ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ 30 ವರ್ಷಗಳ ಜೈಲುವಾಸ ಅನುಭವಿಸಿ ಬಿಡುಗಡೆಗೊಂಡ ಅಪರಾಧಿಗಳಲ್ಲಿ ಒಬ್ಬರಾದ ಟಿ ಸುತೇಂದ್ರರಾಜ ಅಲಿಯಾಸ್ ಸಂತನ್ ಅವರು ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಏಳು ಆರೋಪಿಗಳಲ್ಲಿ ಶ್ರೀಲಂಕಾದ ಸಂತನ್ ಒಬ್ಬರು ಆಗಿದ್ದರು. ಸಂತನ್ ಅವರನ್ನು ತಿರುಚ್ಚಿ ಕೇಂದ್ರ ಕಾರಾಗೃಹದ ಸ್ಪೆಷಲ್ ಕ್ಯಾಂಪ್ನಲ್ಲಿ ಇರಿಸಲಾಗಿತ್ತು. ಈ ವೇಳೆ ಅನಾರೋಗ್ಯಕ್ಕೆ ಒಳಗಾಗಿದ್ದರು ಎನ್ನಲಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿ ಅವರಿಗೆ ಸೂಕ್ತ ಚಿಕಿತ್ಸೆಯಾ ಅವಶ್ಯಕತೆ ಇದ್ದುದರಿಂದ ಕಳೆದ ವಾರ, ಕೇಂದ್ರ ವಿದೇಶಾಂಗ ಸಚಿವಾಲಯದ ಅಡಿಯಲ್ಲಿರುವ ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿ (FRRO) 56 ವರ್ಷದ ಸಂತನ್‌ಗೆ ತುರ್ತು ಪ್ರಯಾಣದ ದಾಖಲೆಯನ್ನು ಒದಗಿಸಿ, ಕಳೆದ ವಾರ ಶ್ರೀಲಂಕಾಕ್ಕೆ ತ್ವರಿತ ವಾಪಸಾತಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. ಆದರೆ ಕಳೆದ ಸೋಮವಾರ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.
ಸಂತಾನ್ ಅವರ ವಕೀಲ ಪುಗಜೆಂಧಿ ದಿ ನ್ಯೂಸ್ ಮಿನಿಟ್‌ಗೆ ಮಾಹಿತಿ ನೀಡಿದ್ದು, “ಸಂತನ್ ನಿಧನರಾದಾಗ ಅವರ ಸಹೋದರ ಆಸ್ಪತ್ರೆಯಲ್ಲಿದ್ದರು. ಅಂತಿಮ ವಿಧಿವಿಧಾನಗಳಿಗಾಗಿ ಅವರ ಪಾರ್ಥಿವ ಶರೀರವನ್ನು ಶ್ರೀಲಂಕಾದಲ್ಲಿರುವ ಅವರ ಮನೆಗೆ ಕೊಂಡೊಯ್ಯಲಾಗುತ್ತದೆ ಎಂದು ಹೇಳಿದ್ದಾರೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೇ 1999 ರಲ್ಲಿ, ಮುರುಗನ್, ಸಂತನ್, ಪೆರಾರಿವಾಲನ್ ಮತ್ತು ನಳಿನಿ ಅವರ ಮರಣದಂಡನೆಯನ್ನು ದೃಢೀಕರಿಸುವಾಗ ಮತ್ತು ಪಯಸ್, ರವಿಚಂದ್ರನ್ ಮತ್ತು ಜಯಕುಮಾರ್ ಅವರ ಮರಣದಂಡನೆಯನ್ನು ಜೀವಾವಧಿಗೆ ಇಳಿಸುವ ಸಂದರ್ಭದಲ್ಲಿ ರಾಜೀವ್ ಗಾಂಧಿಯವರ ಹತ್ಯೆಯಲ್ಲಿ ಬಂಧಿತರಾದ 26 ಆರೋಪಿಗಳಲ್ಲಿ 19 ಮಂದಿಯನ್ನು ಸುಪ್ರೀಂ ಕೋರ್ಟ್ ಖುಲಾಸೆಗೊಳಿಸಿತು. ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಇ) ಜೊತೆ ಸಂಯೋಜಿತವಾಗಿರುವ ಆತ್ಮಹತ್ಯಾ ಬಾಂಬರ್ ನಡೆಸಿದ ರಾಜೀವ್ ಗಾಂಧಿಯವರ ಹತ್ಯೆಯ ನಂತರದ ವಾರಗಳು ಮತ್ತು ತಿಂಗಳುಗಳಲ್ಲಿ ಎಲ್ಲಾ ಏಳು ವ್ಯಕ್ತಿಗಳನ್ನು ಬಂಧಿಸಲಾಯಿತು.
ಇದಾದ ಬಳಿಕ ನವೆಂಬರ್ 2022 ರಲ್ಲಿ ಸಂತಾನ್ ಅವರನ್ನು ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿತು.
ಇದನ್ನೂ ಓದಿ: ಕೊನೇ ಕ್ಷಣದಲ್ಲಿ ಎಸ್‌ಪಿಗೆ ಕೈಕೊಟ್ಟ 7ಶಾಸಕರು, ಯುಪಿಯಲ್ಲಿ ಎಸ್ಪಿ ಮುಖ್ಯ ಸಚೇತಕ ರಾಜೀನಾಮೆ