Advertisement

ಸಂಕೇಶ್ವರ: ನಿಡಸೋಸಿ ಮಠದ ಮಹಾದಾಸೋಹ: ತ್ರಿವಿಧ ದಾಸೋಹ ವಿಶಿಷ್ಟ

05:30 PM Sep 11, 2024 | Team Udayavani |

■ ಉದಯವಾಣಿ ಸಮಾಚಾರ
ಸಂಕೇಶ್ವರ: ನಿಡಸೋಸಿ ಮಠ ನಾಡಿನ ದಾಸೋಹ ಪರಂಪರೆಯ ಮಹತ್ವ ಹೆಚ್ಚಿಸುವ ಜೊತೆಗೆ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಭಾವೈಕ್ಯತೆಯ ಭಕ್ತಿ ಪೀಠವಾಗಿ ಮಾರ್ಪಡಿಸಿದ್ದಾರೆ ಎಂದು ಬೈಲೂರ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿದರು.

Advertisement

ಸಮೀಪದ ನಿಡಸೋಸಿಯ ಜಗದ್ಗುರು ಶ್ರೀ ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದ  ಮಹಾದಾಸೋಹ ಮಹೋತ್ಸವದಲ್ಲಿ ಅನ್ನಪ್ರಸಾದಕ್ಕೆ ಪೂಜೆ ನೆರವೇರಿಸಿ ಚಾಲನೆ ನೀಡಿ ಮಾತನಾಡಿದ ಅವರು, ಶ್ರೀಮಠದ ತ್ರಿವಿಧ ದಾಸೋಹ ನಾಡಿನಲ್ಲಿಯೇ ವಿಶಿಷ್ಟವಾಗಿದ್ದು, ಪರಂಪರಾಗತ ವೈಶಿಷ್ಟ್ಯಗಳು ಆಧುನಿಕತೆಯಲ್ಲಿಯೂ ಉಳಿದಿರುವುದು ಭಕ್ತರ ಭಕ್ತಿಯ ಶಕ್ತಿಯನ್ನು ಸಾರುತ್ತದೆ ಎಂದರು.

ಚಿಕ್ಕೋಡಿ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ, ಕೃಷಿ ಪರಂಪರೆಯ ನಿಡಸೋಸಿ ಮಠದ 3 ಶತಮಾನದ ಇತಿಹಾಸ ಧಾರ್ಮಿಕತೆಯ ಮಹತ್ವ ಹೆಚ್ಚಿಸಿದ್ದು, ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಗಡಿಭಾಗದ ಭಕ್ತರಿಗೆ ಮಾತೃತ್ವದ ಸ್ಥಾನ ತುಂಬಿದ್ದಾರೆ ಎಂದರು.

ಸಾನ್ನಿಧ್ಯವಹಿಸಿದ್ದ ಜಗದ್ಗುರು ಪಂಚಮ ಶ್ರೀ ಶಿವಲಿಂಗೇಶ್ವರ ಸ್ವಾಮಿಗಳು, ದೈನಂದಿನ ಬದುಕಿನಲ್ಲಿ ಆಧ್ಯಾತ್ಮಿಕ, ಧಾರ್ಮಿಕ ಮೌಲ್ಯಗಳು ಸಮಾಜ ಮುಖಿ ಕಾರ್ಯಗಳಿಗೆ ಪ್ರೇರಣೆ ನೀಡುತ್ತವೆ. ನಿಡಸೋಸಿ ಮಠದ ದಾಸೋಹ ಕಾರ್ಯಗಳು ಭಕ್ತಿಯ ದಿವ್ಯತೆಗೆ ಸಾಕ್ಷಿಯಾಗಿವೆ ಎಂದರು.

ಶ್ರೀ ದುರದುಂಡೀಶ್ವರ ಮಹಾಶಿವಯೋಗಿಗಳವರ ಉತ್ಸವ ಮೂರ್ತಿಯ ಪಲ್ಲಕ್ಕಿಯ ಮಹೋತ್ಸವ ಸಕಲ ವಾದ್ಯ ವೈಭವ ಬಿರುದಾವಳಿಗಳೊಂದಿಗೆ ವಿಜೃಂಭಣೆಯಿಂದ ಜರುಗಿತು. ಪ್ರಸಾದಕ್ಕೆ 25 ಕ್ವಿಂಟಾಲ್‌ ಹುಗ್ಗಿ, 30 ಕ್ವಿಂಟಾಲ್‌ ಅನ್ನ, ಸಾಂಬಾರ, ಕಾಯಿಪಲ್ಯೆ ಮಾಡಲಾಗಿತ್ತು. ಉತ್ತರಾಧಿಕಾರಿ ನಿಜಲಿಂಗೇಶ್ವರ ದೇವರು, ಹಾರನಹಳ್ಳಿ ಚೇತನ ದೇವರು, ಬಮ್ಮನಹಳ್ಳಿ
ಶಿವಯೋಗಿ ಸ್ವಾಮೀಜಿ, ಕಮತೆನಟ್ಟಿ ಗುರುದೇವರು, ಶಾಸಕ ನಿಖಿಲ್‌ ಕತ್ತಿ, ಮಾಜಿ ಸಚಿವ ಎ.ಬಿ.ಪಾಟೀಲ, ಯುವ ಧುರೀಣ ಪವನ ಕತ್ತಿ, ಹಿರಿಯ ಧುರೀಣ ಅಪ್ಪಾಸಾಹೇಬ ಶಿರಕೋಳಿ, ಸಂಗಮ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಪ್ರಕಾಶ ಕಣಗಲಿ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next