ಮುಂಬಯಿ, ಆ. 25: ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠದ ಮುಂಬಯಿ ಶಾಖೆಯಾದ ಸಾಂತಾಕ್ರೂಜ್ ಪೂರ್ವ ಶ್ರೀ ಪೇಜಾವರ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಸಂಪ್ರದಾಯಬದ್ಧ ವಿಟ್ಲ ಪಿಂಡಿ ಉತ್ಸವವನ್ನು ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆ. 24ರಂದು ಅದ್ದೂರಿಯಾಗಿ ಆಚರಿಸಲಾಯಿತು.
ಉಡುಪಿ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಮತ್ತು ಕಿರಿಯ ಯತಿಶ್ರೀ ವಿಶ್ವಪ್ರಸನ್ನ ತೀರ್ಥರ ಮಾರ್ಗದರ್ಶನ ಮತ್ತು ಅನುಗ್ರಹದಿಂದ ನಡೆದ ಕಾರ್ಯಕ್ರಮದಲ್ಲಿ ಶುಕ್ರವಾರ ಸಂಜೆ ನಾರಾಯಣ ಸರಳಾಯ ಬಳಗದಿಂದ ದಾಸವಾಣಿ, ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಇವರಿಂದ ಹರಿಕಥಾ ಕಾಲಕ್ಷೇಪ ನಡೆಯಿತು. ತಡರಾತ್ರಿ ಮಠದ ಶಿಲಾಮಯ ಮಂದಿರದಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಕೃಷ್ಣಾಘ್ಯರ್ ಪ್ರದಾನ ಕಾರ್ಯಕ್ರಮ ನೆರವೇರಿತು. ವಿದ್ವಾನ್ ಆದಿತ್ಯ ಕಾರಂತ ಮಹಾಪೂಜೆ, ಮಂಗಳಾರತಿ ನೆರವೇರಿಸಿ ಪ್ರಸಾದ ವಿತರಿಸಿದರು.
ಆ. 24ರಂದು ಮಠಕ್ಕಾಗಮಿಸಿದ ಶ್ರೀ ಕೃಷ್ಣ ಭಕ್ತರು ವಿವಿಧ ಪೂಜಾದಿಗಳಲ್ಲಿ ಪಾಲ್ಗೊಂಡು ಶ್ರೀ ಕೃಷ್ಣ ದೇವರನ್ನು ಆರಾಧಿಸಿದರು. ಸಂಜೆ ಮಠದಿಂದ ಪ್ರಭಾತ್ ಕಾಲೊನಿ ಮೂಲಕ ದಿನೇಶ್ ವಿ. ಕೋಟ್ಯಾನ್ ಜೆರಿಮೆರಿ ತಂಡದ ಸಾಕ್ಸೋಫೋನ್, ವಾದ್ಯ, ಬ್ಯಾಂಡು ಚೆಂಡೆಗಳ ನೀನಾದ, ಗೊಂಬೆಯಾಟ, ವಿವಿಧ ವೇಷಭೂಷಣ, ವೈವಿಧ್ಯಗಳೊಂದಿಗೆ ಭವ್ಯ ಶೋಭಾಯಾತ್ರೆಗೈದು ಶ್ರೀಕೃಷ್ಣ ವಿಟ್ಲ ಪಿಂಡಿ ಉತ್ಸವ ಆಚರಿಸಲಾಯಿತು. ವಿದ್ವಾನ್ ವಿಷ್ಣುಮೂರ್ತಿ ಅಡಿಗ ಬೊರಿವಲಿ ಉತ್ಸವ ಬಲಿಯೊಂದಿಗೆ ಕೃಷ್ಣರಥೋತ್ಸವ ನೆರವೇರಿಸಿದರು. ಪೇಜಾವರ ಮಠದ ಮಧ್ವೇಶ ಭಜನಾ ಮಂಡಳಿಯಿಂದ ಭಜನೆ ಮತ್ತು ಗಣೇಶ್ ಎರ್ಮಾಳ್ ಬಳಗದಿಂದ ಗಾನಸುಧೆ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಐಐಟಿಸಿ ಎಸ್. ಕೆ. ಉರ್ವಾಳ್ ಮತ್ತು ಪ್ರಫುಲ್ಲಾ ಎಸ್.