ಬಹುತೇಕ ಕರಾವಳಿಯ ಕಲಾವಿದರೇ ಸೇರಿಕೊಂಡು ಮಾಡಿರುವ ಸಿನಿಮಾ ‘ಸಾಂಕೇತ್’ ಕುತೂಹಲದಿಂದಲೇ ಶುರುವಾಗುವ ಕಥೆ ಬರಬರುತ್ತಾ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಜಾಡಿಗೆ ಜಾರುತ್ತದೆ.
ಒಂದು ಕುಟುಂಬ, ಆ ಕುಟುಂಬದಲ್ಲಿ ಸಂತಸ, ಸಂಭ್ರಮ ಎಲ್ಲವೂ ಇದೆ. ಆದರೆ ಸಮಾಜ ಆ ಕುಟುಂಬಕ್ಕೆ ಚುಚ್ಚುವ ಮಾತುಗಳನ್ನು, ಮಾನಸಿಕ ಹಿಂಸೆ ನೀಡುವಂತೆ ನಿಂದಿಸುವುದು ಆ ದಂಪತಿಗೆ ಮಗುವಿಲ್ಲ ಎನ್ನುವ ಕಾರಣಕ್ಕೆ. ಪತಿ – ಪತ್ನಿ ಇಬ್ಬರು ವೈದ್ಯರಾಗಿದ್ದು, ಆಸ್ತಿ ಅಂತಸ್ತು, ಬಂಗಲೆ, ಬಂಗಾರ ಎಲ್ಲವೂ ಇದ್ರು ಅವರಿಗೆ ಮಕ್ಕಳಾಗಿಲ್ಲ ಎನ್ನುವುದೇ ಎಲ್ಲದಕ್ಕಿಂತ ದೊಡ್ಡ ಕೊರತೆ ಹಾಗೂ ಚಿಂತೆ.
ತನಗೆ ಮಕ್ಕಳಿಲ್ಲ ಎನ್ನುವ ಚಿಂತೆ ಪತಿ ಪೃಥ್ವಿಗೆ ಕಾಡುತ್ತದೆ. ಈ ನಡುವೆ ಸಿನಿಮಾದಲ್ಲಿ ʼಸಾಂಕೇತ್ʼ ಎಂಟ್ರಿ ಆಗುತ್ತದೆ. ಸಾಂಕೇತ್ ಸೂಚಿಸುವ ಸಲಹೆಗಳು ವಿಚಿತ್ರ ಹಾಗೂ ವಿಭಿನ್ನ ಮಾರ್ಗದಾಗಿರುತ್ತದೆ. ಇದರಿಂದ ಪೃಥ್ವಿ ದಂಪತಿಗೆ ಮಕ್ಕಳಾಗುತ್ತಾದೋ, ಇಲ್ಲ ಇದು ಪೃಥ್ವಿಗೆ ಉಲ್ಟಾ ಹೊಡೆಯುತ್ತದಾ? ಎನ್ನುವುದನ್ನು ಬಹಳ ಕುತೂಹಲಕಾರಿಯಾಗಿ ತೋರಿಸಲಾಗಿದೆ.
ಮೊದಲಾರ್ಧ ಕೊಂಚ ಗೊಂದಲವಾಗಿ,ನಿಧಾನವಾಗಿ ಸಾಗಿದರೂ ಸೆಕೆಂಡ್ ಹಾಫ್ ನಲ್ಲಿ ಕಥೆಗೊಂದು ದಿಕ್ಕು ಬರುತ್ತದೆ. ಪೃಥ್ವಿ ಇದ್ದಕ್ಕಿದ್ದಂತೆ ಮಾನಸಿಕ ವ್ಯಕ್ತಿಯಾಗಿ ಚಿತ್ರ ವಿಚಿತ್ರವಾಗಿ ಆಡಲು ಶುರು ಮಾಡುತ್ತಾನೆ. ‘ಸಾಂಕೇತ್’ ಹೇಳಿಕೊಟ್ಟ ಮಂತ್ರವನ್ನು ಹೇಳುವುದು, ಒಬ್ಬನೇ ಇರುವುದು, ಕತ್ತಲನೇ ಬೆಳಕೆನ್ನುವಂತೆ ಪ್ರೀತಿಸಲು ಶುರು ಮಾಡುತ್ತಾನೆ.
ಈ ಬದಲಾವಣೆಗೆ ಕಾರಣಗಳೇನು? ನಿಗೂಢವಾಗಿ ನಡೆಯುವ ಘಟನೆಗಳ ಹಿಂದಿರುವ ‘ಸಾಂಕೇತ್’ ಯಾರು? ‘ಸಾಂಕೇತ್’ ಎಂದರೆ ಈ ಸಮಾಜ? ಮನಸ್ಸಿನ ಒತ್ತಡ, ಒಂಟಿತನ, ಮಾನಸಿಕ ಸ್ಥಿತಿ, ನಿಗೂಢ ವ್ಯಕ್ತಿ..ಹೀಗೆ ‘ಸಾಂಕೇತ್’ಜೊತೆಗಿನ ಸಂಭಾಷಣೆ, ಸಂಬಂಧ ಏನು ಎನ್ನುವುದು ತೋರಿಸಿರುವ ರೀತಿ ಪ್ರೇಕ್ಷಕರನ್ನು ಥ್ರಿಲ್ ಆಗಿಸುತ್ತದೆ.
