Advertisement

ಸಂತಾನ ಭಾಗ್ಯಪ್ರದಾತ ಈ ಗೋಪಾಲಕೃಷ್ಣ

02:44 PM Jul 01, 2017 | |

  ಶ್ರೀಕೃಷ್ಣನಿಗೆ ಸಂಬಂಧಿಸಿದ ದೇವಾಲಯಗಳು ಅನೇಕವೆ. ಒಂದೊಂದು ಸನ್ನಿಧಿಗೂ ಪ್ರತ್ಯೇಕವಾದ ವೈಶಿಷ್ಟ್ಯಗಳಿವೆ. ಅದರಲ್ಲೂ ಅತಿ ಅಪರೂಪವಾದುದು ಸಂತಾನ ಗೋಪಾಲಕೃಷ್ಣ ಸನ್ನಿಧಿ. ಇಂಥ ದೇವಾಲಯಗಳು ಅನೇಕವಿಲ್ಲ. ಕರಾವಳಿಯಲ್ಲಿಯೂ ವಿರಳವಾಗಿವೆ. ಈ ವಿಶಿಷ್ಟವಾದ ಪುರಾತನ ದೇವಾಲಯ ಬೆಳ್ತಂಗಡಿಯಿಂದ ಆರು ಕಿಲೋಮೀಟರ್‌ ದೂರದ ಬದ್ಯಾರಿಗೆ ಸನಿಹದಲ್ಲಿರುವ ಕಂಡಿಗ ಎಂಬಲ್ಲಿದೆ. ಉಡುಪಿಯಿಂದ ಧರ್ಮಸ್ಥಳಕ್ಕೆ ಬರುವ ಯಾತ್ರಿಕರಿಗೆ ಕಾರ್ಕಳದಿಂದ ಬೆಳ್ತಂಗಡಿಗೆ ಸಮೀಪಿಸುವಾಗ ಅಪರೂಪದ ಈ ಸಂತಾನ ಗೋಪಾಲಕೃಷ್ಣ ದೇವಾಲಯವನ್ನು ನೋಡುವ ಅವಕಾಶ ಉಂಟು. 

Advertisement

    ಹೆಸರೇ ಹೇಳುವಂತೆ ಇದು ಮಕ್ಕಳಿಲ್ಲದವರು ಮೊರೆ ಇಟ್ಟರೆ ಕರುಣದಿಂದ ಮೊರೆಯನಾಲಿಸಿ ಸತ್ಸಂತಾನವನ್ನು ಅನುಗ್ರಹಿಸುವ ಸನ್ನಿಧಿ ಇದೆಂಬುದಕ್ಕೆ ಇಲ್ಲಿಗೆ ಹರಕೆ ಹೊತ್ತು ಮಕ್ಕಳನ್ನು ಪಡೆದ ನೂರಾರು ದಂಪತಿಗಳೇ ಸಾಕ್ಷಿ. ಔಷಧೋಪಚಾರಗಳಿಂದ, ವ್ರತಾದಿ ಆಚರಣೆಗಳಿಂದ ಫ‌ಲ ಸಿಗದವರಿಗೂ ಇಲ್ಲಿಗೆ ಹರಕೆ ಹೊತ್ತುಕೊಂಡ ಮೇಲೆ ಮನೆಯಲ್ಲಿ ಮಗುವಿನ ಕಿಲಕಿಲ ನಾದ, ಕಿವಿದುಂಬಿದ ಅಸಂಖ್ಯ ಉದಾಹರಣೆಗಳಿವೆ. ಇಲ್ಲಿಗೆ ಬಂದು ಪ್ರಾರ್ಥಿಸಿ ದೇವರಿಗೆ ಅರ್ಪಿಸಿದ ಬೆಣ್ಣೆ ಅಥವಾ ಹಾಲು ಪಾಯಸವನ್ನು ಸ್ವೀಕರಿಸಿದವರಿಗೆ ಸಂತಾನದ ಬೇಡಿಕೆ ನೆರವೇರುತ್ತದೆ. 

