Advertisement

ಸಿಹಿ ತುತ್ತು: ಸಿಹಿ ತುತ್ತು ಇನ್ನೊಂದು

05:01 AM Jan 09, 2019 | |

ಹಬ್ಬ-ಹರಿ ದಿನಗಳು ಬಂದಾಗ ಮನೆಯೊಡತಿಗೆ ಸಂಭ್ರಮದ ಜೊತೆಗೆ ಕೆಲಸವೂ ಹೆಚ್ಚುತ್ತದೆ. ಪ್ರತಿ ಹಬ್ಬದಲ್ಲಿ ಏನಾದರೂ ಹೊಸ ಅಡುಗೆಯನ್ನು ಮಾಡಬೇಕು ಎನ್ನುವ ತವಕ ಆಕೆಯದ್ದು. ಈ ಬಾರಿಯ ಸಂಕ್ರಾಂತಿಗೆ ಎಳ್ಳು-ಬೆಲ್ಲದ ಜೊತೆ ಏನು ಹೊಸತು ಮಾಡಬಹುದು ಎಂದು ಯೋಚಿಸುವ ಗೃಹಿಣಿಯರಿಗಾಗಿ ಕೆಲವು ರೆಸಿಪಿಗಳು ಇಲ್ಲಿವೆ.

Advertisement

1. ಸಿಹಿ ಕುಂಬಳಕಾಯಿ ಹಲ್ವ  
ಬೇಕಾಗುವ ಸಾಮಗ್ರಿ:
ಬೀಜರಹಿತ ಸಿಹಿ ಕುಂಬಳಕಾಯಿ ತುರಿ- 1ಕಪ್‌, ತುರಿದ ಉಂಡೆ ಬೆಲ್ಲದ ಪುಡಿ-  1/2 ಕಪ್‌ (ಸಿಹಿಯಾದ ತರಕಾರಿಯಾದ್ದರಿಂದ ಬೆಲ್ಲ ಕಡಿಮೆ ಸಾಕು) ದ್ರಾಕ್ಷಿ, ಗೋಡಂಬಿ, ಏಲಕ್ಕಿ ಪುಡಿ, ತುಪ್ಪ. 

 ಮಾಡುವ ವಿಧಾನ: ದಪ್ಪ ತಳದ ಪಾತ್ರೆಗೆ ತುಪ್ಪ ಹಾಕಿ, ದ್ರಾಕ್ಷಿ, ಗೋಡಂಬಿಯನ್ನು ಹುರಿದು ತೆಗೆದಿಟ್ಟುಕೊಳ್ಳಿ. ನಂತರ, ತುಪ್ಪದ ಜಿಡ್ಡಿರುವ ಆ ಪಾತ್ರೆಗೆ ಉಂಡೆ ಬೆಲ್ಲದ ಪುಡಿ ಹಾಗೂ ಏಲಕ್ಕಿ ಪುಡಿ ಹಾಕಿ ಬಿಸಿ ಮಾಡಿ. ಕುಂಬಳಕಾಯಿ ತುರಿಯನ್ನು ಬೆರೆಸಿ, ಸಣ್ಣ ಉರಿಯಲ್ಲಿ ಬೇಯಿಸಿ. ಸ್ವಲ್ಪ ಮೇಲು¤ಪ್ಪ ಹಾಕಿ ಮಗಚುತ್ತಿರಿ. ಆ ಮಿಶ್ರಣ ಪಾತ್ರೆಯ ತಳ ಬಿಟ್ಟರೆ, ಹಲ್ವ ಸಿದ್ಧವಾದಂತೆ. ತುಪ್ಪದ ಜಿಡ್ಡು ಕಾಣಿಸಿದ ಇನ್ನೊಂದು ಪಾತ್ರೆಗೆ ಈ ಮಿಶ್ರಣವನ್ನು ವರ್ಗಾಯಿಸಿ. ಹುರಿದ ದ್ರಾಕ್ಷಿ, ಗೋಡಂಬಿ ಸೇರಿಸಿದರೆ ಸ್ವಾದಿಷ್ಟ ಹಲ್ವ ಸವಿಯಲು ಸಿದ್ಧ. 