ಮಾಟ ಮಂತ್ರ, ಅಂಜಿಕೆ – ನಂಬಿಕೆ, ಅಪನಂಬಿಕೆ ಹೀಗೆ ‘ಸಾಂಕೇತ್’ ಎಲ್ಲಾ ಅಂಶಗಳ ಮೇಲೆ ಬೆಳಕು ಚೆಲ್ಲುತ್ತದೆ.
ಮಹಿಳಾ ನಿರ್ದೇಶಕಿ ಜೋಶ್ನಾ ರಾಜ್ ಕನ್ನಡದಲ್ಲಿ ವಿಭಿನ್ನ ರೀತಿಯಲ್ಲಿ ಕಥೆಯನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಎಲ್ಲವನ್ನೂ ಹೇಳಿ ಮುಗಿಸದೇ ಕೊನೆಗೆ ನಮ್ಮಲ್ಲೇ ಒಂದಷ್ಟು ಪ್ರಶ್ನೆಗಳನ್ನು ಉಳಿಸಿ ಅದಕ್ಕೆ ಉತ್ತರವನ್ನು ನಾವೇ ಹುಡುಕಬೇಕೆನ್ನುವ ಕುರುಹುಗಳನ್ನು ಬಿಟ್ಟು ಹೋಗುತ್ತಾರೆ.
ನಟನೆಯ ವಿಚಾರಕ್ಕೆ ಮೊದಲಾರ್ಧದಲ್ಲಿ ವಿಕ್ಕಿ ರಾವ್ ಸಾಮಾನ್ಯ ವ್ಯಕ್ತಿಯಂತೆ ಕಾಣಿಸಿಕೊಂಡಿದ್ದು, ಸೆಕೆಂಡ್ ಹಾಫ್ ನಲ್ಲಿ ಅವರ ನಟನಾ ಕೌಶಲ್ಯ ಎದ್ದು ಕಾಣುತ್ತದೆ. ಚೈತ್ರಾ ಶೆಟ್ಟಿ ಪ್ರಕೃತಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ‘ಸಾಂಕೇತ್’ ಪಾತ್ರದ ಸ್ಕ್ರೀನ್ ಟೈಮ್ ಕಡಿಮೆಯಿದ್ದರೂ ಕಥೆಯಲ್ಲಿ ಅವರು ಹೆಚ್ಚು ಇಂಪ್ಯಾಕ್ಟ್ ಆಗಿದ್ದಾರೆ.
ಹಿನ್ನೆಲೆ ಸಂಗೀತ ಚಿತ್ರದಲ್ಲಿನ ಥ್ರಿಲ್ಲರ್ ಅಂಶಗಳಿಗೆ ತಕ್ಕಂತೆ ಮೂಡಿಬಂದಿದೆ. ಅಲ್ಲಲ್ಲಿ ಒಂದಷ್ಟು ಅಂಶಗಳು ಅರ್ಧದಲ್ಲೇ ಮುಗಿದು ಉತ್ತರವಿಲ್ಲದೆ ಉಳಿದು ಬಿಡುತ್ತದೆ. ಆದರೆ ಈ ಎಲ್ಲಾ ವಿಚಾರವನ್ನು ಬದಿಗಿಟ್ಟು ನೋಡಿದರೆ ‘ಸಾಂಕೇತ್’ ನೋಡಿ ಬರಲು ಅಡ್ಡಿಲ್ಲ. ಒಂದೊಳ್ಳೆ ಥ್ರಿಲ್ ಹಾಗೂ ಕುತೂಹಲಕಾರಿ ಸಿನಿಮಾವನ್ನು ನೋಡಲು ಇಷ್ಟಪಟ್ಟರೆ ‘ಸಾಂಕೇತ್’ ನೋಡಿಬರಬಹುದು.
ರಿವರ್ ಸ್ಟ್ರೀಮ್ ಸ್ಟುಡಿಯೋಸ್ ಸಿನಿಮಾವನ್ನು ನಿರ್ಮಿಸಿದ್ದು, ಚೈತ್ರ ಶೆಟ್ಟಿ, ವಿಕ್ಕಿ ರಾವ್,ಮೋಹನ ಶೇಣಿ, ರಾಹುಲ್ ಅಮೀನ್, ನಿರೀಕ್ಷಾ ಶೆಟ್ಟಿ, ರೂಪಾಶ್ರೀ ವರ್ಕಾಡಿ, ಸದಾಶಿವ ಅಮೀನ್, ನಿರೀಕ್ಷಾ ರಾಣಿ,ರಜಿತ್ ಕದ್ರಿ,ಮೇಘನಾ ರಕ್ಷಿತಾ ಮೊದಲಾದವರು ನಟಿಸಿದ್ದಾರೆ.