜಾರು, ಕೆಮ್ಮಣ್ಣು, ಮಲ್ಪೆ, ಹೂಡೆ ಮೊದಲಾದ ಭಾಗದವರು ಕಲ್ಯಾಣಪುರ ಮೂಲಕವಾಗಿ ಬ್ರಹ್ಮಾವರ ಕಡೆಗೆ ಹೋಗಲು ಪರ್ಯಾಯ ರಸ್ತೆಯೊಂದನ್ನು ಸೂಚಿಸಲಾಗಿದೆ. ಆದರೆ ಆ ರಸ್ತೆ ಮಾತ್ರ ಸಂಚಾರ ಯೋಗ್ಯವಾಗಿಲ್ಲ. ಅಷ್ಟು ಮಾತ್ರವಲ್ಲದೆ ರವಿವಾರ ಸಂತೆ ಮಧ್ಯದಲ್ಲೇ ಸಂಚಾರ ಮಾಡಬೇಕಾದ ಸ್ಥಿತಿಯೂ ಇದೆ.

ಕಲ್ಯಾಣಪುರದಿಂದ ಸಂತೆ ಮಾರುಕಟ್ಟೆ ಪ್ರಾಂಗಣದ ಸಮೀಪದಲ್ಲೇ ಸಂಚಾರಿ ಇಳಿಜಾರಿನ ರಸ್ತೆಯಲ್ಲಿ ಹೆದ್ದಾರಿಗೆ ಸಂಪರ್ಕಿಸಬೇಕಾಗಿದೆ. ಸ್ಥಳೀಯರಿಗೆ ಈ ರಸ್ತೆ ಬಿಟ್ಟು ಬೇರೆ ಮಾರ್ಗವಿಲ್ಲ. ಉಡುಪಿಯಿಂದ ಬ್ರಹ್ಮಾವರಕ್ಕೆ ಹೋಗುವ ಸರ್ವಿಸ್‌ ರಸ್ತೆಯಲ್ಲಿ ಸಂತೆಕಟೆಯಿಂದ ವಾಪಸ್‌ ಬಂದು ರೋಬೋಸಾಫ್ಟ್ ಎದುರುಗಡೆಯಲ್ಲಿ ಎಡಕ್ಕೆ ತಿರುವು ಪಡೆದು ರಾ.ಹೆ.ಗೆ ಬಂದು ಓವರ್‌ಪಾಸ್‌ ಕೆಳಗಡೆ ಗುಂಡಿಯ ಮೂಲಕವೇ ಬ್ರಹ್ಮಾವರದ ಕಡೆಗೆ ಸಾಗಬೇಕಾಗಿದೆ.

ಪ್ರತೀ ರವಿವಾರ ಸಂತೆಕಟ್ಟೆಯಲ್ಲಿ ಸಂತೆ ನಡೆಯುತ್ತದೆ. ಇದೀಗ ಓವರ್‌ಪಾಸ್‌ ಕಾಮಗಾರಿ ನಡೆಯುತ್ತಿರುವುದರಿಂದ ಸಂತೆಕಟ್ಟೆ ಸಂತೆ ಪ್ರಾಂಗಣದ ರಸ್ತೆಯನ್ನು ವಾಹನ ಸಂಚಾರಕ್ಕೆ ಪರ್ಯಾಯ ರಸ್ತೆಯಾಗಿ ಗುರುತಿಸಿರುವುದರಿಂದ ಬಹುತೇಕ ಸ್ಥಳೀಯ ವಾಹನಗಳು ಇದೇ ಮಾರ್ಗದಲ್ಲಿ ಸಂಚಾರ ಮಾಡುತ್ತಿವೆ. ರವಿವಾರ ಸಂತೆ ಇರುವುದರಿಂದ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೂ ಟ್ರಾಫಿಕ್‌ ಜಾಮ್‌ ಆಗಿರುತ್ತದೆ. ಮಾರುಕಟ್ಟೆ ಪ್ರಾಂಗಣ ಹೊರತುಪಡಿಸಿ ರಸ್ತೆ ಬದಿಯಲ್ಲೂ ಹಣ್ಣು ತರಕಾರಿ ಸಹಿತ ಬಗೆಬಗೆಯ ವಸ್ತುಗಳನ್ನು ಇಟ್ಟು ಮಾರಾಟ ಮಾಡಲಾಗುತ್ತದೆ. ನಿರಂತರ ವಾಹನ ಸಂಚಾರವೂ ನಡೆಯುತ್ತಿರುವುದರಿಂದ ಸಂತೆಗೆ ಹೋಗುವವರಿಗೂ ಮತ್ತು ವಾಹನ ಸವಾರರಿಗೂ ಸಮಸ್ಯೆಯಾಗುತ್ತಿದೆ.