2. ಸಿಹಿ ಕುಂಬಳ ಮಿಠಾಯಿ 
ಬೇಕಾಗುವ ಸಾಮಗ್ರಿ:
ಬೀಜ ತೆಗೆದ ಸಿಹಿ ಕುಂಬಳಕಾಯಿ ತುರಿ- 1ಕಪ್‌, ತೆಂಗಿನ ತುರಿ- 1 ಕಪ್‌, ತುರಿದ ಉಂಡೆ ಬೆಲ್ಲದ ಪುಡಿ- 2 ಕಪ್‌, ತುಪ್ಪ, ಗೋಡಂಬಿ, ದ್ರಾಕ್ಷಿ. 

ಮಾಡುವ ವಿಧಾನ: ದಪ್ಪ ತಳದ ಪಾತ್ರೆಗೆ ಸ್ವಲ್ಪ ತುಪ್ಪ ಹಾಕಿ ಕರಗಿಸಿ, ಬೆಲ್ಲದ ಪುಡಿ ಹಾಕಿ ಒಂದು ಸುತ್ತು ಕೈಯಾಡಿಸಿ. ಬೆಲ್ಲ ಕರಗುತ್ತಲೇ, ಕುಂಬಳಕಾಯಿ ತುರಿ, ತೆಂಗಿನ ತುರಿಯನ್ನು ಒಟ್ಟಿಗೆ ಹಾಕಿ, ಸಣ್ಣ ಉರಿಯಲ್ಲಿ ಬೇಯಿಸಿ. ಅಗತ್ಯ ಎನ್ನಿಸಿದರೆ ಮೆಲು¤ಪ್ಪ ಹಾಕಿ. ಮಿಶ್ರಣಕ್ಕೆ ಹದ ಬರುತ್ತಿದ್ದಂತೆ ಉರಿ ಆರಿಸಿ. ಪೂರ್ತಿ ತಣಿಯುವ ಮುನ್ನ ಸಣ್ಣ ಸಣ್ಣ ಮಿಠಾಯಿಗಳನ್ನಾಗಿ ಕತ್ತರಿಸಿ, ಗೋಡಂಬಿಯಿಂದ ಅಲಂಕರಿಸಿ. 

Advertisement

3. ಮಿಶ್ರ ಧಾನ್ಯ ಪಾಯಸ 
ಬೇಕಾಗುವ ಸಾಮಗ್ರಿ:
ಕಡಲೆಬೇಳೆ- 1 ಕಪ್‌, ಹೆಸರುಬೇಳೆ- 1 ಕಪ್‌, ಅಕ್ಕಿ ನುಚ್ಚು- 1 ಕಪ್‌, ಗೋಧಿ ನುಚ್ಚು- 1 ಕಪ್‌, ಬೆಲ್ಲ (ನಿಮಗೆಷ್ಟು ಸಿಹಿ ಬೇಕೋ ಅಷ್ಟು), ಏಲಕ್ಕಿ ಪುಡಿ, ದ್ರಾಕ್ಷಿ, ಗೋಡಂಬಿ. 

