ಬರ್ಮಿಂಗಂ: ಇಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಪದಕ ಲಭ್ಯವಾಗಿದೆ. 55 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಸಂಕೇತ್ ಮಹಾದೇವ್ ಸರ್ಗಾರ್ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಒಟ್ಟು 248 ಕೆಜಿ (113+135) ಭಾರ ಎತ್ತಿದ ಸಂಕೇತ್ ಬೆಳ್ಳಿ ಪದಕ ಪಡೆದರು. ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದ ಸಂಕೇತ್ ಕೊನೆಯ ಕ್ಷಣದಲ್ಲಿ ಗಾಯಗೊಂಡ ಕಾರಣ ಬೆಳ್ಳಿಗೆ ತೃಪ್ತಿಪಡಬೇಕಾಯಿತು.
ಗಾಯಗೊಂಡರೂ 21 ವರ್ಷದ ಸಂಕೇತ್ ಕ್ಲೀನ್ ಮತ್ತು ಜರ್ಕ್ ಸುತ್ತಿನ ಅಂತಿಮ ಪ್ರಯತ್ನದಲ್ಲಿ 138 ಕೆಜಿ ಎತ್ತುವ ಪ್ರಯತ್ನಕ್ಕೆ ಮರಳಿದರು. ಆದರೆ ಅವನ ಬಲ ಮೊಣಕೈ ಭಾರವನ್ನು ಹೊರಲು ಅವಕಾಶ ನೀಡಲಿಲ್ಲ. ಹೀಗಾಗಿ ರಜತ ಪದಕವೇ ಅಂತಿಮವಾಯಿತು.
ಇದನ್ನೂ ಓದಿ:ಇ.ಡಿ ತನಿಖೆಯ ಭಯ? ಶಿವಸೇನಾದ ಮತ್ತೊಬ್ಬ ಹಿರಿಯ ನಾಯಕ ಅರ್ಜುನ್ ಶಿಂಧೆ ಪಾಳಯಕ್ಕೆ
ಮಲೇಶ್ಯಾದ ಬಿನ್ ಕಸ್ದನ್ ಮೊಹಮದ್ ಅನಿಕ್ ಅವರು ಅಂತಿಮ ಪ್ರಯತ್ನದಲ್ಲಿ 142 ಕೆಜಿ ತೂಕ ಎತ್ತಿ ಬಂಗಾರದ ಪದಕವನ್ನು ತನ್ನದಾಗಿಸಿಕೊಂಡರು.
ಕ್ಲೀನ್ ಮತ್ತು ಜರ್ಕ್ ಸುತ್ತಿನಲ್ಲಿ ಸಂಕೇತ್ ಅವರ ಅತ್ಯುತ್ತಮ ಲಿಫ್ಟ್ ಮೊದಲ ಪ್ರಯತ್ನದಲ್ಲಿ 135 ಕೆಜಿ ಎತ್ತುವಲ್ಲಿ ಯಶಸ್ವಿಯಾದರು.
ಸಂಕೇತ್ ಮಹಾದೇವ್ ಅವರು ಕಳೆದ ವರ್ಷ ಡಿಸೆಂಬರ್ ನಲ್ಲಿ ತಾಷ್ಕೆಂಟ್ ಉಜ್ಬೇಕಿಸ್ತಾನ್‌ನಲ್ಲಿ ನಡೆದ ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ ನಲ್ಲಿ ಚಿನ್ನದ ಪದಕ ಪಡೆದಿದ್ದರು.