  ಹಾಗೆಂದು ಭಕ್ತರನ್ನು ಶೋಶಿಸುವ ಹರಕೆಯ ಪದ್ಧತಿಗಳು ಇಲ್ಲಿಲ್ಲ. ಹಾಲಿನಿಂದ ತಯಾರಿಸಿದ ಪಾಯಸದ ಸಮರ್ಪಣೆ ಈ ದೇವರಿಗೆ ಅತಿ ಮೆಚ್ಚಿನ ಹರಕೆ. ಅದಕ್ಕೆ ಇಲ್ಲಿ ಸ್ವೀಕರಿಸುವ ಮೊತ್ತ ಕೇವಲ ನೂರು ರೂಪಾಯಿ. ಹಾಗೆಯೇ ರಂಗಪೂಜೆ ಎಂಬ ವಿಶೇಷ ಸೇವೆಗೂ ಅವಕಾಶವಿದೆ. ರಾತ್ರಿ ದೇವರ ಮುಂದೆ ಬಾಳೆಲೆಗಳಲ್ಲಿ ಅನ್ನದ ಮುದ್ದೆ ಬಡಿಸಿ, ಅದರ ನಡುವೆ ತೆಂಗಿನಕಾಯಿ ಹೋಳಿನಲ್ಲಿ ದೀಪವನ್ನು ಇರಿಸಿ ವಾದ್ಯ, ಘಂಟಾನಿನಾದದಲ್ಲಿ ಸೇವೆಯನ್ನು ಅರ್ಪಿಸಲಾಗುತ್ತದೆ. ಭಕ್ತರು ಇಚ್ಛಿಸಿದರೆ ಅನ್ನ ಸಂತರ್ಪಣೆಯನ್ನೂ ಮಾಡಿಸಬಹುದು. ಅಲ್ಲದೆ ಸಂತಾನವಾದ ಬಳಿಕ ಮಗುವನ್ನು ದೇವರ ಮುಂದೆ ತಮಗಿಷ್ಟವಾದ ವಸ್ತುವಿನಲ್ಲಿ ತುಲಾಭಾರ ಮಾಡಿಸಬಹುದು. ಹೂವಿನ ಪೂಜೆ, ಶ್ರೀಕೃಷ್ಣಾಷ್ಟೋತ್ತರ ಸೇವೆಗಳೂ ಈ ದೇವರಿಗೆ ಪ್ರಿಯವಾದುದೇ. ಇಲ್ಲಿ ಗಣಪತಿ ಮತ್ತು ದುರ್ಗೆ ಸನ್ನಿಧಿಯೂ ಇದೆ. ಮದುವೆಯಾಗದೆ ಸಮಸ್ಯೆಗೊಳಗಾದವರಿಗೆ ದುರ್ಗಾ ಸನ್ನಿಧಿಗೆ ಹರಕೆ ಹೊತ್ತುಕೊಂಡ ಫ‌ಲವಾಗಿ ಜೀವನ ಸಂಗಾತಿ ಸುಲಭವಾಗಿ ದೊರಕಿದ ಉದಾಹರಣೆಗಳಿವೆ.