ಉರ್ವಾಳ್, ಬಿ. ಆರ್ ರೆಸ್ಟೋರೆಂಟ್ ಹೊಟೇಲ್ ಸಮೂಹದ ಬಿ. ಆರ್. ಶೆಟ್ಟಿ ಮತ್ತು ಚಂಚಲಾ ಆರ್. ಶೆಟ್ಟಿ ಪರಿವಾರದ ಪ್ರಾಯೋಜಕತ್ವದಲ್ಲಿ ಸಂಗೀತನಿಧಿ ವಿದ್ಯಾಭೂಷಣ ಬಳಗದಿಂದ ದಾಸವಾಣಿ ಭಕ್ತಿಸಂಗೀತ ಕಾರ್ಯಕ್ರಮ ನಡೆಯಿತು. ಮೃದಂಗದಲ್ಲಿ ನಿಕ್ಷಿತ್ ಪುತ್ತೂರು, ತಬಲಾದಲ್ಲಿ ಸೌರಭ್ ಕರಡೀಕರ್, ವಾಯೋಲಿನ್‌ನಲ್ಲಿ ಪ್ರದೇಶಾ ಆಚಾರ್ಯ ಸಹಕರಿಸಿದರು. ಪೂರ್ಣಪ್ರಜ್ಞಾ ವಿದ್ಯಾಪೀಠ ಪ್ರತಿಷ್ಠಾನ ಹಾಗೂ ಪೇಜಾವರ ಮಠ ಮುಂಬಯಿ ವತಿಯಿಂದ ಶ್ರೀ ಕೃಷ್ಣಲೀಲೋತ್ಸವ, ಶ್ರೀ ಕೃಷ್ಣವೇಷ ಸ್ಪರ್ಧೆ ನಡೆಯಿತು. ಸ್ಪರ್ಧಿಗಳಿಗೆ ವಿದ್ಯಾಭೂಷಣರು ಬಹುಮಾನ ವಿತರಿಸಿ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಪೂರ್ಣಪ್ರಜ್ಞಾ ವಿದ್ಯಾಪೀಠ ಪ್ರತಿಷ್ಠಾನದ ಡಾ| ಎ. ಎಸ್. ರಾವ್, ಡಾ| ಸುರೇಶ್ ಎಸ್.ರಾವ್ ಕಟೀಲು, ಬಿ. ಆರ್. ಗುರುಮೂರ್ತಿ, ಅವಿನಾಶ್ ಶಾಸ್ತ್ರಿ, ಉದ್ಯಮಿ ಬಿ. ಆರ್. ಶೆಟ್ಟಿ, ಐಐಟಿಸಿ ನಿರ್ದೇಶಕ ವಿಕ್ರಾಂತ್ ಉರ್ವಾಲ್, ಸಂಜಯ್ ಮಿಸ್ತ್ರಿ, ರವಿ ಸುವರ್ಣ, ಅನೂಪ್ ಶೆಟ್ಟಿ, ಪೇಜಾವರ ಮಠ ಮುಂಬಯಿ ಶಾಖೆಯ ಪ್ರಬಂಧಕರುಗಳಾದ ಪ್ರಕಾಶ ಆಚಾರ್ಯ ರಾಮಕುಂಜ, ಡಾ| ರಾಮದಾಸ ಉಪಾಧ್ಯಾಯ ರೆಂಜಾಳ, ಹರಿ ಭಟ್ ಪುತ್ತಿಗೆ, ನಿರಂಜನ್ ಗೋಗೆr, ವಾಸುದೇವ ಉಡುಪ, ವಿದ್ವಾನ್ ಅರವಿಂದ ಬನ್ನಿಂತ್ತಾಯ, ಸುನಂದಾ ಉಪಾಧ್ಯಾಯ, ಆರ್. ಎಲ್. ಭಟ್, ಶೇಖರ್ ಜೆ. ಸಾಲ್ಯಾನ್, ಸುರೇಂದ್ರ ಕುಮಾರ್ ಹೆಗ್ಡೆ, ಗೀತಾ ಆರ್. ಭಟ್, ಮುಕುಂದ ಬೈತ್ತಮಂಗಳ್ಕರ್, ವಿಷ್ಣುಮೂರ್ತಿ ಸಾಲಿ, ವಿದ್ವಾನ್ ಅರವಿಂದ ಬನ್ನಿಂತ್ತಾಯ, ಸುಧೀರ್ ಆರ್. ಎಲ್. ಭಟ್ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು. ರಾತ್ರಿ ಶ್ರೀ ಕೃಷ್ಣ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಸಾವಿರಾರು ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್