ಕೋಡಿಕಲ್: ಸಂಸ್ಕೃತ ಅತ್ಯಂತ ಪ್ರಾಚೀನ ಭಾಷೆ. ರಾಮಾಯಣ, ಮಹಾಭಾರತ, ವೇದ, ಆಯುರ್ವೇದ, ಶಾಸ್ತ್ರ, ಗ್ರಂಥಗಳು ಎಲ್ಲ ಸಂಸ್ಕೃತ ಭಾಷೆ ಯಲ್ಲೇ ಬರೆಯಲ್ಪಟ್ಟಿವೆ. ಇದನ್ನು ಮತ್ತಷ್ಟು ಶ್ರೀಮಂತಗೊಳಿಸಬೇಕಿದೆ ಎಂದು ಎಕ್ಸ್ ಪರ್ಟ್ ಕಾಲೇಜಿನ ಪ್ರಾಧ್ಯಾಪಕ ಬಾಲ ಕೃಷ್ಣ ಭಟ್ ಹೇಳಿದರು.
ಜಿಎಸ್‌ಬಿ ಸಭಾ ಕೋಡಿಕಲ್‌ನ ಶ್ರೀ ವೀರ ವೆಂಕಟೇಶ ಭಜನ ಮಂದಿರದಲ್ಲಿ ಆಯೋಜಿಸಿರುವ ಹತ್ತು ದಿನಗಳ ಪರ್ಯಂತ ನಡೆದ ಉಚಿತ ಸಂಸ್ಕೃತ ಸಂಭಾಷಣೆ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.
ಧರ್ಮ ನಮ್ಮ ಜೀವನದಲ್ಲಿ ಸಮ್ಮಿಲಿತಗೊಂಡಿದೆ. ಭಾರತ ಅತ್ಯಂತ ಶ್ರೀಮಂತ ರಾಷ್ಟ್ರ. ಇದರ ಕೀರ್ತಿ ಪ್ರಪಂಚದ ದಶ ದಿಕ್ಕುಗಳಲ್ಲಿ ಪಸರಿಸಿದೆ. ಬ್ರಿಟಿಷರು ಭಾರತಕ್ಕೆ ಲಗ್ಗೆಯಿಟ್ಟು, ಭಾರತದ ಜೀವಾಳವಾದ ಶಿಕ್ಷಣ ಪದ್ಧತಿ,ಸಂಸ್ಕೃತ ಭಾಷೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಧ್ವಂಸಗೊಳಿಸಿದಲ್ಲಿ ಮಾತ್ರ ಭಾರತವನ್ನು ಸುಲಭವಾಗಿ ಮಣಿಸಬಹುದು ಎಂದರಿತು ಭಾರತದಲ್ಲಿ ಬಲಿಷ್ಠವಾಗಿ ಬೇರೂರಿದ ವ್ಯವಸ್ಥೆಯನ್ನು ನಾಶಗೊಳಿಸಿ ದುರ್ಮಾರ್ಗ ದಿಂದ ಭಾರತದ ಸಂಪತ್ತನ್ನು ಕೊಳ್ಳೆ ಹೊಡೆದರು ಎಂದರು.
