Advertisement

ಇಂದಿನಿಂದ ಸಂಸತ್‌ ಬಜೆಟ್‌ ಅಧಿವೇಶನದ ಉತ್ತರಾರ್ಧ: ಏ.6ರವರೆಗೆ ನಡೆಯಲಿದೆ ಕಲಾಪ

09:07 PM Mar 12, 2023 | Team Udayavani |

ನವದೆಹಲಿ: ಒಂದು ತಿಂಗಳ ವಿರಾಮದ ಬಳಿಕ ಸಂಸತ್‌ನ ಬಜೆಟ್‌ ಅಧಿವೇಶನದ ಎರಡನೇ ಭಾಗ ಸೋಮವಾರ (ಮಾ.13)ದಿಂದ ಶುರುವಾಗಲಿದ್ದು, ಏ.6ರವರೆಗೆ ಮುಂದುವರಿಯಲಿದೆ. ಈ ಅವಧಿಯಲ್ಲಿ ಒಟ್ಟು 17 ಕಲಾಪಗಳು ಇರಲಿವೆ.

Advertisement

ತ್ರಿಪುರ, ನಾಗಾಲ್ಯಾಂಡ್‌, ಮೇಘಾಲಯ ವಿಧಾನಸಭೆ ಚುನಾವಣೆ ಫ‌ಲಿತಾಂಶ, ವಯನಾಡ್‌ ಸಂಸದ ರಾಹುಲ್‌ ಗಾಂಧಿ ಯು.ಕೆ.ಪ್ರವಾಸದ ವೇಳೆ ನೀಡಿರುವ ಹೇಳಿಕೆಗಳು, ರಾಜ್ಯಸಭೆ ಸಭಾಪತಿ, ಉಪರಾಷ್ಟ್ರಪತಿ ಜಗದೀಪ್‌ ಧನ್ಕರ್‌ ಅವರು ಕಾಂಗ್ರೆಸ್‌ ಮಾಜಿ ಅಧ್ಯಕ್ಷರ ವಿರುದ್ಧ ಮಾಡಿದ ಆರೋಪಗಳು ಮೇಲ್ಮನೆಯಲ್ಲಿ ಕೋಲಾಹಲಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಇದಲ್ಲದೆ ಪ್ರತಿಪಕ್ಷಗಳ 12 ಸಂಸದರ ವಿರುದ್ಧ ರಾಜ್ಯಸಭೆ ಸಭಾಪತಿ ಹಕ್ಕುಚ್ಯುತಿ ಗೊತ್ತುವಳಿ ಅನ್ವಯ ಕ್ರಮ ಕೈಗೊಳ್ಳಲು ಶಿಫಾರಸು ಮಾಡಿರುವುದು ಕೂಡ ಗದ್ದಲಕ್ಕೆ ನಾಂದಿ ಹಾಡಲಿದೆ.

ಅದಾನಿ ಗ್ರೂಪ್‌ ವಿರುದ್ಧ ಅಮೆರಿಕದ ಹಿಂಡನ್‌ಬರ್ಗ್‌ ರಿಸರ್ಚ್‌ ವರದಿ ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಗದ್ದಲ ಮುಂದುವರಿಸುವ ಸಾಧ್ಯತೆಗಳು ಇವೆ. ಆರೋಪಗಳ ವಿರುದ್ಧ ತನಿಖೆಗೆ ಸಂಸತ್‌ನ ಜಂಟಿ ಸಮಿತಿ ರಚಿಸಬೇಕು ಎಂದೂ ಒತ್ತಾಯಿಸಲಿವೆ.

ಈ ಅವಧಿಯಲ್ಲಿ ಫೆ.1ರಂದು ಮಂಡಿಸಿದ 2023-24ನೇ ಸಾಲಿನ ಬಜೆಟ್‌ಗೆ ಅನುಮೋದನೆ ಪಡೆಯಲಾಗುತ್ತದೆ. ಪ್ರಮುಖ ವಿಧೇಯಕಗಳಿಗೂ ಅಂಗೀಕಾರ ಪಡೆದುಕೊಳ್ಳಲಾಗುತ್ತದೆ.

ಇಂದು ಪ್ರತಿಪಕ್ಷಗಳ ಸಭೆ
ಅಧಿವೇಶನದಲ್ಲಿ ಪ್ರತಿಪಕ್ಷಗಳ ನಿಲುವಿನ ಬಗ್ಗೆ ಚರ್ಚೆ ನಡೆಸಲು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸೋಮವಾರ ಸಂಸತ್‌ ಭವನದಲ್ಲಿ ಸಭೆ ನಡೆಯಲಿದೆ. ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಪಕ್ಷದ ಸಂಸದೀಯ ಮಂಡಳಿ ಸಭೆಯೂ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next