    ಸಂತಾನ ಗೋಪಾಲಕೃಷ್ಣನ ಸನ್ನಿಧಿ ಆರುನೂರು ವರ್ಷಗಳ ಹಿಂದಿನದೆನ್ನುತ್ತವೆ ದೇವಾಲಯದಲ್ಲಿರುವ ದಾಖಲೆಗಳು. ಮಕ್ಕಳಿಲ್ಲದ ದಂಪತಿಯ ಇಷ್ಟಾರ್ಥ ಸಿದ್ಧಿಯಾಗಲು ಕಾರಣನಾದ ಗೋಪಾಲಕೃಷ್ಣನ ಸೇವೆಗೆ ಎಲ್ಲರಿಗೂ ಅವಕಾಶ ಸಿಗಲೆಂದು ಈ ದೇವಾಲಯದ ನಿರ್ಮಾಣ ಮಾಡಿದರಂತೆ. ಗರ್ಭಗುಡಿಯಲ್ಲಿರುವ ವೇಣುವಿನೋದ ಗೋಪಾಲಕೃಷ್ಣನ ಶಿಲಾವಿಗ್ರಹ ನಯನ ಮನೋಹರವಾಗಿದೆ. ಜೀವಂತಕಳೆಯಿಂದ ಸುಶೋಭಿತವಾಗಿದೆ. ಇತ್ತೀಚಿನವರೆಗೂ ದೇವಾಲಯ ತೀರ ಶಿಥಿಲವಾಗಿತ್ತು. ಆದರೂ ಕಡಂಬು ನೂರಿತ್ತಾಯ ಮನೆತನದವರು ಪ್ರತಿಫ‌ಲಾಪೇಕ್ಷೆ ಇಲ್ಲದೆ ನೂರು ವರ್ಷಗಳಿಂದ ದಿನವೂ ಪೂಜಾದಿ ಕೈಂಕರ್ಯಗಳನ್ನು ನಡೆಸಿಕೊಂಡು ಬಂದಿದ್ದರು. ನಾಲ್ಕು ವರ್ಷಗಳ ಹಿಂದೆ ಊರ, ಪರವೂರ ಭಕ್ತಾದಿಗಳು ಸುಮಾರು 35 ಲಕ್ಷ ರೂ. ವೆಚ್ಚ ಮಾಡಿ ನೂತನ ಗರ್ಭಗುಡಿ, ಗೋಪುರ, ಪಾಕಶಾಲೆಗಳನ್ನು ನಿರ್ಮಿಸಿ ಪುನರ್‌ ಪ್ರತಿಷ್ಠಾಧಿಗಳನ್ನು ನೆರವೇರಿಸಿದ್ದಾರೆ.

    ನೂತನ ದೇವಾಲಯ ನಿರ್ಮಾಣ ಕೈಗೆತ್ತಿಕೊಂಡಾಗ ಧನಸಹಾಯ ಒದಗದೆ ನಿರ್ಮಾಣಕಾರ್ಯ ಕುಂಠಿತವಾಗಿತ್ತು. ಆಗ ದೇವಾಲಯದ ಜೋತಿಷಿಗಳಾದ ವೆಂಕಟರಮಣ ಮುಚ್ಚಿನ್ನಾಯರು ಜಾತಿಭೇದಲ್ಲದೆ ಇಲ್ಲಿ ಪ್ರತಿ ಶನಿವಾರ ಸಂಜೆ ಎಲ್ಲರೂ ಒಟ್ಟಾಗಿ ಭಜನೆ ಮಾಡಬೇಕು. ಅಲ್ಲದೆ ಪರಿಶುದ್ಧ ಮನಸ್ಕರಾಗಿ ಕೃಷ್ಣಾಷ್ಟೋತ್ತರವನ್ನು ಪಠಿಸಿದರೆ ಧನಾಗಮನವಾಗುತ್ತದೆಂಬ ಭಗವತ್‌ ಚಿಂತನೆಯನ್ನು ತಿಳಿಸಿದರು. ಈ ಪಠನೆಯನ್ನು ಆರಂಭಿಸಿದ ದಿನದಿಂದಲೇ ಹರಿದು ಬಂದ ಹಣದ ನೆರವು ಸಕಾಲಕ್ಕೆ ನಿರ್ಮಾಣಕಾರ್ಯಗಳನ್ನು ನೆರವೇರಿಸಲು ಬಲ ನೀಡಿತು. ಈಗಲೂ ಶನಿವಾರ ಇಲ್ಲಿ ಜಾತಿಭೇದಲ್ಲದೆ ಅಷ್ಟೋತ್ತರ ಪಠನೆ ನಡೆಯುತ್ತಿದೆ.