ಅರಿವು ಮೂಡಿಸಿ
ವಿಶ್ವಾದ್ಯಂತ ಯೋಗದ ಅರಿವು ಮೂಡಿಸಿರುವುದು ಭಾರತ. ಪ್ರಪಂಚದಲ್ಲೇ ವಿಜಯನಗರ ಸಾಮ್ರಾಜ್ಯ ಸುವರ್ಣ ಯುಗವನ್ನು ಕಂಡು ಸುಸಂಸ್ಕೃತ ರಾಜ್ಯವಾಗಿ, ಯು ಧಿಷ್ಠಿರನ ಆಳ್ವಿಕೆಯಲ್ಲಿ ಧರ್ಮ ಯುಗವಾಗಿತ್ತು. ಹೀಗೆ ಭಾರತ ಸರ್ವಶ್ರೇಷ್ಠ ಸಂಸ್ಕೃತಿ, ಸಾಹಿತ್ಯದ ಬೀಡಾಗಿ ಸಾûಾತ್ ಭಗವಾನ್ ಮರ್ಯಾದಾ ಪುರುಷೋತ್ತಮನಾಳಿದ ಧರ್ಮ ಸಾಮ್ರಾಜ್ಯವಾಗಿತ್ತು. ಸಂಸ್ಕೃತ ಜೀವನ ಭಾಷೆಯಾಗಿತ್ತು. ಅಂತಹ ಶ್ರೇಷ್ಠ ಸಂಸ್ಕೃತ ಸಾಂಸ್ಕೃತಿಕ ಭವ್ಯ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯ ಇಂತಹ ಶಿಬಿರಗಳಿಂದ ಆಗಬೇಕಾಗಿದೆ. ಎಲ್ಲರಲ್ಲೂ ಈ ಬಗ್ಗೆ ಅರಿವು ಮೂಡಿಸುವ ಕೆಲಸ ನಡೆಯಲಿ ಎಂದರು.
ವೇಣು ಮಾಧುರಿ, ಸವಿತಾ ನಾಯರ್, ನಿತ್ಯಾನಂದ ಭಟ್ ಶಿಬಿರದ ಅನುಭವ ಕಥನವನ್ನು ಸಭೆಯ ಮುಂದಿಟ್ಟರು. ನಂದರಾಜ್, ಆಶಾ ಕುಮಾರಿ, ಗೀತಾ ಕಾಮತ್, ಅಭಿಷೇಕ್, ಅಪೇûಾ, ಹೇಮಂತ್ ತಾವು ಶಿಬಿರದಲ್ಲಿ ಕಲಿತು ಜ್ಞಾನಾರ್ಜನೆಗೈದ ಸಂಭಾಷಣೆ ಸಾಹಿತ್ಯವನ್ನು ಅಭಿವ್ಯಕ್ತಗೊಳಿಸಿದರು. ಸಭಾದ ಉಪಾಧ್ಯಕ್ಷ ಆರ್.ಎಂ. ಪ್ರಭು, ಪಿ ಸುಧಾಕರ್ ಕಾಮತ್ ಉಪಸ್ಥಿತರಿದ್ದು ಶುಭ ಹಾರೈಸಿದರು.ಸಭಾದ ಅಧ್ಯಕ್ಷ ಎಸ್. ಗಣೇಶ್ ಕಾಮತ್ ಸಂಸ್ಕೃತದಲ್ಲೇ ಸ್ವಾಗತಿಸಿದರು.ಶಿಕ್ಷಕ ಗಜಾನನ ಬೋವಿಕಾನ ವಂದಿಸಿದರು.ಆದಿತ್ಯ ನಾಯಕ್ ನಿರೂಪಿಸಿದರು.
ಪರಂಪರೆ ಉಳಿಸಿ ಬೆಳೆಸಿ
ಮುಖ್ಯ ಅತಿಥಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿವೃತ್ತ ನಿರ್ದೇಶಕ ಎಂ.ಆರ್. ವಾಸುದೇವ ಮಾತನಾಡಿ, ಭಾರತದ ಶ್ರೇಷ್ಠ ಪರಂಪರೆಯನ್ನು ಉಳಿಸಿ ಬೆಳೆಸಿದ ಸಂಸ್ಕೃತ ಭಾಷೆಯು ಇಂತಹ ಶಿಬಿರಗಳಿಂದ ಉತ್ತುಂಗಕ್ಕೇರಿ ಸರ್ವವ್ಯಾಪಿಯಾಗಲೆಂದು ಶುಭ ಹಾರೈಸಿ ಸಂಘಟಕರನ್ನು ಅಭಿನಂದಿಸಿದರು.