ಸಂಕೇತಿ ಮಹಿಳಾ ಸಮಾಜ ಟ್ರಸ್ಟ್ ಪ್ರತಿ ವರ್ಷದಂತೆ ಈ ಬಾರಿಯೂ ಸಂಕೇತಿ ಉತ್ಸವ ನಡೆಸುತ್ತಿದೆ. ಈ ವೀಕೆಂಡ್ 2 ದಿವಸ ಈ ಉತ್ಸವ ನಡೆಯಲಿದ್ದು, ಗಂಡಿ ಸೀರೆಯೊಂದಿಗೆ ಮಹಿಳೆಯರು ಕಾಣಿಸಿಕೊಳ್ಳಲಿದ್ದಾರೆ. ಸಂಕೇತಿ ಸಮುದಾಯದವರ ಪ್ರಮುಖ ಆಹಾರ ವೈಧ್ಯವಾದ ಚೋಮಾಯಿ (ಒತ್ತು ಶ್ಯಾವಿಗೆ) ಮತ್ತು ಕೊಳಕಟ್ಟೆ (ಖಾರದ ಕಡುಬು) ಉತ್ಸವದ ಪ್ರಮುಖ ಆಕರ್ಷಣೆಯಾಗಿರಲಿದೆ.
ಜನವರಿ 7ರಂದು ಬೆಳಿಗ್ಗೆ 9.30 ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಅಧ್ಯಕ್ಷೆ ಗಂಗಮ್ಮ ಕೇಶವಮೂರ್ತಿ ಅವರು ಅಧ್ಯಕ್ಷತೆ ವಹಿಸುವರು. ಹಿರಿಯ ಪತ್ರಕರ್ತೆ, ಲೇಖಕಿ ಡಾ.ಆರ್.ಪೂರ್ಣಿಮಾ ಮುಖ್ಯ ಅತಿಥಿಯಾಗಿರುವರು. ಡಾ.ರಮ್ಯಾ ಮೋಹನ್ ವಿಶೇಷ ಆಹ್ವಾನಿತರಾಗಿರುವರು.
ಸಂಕೇತಿಗಳು ಮೂಲತಃ ಹಾಸನ ಕಡೆಯವರು. ಇದೀಗ ರಾಜ್ಯದ ಎಲ್ಲೆಡೆ ಅವರು ವ್ಯಾಪಿಸಿಕೊಂಡಿದ್ದಾರೆ. ರುಚಿಕಟ್ಟಾಗಿ ಅಡುಗೆ ಮಾಡಿ ಅದರಲ್ಲೂ 2 ಅಥವಾ 3 ಬಗೆಯ ತಿಂಡಿಯನ್ನು ಮಾಡಿ ತಿನ್ನುವುದು ಅವರ ರೂಢಿ. ಹೀಗಾಗಿ ಸಂಕೇತಿಗಳು ನಡೆಸುವ ಉತ್ಸವ ಎಂದರೆ ಜನರ ಕಿವಿ ನಿಮಿರುತ್ತದೆ. ಚೋಮಾಯಿ, ಕೊಳಕಟ್ಟೆಯಷ್ಟೇ ಅಲ್ಲ, ಇನ್ನೂ ಅನೇಕ ಬಗೆಯ ತಿಂಡಿಗಳ ವೈವಿಧ್ಯವನ್ನು ಈ ಸಂಕೇತಿಗಳಲ್ಲಿ ಕಾಣಲು ಸಾಧ್ಯ.
ಸಂಕೇತಿ ಉತ್ಸವದಲ್ಲಿ ಬೆಳಿಗ್ಗೆ 9ರಿಂದ ರಾತ್ರಿ 8 ಗಂಟೆಯವರೆಗೆ ಕರಕುಶಲ ವಸ್ತುಗಳು, ಸೀರೆಗಳು, ಸಿದ್ಧ ಉಡುಪುಗಳು, ಗೃಹೋಪಯೋಗಿ ವಸ್ತುಗಳು, ಬಗೆ ಬಗೆಯ ತಿಂಡಿ ತಿನಿಸುಗಳ ಸಹಿತ ಅನೇಕ ಬಗೆಯ ವಸ್ತುಗಳ ಪ್ರದರ್ಶನ, ಮಾರಾಟ, ಸ್ಮರ್ಧಾತ್ಮಕ ಆಟಗಳು ನಡೆಯಲಿವೆ. 8ರಂದು ಬೆಳಿಗ್ಗೆ 11.30ಕ್ಕೆ ಸಾಂಪ್ರದಾಯಿಕ ಜಡೆ ಅಲಂಕಾರ ಸ್ಪರ್ಧೆ ನಡೆಯಲಿದೆ. ಇದರಲ್ಲಿ ಯಾರು ಬೇಕಾದರೂ ಭಾಗವಸಬಹುದು. ವಿಶೇಷವಾಗಿ ಮಕ್ಕಳ ಆಟದ ಅಂಗಳ ಸಿದ್ಧಪಡಿಸಲಾಗಿದೆ.