Advertisement

    ಇಲ್ಲಿ ಬೆಳಗ್ಗೆ ಮಾತ್ರ ಪೂಜೆ ನಡೆಯುತ್ತದೆ. ಹುಣ್ಣಿಮೆಯ ರಾತ್ರೆ ಸತ್ಯನಾರಾಯಣ ಪೂಜೆಯೊಂದಿಗೆ ರಂಗಪೂಜೆ ನಡೆಸಲಾಗುತ್ತಿದೆ. ವೃಶ್ಚಿಕ ಅಥವಾ ಮಕರಮಾಸದಲ್ಲಿ ವಾರ್ಷಿಕ ಜಾತ್ರೋತ್ಸವವು ವೈಭವದಿಂದ ನಡೆದುಕೊಂಡು ಬಂದಿದೆ. ಗೋಕುಲಾಷ್ಠಮಿಯಂದು 

ಶ್ರೀಕೃಷ್ಣ ಲೀಲೋತ್ಸವದೊಂದಿಗೆ ಪೂಜೆ ಮಾಡುವ ಸಂಪ್ರಾಯವಿದೆ. ಜಾತ್ರೆ ಸಂದರ್ಭ ಮಹಾರಂಗ ಪೂಜೆ, ಅನ್ನ ಸಂತರ್ಪಣೆಯಂತಹ ಸೇವೆ ನಡೆಸುವುದು ಇಷ್ಟಾರ್ಥ ಸಿದ್ಧಿಪ್ರದವೆನಿಸಿದೆ. ಅಪರೂಪವಾದ ಊದುವ ಬಲಮುರಿ ಶಂಖವೂ ಇದೇ ದೇಗುಲದಲ್ಲಿದೆ. ಈ ದೇವಳದ ಸುತ್ತಲೂ ನಾಟ್ಯವಾಡುವ ನೂರಾರು ನವಿಲುಗಳು ಶ್ರೀಕೃಷ್ಣನ ವ್ರಜಭೂಮಿಯನ್ನು ನೆನಪಿಗೆ ತರುತ್ತವೆ. ಅಲ್ಲದೆ ಗರ್ಭಗೃಹದ ಚಾವಣಿಯಲ್ಲಿ ಹೇರಳವಾಗಿ ನೀಲಿ ಪಾರಿವಾಳಗಳು ತಾವಾಗಿ ಬಂದು ನೆಲೆಸಿವೆ. ಇತ್ತೀಚೆಗೆ ಒಂದು ಬಿಳಿ ಪಾರಿವಾಳವೂ ಅವುಗಳ ಜೊತೆ ಸೇರಿಕೊಂಡಿದೆ. ದಿನವೂ ಅರ್ಚಕರು ಬಂದ ಗುಡಿಯ ಬಾಗಿಲು ತೆರೆದಾಗ ಅಂಗಣಕ್ಕೆ ಬಂದು ಕಾದು ಕುಳಿತು ಅಂಗಣದಲ್ಲಿ ಅರ್ಚಕರು ಹಾಕುವ ಬಲಿಯನ್ನು ತಿಂದುಹೋಗುವ ದೃಶ್ಯವನ್ನು ದಿನವೂ ಕಾಣಬಹುದು. 

  ಪಾರಿವಾಳಗಳನ್ನು ದತ್ತು ಸ್ವೀಕರಿಸಿ ಇಡೀ ವರ್ಷದ ಅವುಗಳ ಆಹಾರದವೆಚ್ಚವನ್ನು ಸೇವೆಯೆಂದು ನೀಡಲು ಇಲ್ಲಿ ಅವಕಾಶವಿದೆ. ಅದು ಕೂಡ ಪುಣ್ಯಪ್ರದವೆಂಬ ಭಾವನೆ ಇದೆ. ಹಾಗೆಯೇ ತಮ್ಮ ಜನ್ಮನಕ್ಷತ್ರದಂದು ವರ್ಷಕ್ಕೊಂದು ಶಾಶ್ವತ ಪೂಜೆಯನ್ನೂ ಮಾಡಿಸಬಹುದು. 

ಪ.ರಾಮಕೃಷ್ಣ ಶಾಸ್ತ್ರಿ 

Advertisement

Udayavani is now on Telegram. Click here to join our channel and stay updated with the latest news.

Next