Advertisement

ಅಪಾಯಕಾರಿ ಇಳಿಜಾರು, ಹೊಂಡ-ಗುಂಡಿ!
ಸಂತೆಕಟ್ಟೆ ಪ್ರಾಂಗಣದಿಂದ ಮುಂದೆ ರಸ್ತೆ ಸಂಪೂರ್ಣ ಇಳಿಜಾರು ಇರುವುದರಿಂದಲೇ ಅಪಾಯ ಹೆಚ್ಚಿದೆ. ಇದರ ಜತೆಗೆ ರಸ್ತೆ ಡಾಮರು ಅಥವಾ ಕಾಂಕ್ರೀಟ್‌ ಕೂಡ ಇಲ್ಲ. ಬೃಹದಾಕಾರದ ಗುಂಡಿಗಳು ಬಿದ್ದಿರುವುದರಿಂದ ಮಳೆ ಬಂದರೆ ಸಂಪೂರ್ಣ ಕೆಸರುಮಯವಾಗಿರುತ್ತದೆ. ಎರಡು ಇಕ್ಕೆಲಗಳಲ್ಲಿ ಹುಲ್ಲಿನ ಪೊದೆ ಬೆಳೆದಿರುವುದರಿಂದ ಆಯ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ.

ಕನಿಷ್ಠ ಸೌಲಭ್ಯ ಒದಗಿಸಿ: ಜನರ ಆಗ್ರಹ
ಪರ್ಯಾಯ ರಸ್ತೆ ಎಂದು ಸೂಚಿಸಿರುವುದರಿಂದ ಕನಿಷ್ಠ ವಾಹನ ಸಂಚಾರ ಯೋಗ್ಯವಾಗಿಸಬೇಕು. ಈ ರಸ್ತೆಯಲ್ಲಿ ವಾಹನ ಸಂಚಾರವೇ ಕಷ್ಟವಾಗಿದೆ. ಅಪಾಯ ಕಾರಿ ಗುಂಡಿಗಳು ಇವೆ. ತೇಪೆ ಹಚ್ಚಲು ವೆಟ್‌ಮಿಕ್ಸ್‌ ಹಾಕಿದ್ದರಿಂದ ದೊಡ್ಡ ದೊಡ್ಡ ಜೆಲ್ಲಿಕಲ್ಲು ಮೇಲೆದ್ದಿರುವುದರಿಂದ ವಾಹನ ಸವಾರರಿಗೆ ಸಮಸ್ಯೆ ಯಾಗುತ್ತಿದೆ. ಸ್ಥಳೀಯಾಡಳಿತ ಅಥವಾ ಸಂಬಂಧಪಟ್ಟ ಇಲಾಖೆಯ ಅಧಿಕಾರಿ ಗಳು ಕನಿಷ್ಠ ಸೌಲಭ್ಯ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ದಾರಿ ತಪ್ಪಿಸುವ ದಾರಿಗಳು!
ಸ್ಥಳೀಯರಿಗೆ ಪರ್ಯಾಯ ಮಾರ್ಗ ಗೊತ್ತಿರುವುದರಿಂದ ಸಂತಕೆಟ್ಟೆ ವೃತ್ತದಿಂದ ಸ್ವಲ್ಪ ಮುಂದೆ ಸಾಗಿ ವಾಟರ್‌ ಟ್ಯಾಂಕ್‌ ಸಮೀಪದಲ್ಲಿ ಬಲಕ್ಕೆ ತಿರುವು ಪಡೆದು ಹೆದ್ದಾರಿಗೆ ಹೋಗುತ್ತಿದ್ದಾರೆ. ಆದರೆ ಹೊಸಬರಿಗೆ ಈ ರಸ್ತೆ ಅರಿವಿಗೆ ಬರುವುದಿಲ್ಲ. ಸಂತೆಕಟ್ಟೆಯಿಂದ ಹಾಗೆಯೇ ಮುಂದೆ ಸಾಗಿ ಕಲ್ಯಾಣಪುರ ನದಿಯವರೆಗೂ ಹೋಗಿ ರಸ್ತೆ ಎಂಡ್‌ ಆದಲ್ಲಿ ಯುಟರ್ನ್ ಪಡೆದು ವಾಪಸ್‌ ಬರುವುದು ಹೆಚ್ಚಾಗುತ್ತಿದೆ. ಪರ್ಯಾಯ ಮಾರ್ಗದ ಸಣ್ಣ ಬೋರ್ಡ್‌ ಅಳವಡಿಸಿದ್ದರೂ ಸರಿಯಾಗಿ ಕಾಣುತ್ತಿಲ್ಲ. ಹೀಗಾಗಿ ಹೊಸಬರು ದಾರಿ ತಪ್ಪುವುದೇ ಹೆಚ್ಚಾಗಿದೆ.

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next