ಮಾಡುವ ವಿಧಾನ: ಕಡಲೆಬೇಳೆ, ಹೆಸರುಬೇಳೆ, ಅಕ್ಕಿ ನುಚ್ಚು, ಗೋಧಿ ನುಚ್ಚನ್ನು ನೀರಿನಲ್ಲಿ ತೊಳೆದು, ಒಂದಕ್ಕೆ ಮೂರು  ಅಳತೆ  ನೀರು ಹಾಕಿ ಕುಕ್ಕರ್‌ನಲ್ಲಿ ಬೇಯಿಸಿಕೊಳ್ಳಿ. ದಪ್ಪ ತಳದ ಪಾತ್ರೆಗೆ ತುಪ್ಪ ಹಾಕಿ, ದ್ರಾಕ್ಷಿ, ಗೋಡಂಬಿಯನ್ನು ಹುರಿದು ತೆಗೆದಿಟ್ಟುಕೊಳ್ಳಿ. ಅದೇ ಪಾತ್ರೆಗೆ ಒಂದರಿಂದ ಒಂದೂವರೆ ಅಳತೆ ಬೆಲ್ಲವನ್ನು ಹಾಕಿ ಸಣ್ಣ ಉರಿಯಲ್ಲಿ ಕರಗಿಸಿ. ನಂತರ ಈಗಾಗಲೇ ಬೇಯಿಸಿಟ್ಟುಕೊಂಡ ಧಾನ್ಯಗಳ ಮಿಶ್ರಣವನ್ನು ಅದಕ್ಕೆ ಬೆರೆಸಿ ಸಣ್ಣ ಉರಿಯಲ್ಲಿ ಚೆನ್ನಾಗಿ ಕೈಯಾಡಿಸಿ. ಬೆಲ್ಲದಲ್ಲಿ ಒಂದು ಸುತ್ತು ಮಿಶ್ರಣ ಬೆರೆತ ನಂತರ ಏಲಕ್ಕಿ ಪುಡಿ ಹಾಕಿ ಉರಿ ಆರಿಸಿ. ಹುರಿದ ದ್ರಾಕ್ಷಿ, ಗೋಡಂಬಿ ಹಾಕಿ ಮುಚ್ಚಿಟ್ಟು ಹತ್ತು ನಿಮಿಷ ತಣಿಯಲು ಬಿಡಿ. ಈಗ ಅರೆ ಘನರೂಪಿ ಪಾಯಸ ಸವಿಯಲು ಸಿದ್ಧ. 

4. ಹೆಸರುಕಾಳು ಸಿಹಿ ಪೊಂಗಲ… 
ಬೇಕಾಗುವ ಸಾಮಗ್ರಿ:
ಅಕ್ಕಿ- 1 ಕಪ್‌, ಹೆಸರುಕಾಳು- 1 ಕಪ್‌, ಬೆಲ್ಲ-ರುಚಿಗೆ ತಕ್ಕಷ್ಟು (ಒಂದರಿಂದ ಒಂದೂವರೆ ಅಳತೆ), ಏಲಕ್ಕಿ, ದ್ರಾಕ್ಷಿ, ಗೋಡಂಬಿ, ಹಾಲು. 

ಮಾಡುವ ವಿಧಾನ: ಕುಕ್ಕರ್‌ನಲ್ಲಿ ಅಕ್ಕಿ, ಹೆಸರುಕಾಳು ಹಾಕಿ ಅವುಗಳ ಅಳತೆಯ ಆರರಷ್ಟು ನೀರು ಹಾಕಿ ಬೇಯಿಸಿ. ನಂತರ ದಪ್ಪ ತಳದ ಪಾತ್ರೆಯಲ್ಲಿ ಸ್ವಲ್ಪ ತುಪ್ಪ ಹಾಕಿ. ಕರಗಿದ ತುಪ್ಪಕ್ಕೆ ಬೆಲ್ಲ ಹಾಕಿ, ಅದರೊಂದಿಗೆ ಬೇಯಿಸಿಟ್ಟ ಮಿಶ್ರಣವನ್ನು ಹಾಕಿ ಸಣ್ಣ ಉರಿಯಲ್ಲಿ ಕುದಿಸಿ. ಬೆಲ್ಲ ಸಂಪೂರ್ಣ ಕರಗಿ ಮಿಶ್ರಣದೊಂದಿಗೆ ಹೊಂದಿಕೊಳ್ಳುತ್ತಲೇ, ಅರ್ಧ ಕಪ್‌ ಕಾಯಿಸಿ ಆರಿಸಿದ ಹಾಲು ಹಾಕಿ ಗೊಟಾಯಿಸಿ, ಉರಿ ಆರಿಸಿಬಿಡಿ. ಇದಕ್ಕೆ ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ ಸೇರಿಸಿದರೆ ಹೆಸರುಕಾಳು ಸಿಹಿಪೊಂಗಲ… ರೆಡಿ. 

-ಕೆ.ವಿ.ರಾಜಲಕ್ಷ್ಮಿ 

Advertisement

Udayavani is now on Telegram. Click here to join our channel and stay updated with the latest news.

Next