Advertisement

ಭೀಮಾ-ಕಾಗಿಣಾ ಸಂಗಮದಲ್ಲಿ ಸಂಕ್ರಾಂತಿ

04:38 PM Jan 15, 2021 | Team Udayavani |

ವಾಡಿ: ಸಮೀಪದ ಕುಂದನೂರು, ಯನಗುಂಟಿ ಹಾಗೂ ಹೊನಗುಂಟಿ ಗ್ರಾಮಗಳ ಮಧ್ಯದ ಭೀಮಾ ಮತ್ತು ಕಾಗಿಣಾ ನದಿಗಳ ಸಂಗಮ ತಟದಲ್ಲಿ ಎಂದಿನಂತೆ ಸಂಕ್ರಾಂತಿ ಸಡಗರ ಮನೆ ಮಾಡಿತ್ತು. ಚಿತ್ತಾಪುರ, ಶಹಾಬಾದ ಮತ್ತು ಜೇವರ್ಗಿ ತಾಲೂಕಿನ ವಿವಿಧ ಗ್ರಾಮಗಳ ಸಾವಿರಾರು ಜನರು ನದಿಯಲ್ಲಿ ಸೇರಿ ಪುಣ್ಯಸ್ನಾಗೈಯುವ ಮೂಲಕ ಸಂಗಮೇಶ್ವರನ ಕೃಪೆಗೆ ಪಾತ್ರರಾದರು.

Advertisement

ಹಬ್ಬದ ಬುತ್ತಿ ಹೊತ್ತು ಬಂದ ಮಹಿಳೆಯರು, ಯುವತಿಯರು, ಹಿರಿಯರು ನದಿ ದಡದಲ್ಲಿ ಬೀಡು ಬಿಟ್ಟು ಸಂಗಮಗೊಂಡ ಗಂಗೆಯ ಪಾತ್ರದಲ್ಲಿ ಸ್ನಾನ ಮಾಡಿದರು. ಸಂಕ್ರಾಂತಿಯ ವಿಶೇಷತೆಗಳಲ್ಲೊಂದಾದ ಎಳ್ಳು, ಅರಿಶಿಣ ಮಿಶ್ರಣದ ಹೊಳೆ ಸ್ನಾನ ಭಕ್ತಿಯ ಪ್ರತೀಕವಾಗಿತ್ತು. ಮನೆಯಿಂದ ತರಲಾಗಿದ್ದ ಬುತ್ತಿಯೊಳಗಿನ ಶೇಂಗಾ ಹೋಳಿಗೆ, ಸಜ್ಜೆ ರೊಟ್ಟಿ, ಎಣ್ಣೆ ಬದನೆಕಾಯಿ ಪಲ್ಲೆ, ಕಬ್ಬು, ಸುಲಿಗಾಯಿ, ಹಸಿ ತರಕಾರಿ ದಿನಿಸಿನ ಭೋಜನ ಮೃಷ್ಟಾನ್ನಕ್ಕೆ ಸಮವಾಗಿತ್ತು. ನದಿಯ ದಡದ ಮರಳಿನಲ್ಲಿ ಯುವಕರು ವಿವಿಧ ಆಟಗಳನ್ನಾಡಿ ಮನರಂಜನೆಯಲ್ಲಿ ತೊಡಗಿದ್ದು ಕಂಡುಬಂತು.

ನದಿ ದಂಡೆಯಲ್ಲಿರುವ ಸಂಗಮನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ನಿರಂತರ ಭಜನಾ ಕಾರ್ಯಕ್ರಮ ಜರುಗಿತು. ದೇವಸ್ಥಾನದ ಪ್ರಧಾನ ಅರ್ಚಕ ಮಲ್ಲೇಶಪ್ಪ ಹೂಗಾರ ಅವರು ಬಂದ ಭಕ್ತರಿಗೆ ಪ್ರಸಾದ ಸೇವೆ ಮಾಡಿದ್ದರು. ಮೂರು ತಾಲೂಕಿನ ಜನರು ಒಂದೆಡೆ ಸೇರಿ ಸಂಕ್ರಾಂತಿ ಆಚರಿಸಿದ್ದೇ ಇಲ್ಲಿನ ಮತ್ತೂಂದು ವಿಶೇಷ ಎನ್ನಬಹುದು.

ರೈತರೊಂದಿಗೆ ಶಾಸಕ ಪಾಟೀಲ ಸಂಕ್ರಮಣ ಆಚರಣೆ

ಫಜಲಪುರ: ಕೃಷಿ ಆಧಾರಿತ ಭಾರತದಲ್ಲಿ ರೈತರು ಆಚರಿಸುತ್ತಿರುವ ಹಬ್ಬಗಳು ತುಂಬಾ ವಿಶೇಷ. ಅವರ ಉತ್ಸಾಹ ಹೆಚ್ಚಾಗಲು ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ನೀಡಬೇಕು ಎಂದು ಶಾಸಕ ಎಂ.ವೈ. ಪಾಟೀಲ್‌ ಹೇಳಿದರು.

Advertisement

ತಾಲೂಕಿನ ಮಾಶಾಳ ಗ್ರಾಮದ ಹಿರಿಯ ಮುಖಂಡ ನಾನಾ ಸಾಹೇಬ ಅವರ ತೋಟದಲ್ಲಿ ರೈತರೊಂದಿಗೆ ಎಳ್ಳ ಅಮಾವಾಸ್ಯೆ, ಸಂಕ್ರಾಂತಿ ಹಬ್ಬ ಆಚರಿಸಿ ಮಾತನಾಡಿದ ಅವರು, ರೈತರ ಹಬ್ಬಗಳು ಸಂಭ್ರಮದಿಂದ ಕೂಡಲು ಅವರು ಬೆಳೆದ ಬೆಳೆಗಳಿಗೆ ಸರಕಾರ ಸೂಕ್ತ ಬೆಲೆ ನೀಡಿ ಖರೀದಿಸಬೇಕು. ಅವರ ಸಂಭ್ರಮ ಕೇವಲ ಹಬ್ಬಕ್ಕೆ ಸೀಮೀತವಾಗಿರಬಾರದು. ಪ್ರತಿಕ್ಷಣವೂ ಸರಕಾರಗಳು ರೈತರ ಹಿತಕಾಯಬೇಕು ಎಂದರು.

ಜಿಪಂ ಮಾಜಿ ಸದಸ್ಯರಾದ ಪ್ರಕಾಶ ಜಮಾದಾರ, ಸಿದ್ಧಾರ್ಥ ಬಸರಿಗಿಡ, ತಾಪಂ ಸದಸ್ಯ ರಾಜಕುಮಾರ ಬಬಲಾದ, ಪ್ರಧಾನ ಕಾರ್ಯದರ್ಶಿ ಶರಣು ಕುಂಬಾರ, ಮುಖಂಡರಾದ ನಾನಾಸಾಹೇಬ ಪೊಲೀಸ್‌ ಪಾಟೀಲ್‌, ಮಲ್ಲು ಕಿಣಗಿ, ಶರಣಗೌಡ ಉಡಚಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next