ಗಂಡಿ ಸೀರೆ ಉಟ್ಟುಕೊಂಡ ಸಂಕೇತಿ ಮಹಿಳೆಯರನ್ನು ನೋಡುವುದೇ ಒಂದು ವಿಶಿಷ್ಟ ಅನುಭವ. ರಾಜರ ಆಳ್ವಿಕೆ ಇದ್ದ ಹಿಂದಿನ ಕಾಲದಲ್ಲಿ ಯುದ್ಧಕ್ಕೂ ಮಹಿಳೆಯರು ಸಿದ್ಧವಾಗಬೇಕಿತ್ತಂತೆ. ಆಗ ಮಹಿಳೆಯ ಸೀರೆ ಯಾವ ಕಾರಣಕ್ಕೂ ಬಿಚ್ಚಿ ಹೋಗಬಾರದು ಎಂಬ ನೆಲೆಯಲ್ಲಿ ಗಂಡಿ ಸೀರೆ ಉಡುವ ಸಂಪ್ರದಾಯ ಬೆಳೆದುಬಂತಂತೆ. ಗಂಡಿ ಸೀರೆ ಉಡುವುದಕ್ಕೆ ಕನಿಷ್ಠ 9 ಗಜ ಉದ್ದದ ಸೀರೆ ಬೇಕು. ಈಗಿನ 6 ಗಜ ಉದ್ದದ ಸೀರೆಯಲ್ಲಿ ಗಂಡಿ ಸೀರೆ ಉಡಲು ಸಾಧ್ಯವಿಲ್ಲ. 7 ಅಥವಾ 8 ಗಜ ಸೀರೆಯಲ್ಲಿ ಗಂಡಿ ಸೀರೆ ಉಡಬಹುದಾದರೂ ಮುಕ್ತವಾಗಿ ನಡೆದಾಡಲು ಕಷ್ಟವಾಗಬಹುದು, ಆದರೆ 9 ಗಜ ಸೀರೆಯಿಂದ ಗಂಡಿ ಸೀರೆ ಉಟ್ಟುಕೊಂಡರೆ ಓಡುವುದು ಸಹಿತ ಯಾವುದೇ ಬಗೆಯ ಸಾಹಸವನ್ನು ಮಾಡಿ ತೋರಿಸಬಹುದು.
ಉತ್ಸವದಲ್ಲಿ ಕರಕುಶಲ ವಸ್ತುಗಳ, ಸೀರೆಗಳು, ಸಿದ್ಧ ಉಡುಪುಗಳು, ಗೃಹೋಪಯೋಗಿ ವಸ್ತುಗಳು, ಬಗೆ ಬಗೆಯ ತಿಂಡಿ ತಿನಿಸುಗಳು, ಸ್ಪರ್ಧಾತ್ಮಕ ಆಟಗಳು, ಅನೇತ ಅಗತ್ಯ ವಸ್ತುಗಳ ಮಾರಾಟ ವ್ಯವಸ್ಥೆಯೂ ಇದೆ. ಜತೆಗೆ ಸಂಕ್ರಾಂತಿಗಾಗಿ ಎಳ್ಳು-ಸಕ್ಕರೆ ಅಚ್ಚುಗಳು, ಪೂಜಾ ಸಾಮಗ್ರಿಗಳೂ ಸಿಗಲಿವೆ. ಬೆಂಗಳೂರಿನ ಜನತೆಗೆ ಸಂಕೇತಿ ಸಮುದಾಯದವರ ಆಚಾರ, ವಿಚಾರ, ಸಂಸ್ಕೃತಿಯನ್ನು ಪರಿಚಯಿಸುವ ವಿಶಿಷ್ಟ ಉತ್ಸವಕ್ಕೆ ಸಿದ್ಧತೆ ನಡೆದಿದೆ.
ಯಾವಾಗ?: ಜ. 7, 8, ಶನಿವಾರ, ಭಾನುವಾರ, ಬೆಳಿಗ್ಗೆ 9ರಿಂದ
ಎಲ್ಲಿ?: ಮರಾಠಾ ಹಾಸ್ಟೆಲ್, ಬುಲ್ ಟೆಂಪಲ್ ರಸ್ತೆ, ಬಸವನಗುಡಿ
ಪ್ರವೇಶ: ಉಚಿತ
ಸಂಪರ್ಕ: 9448071940, 7829193195