Advertisement

ಶಂಕರನಾರಾಯಣ; 7 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 3 ವರ್ಷ ಜೈಲು

02:06 PM Sep 09, 2021 | Team Udayavani |

ಉಡುಪಿ: ಏಳು ವರ್ಷದ ಬಾಲಕಿ ಸಹೋದರನ ಜತೆ ಮನೆಯಲ್ಲಿದ್ದ ವೇಳೆ ಅಕ್ರಮ ಪ್ರವೇಶ ಮಾಡಿ ಆಕೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿ ಜಡ್ಕಲ್‌
ಮೂಲದವನಾದ ಪ್ರಮೋದ್‌ (26) ಮೇಲಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆತ ಅಪರಾಧಿ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಎರ್ಮಾಳು ಕಲ್ಪನಾ ಅವರು ತೀರ್ಪು ಪ್ರಕಟಿಸಿದ್ದಾರೆ.

Advertisement

ಘಟನೆ ವಿವರ
2016ರ ಜನವರಿ ತಿಂಗಳಿನಲ್ಲಿ ಶಂಕರನಾರಾಯಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಕೂಲಿ ಕೆಲಸ ಮಾಡಿಕೊಂಡಿದ್ದ ಪ್ರಮೋದ್‌ ನೊಂದ ಬಾಲಕಿ ಹಾಗೂ ಆಕೆ ಸಹೋದರ ಮನೆಯಲ್ಲಿರುವಾಗ ಅಕ್ರಮ ಪ್ರವೇಶ ಮಾಡಿದ್ದ. ಸಂತ್ರಸ್ತೆ ಸೋದರ ಮನೆಯಿಂದ ಹೊರಗಡೆ ಹೋದ ಸಂದರ್ಭ ಹೊಂಚು ಹಾಕಿ ಕಾದ ಪ್ರಮೋದ್‌ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಲು ಮುಂದಾಗಿದ್ದು, ಬಾಲಕಿ ಕೂಗಿಕೊಂಡಾಗ ಆಕೆ ತಾಯಿ ಹಾಗೂ ಸಹೋದರ ಬರುವುದನ್ನು ಗಮನಿಸಿದ ಆತ ಬಾಲಕಿ ಹಾಗೂ ಕುಟುಂಬಿಕರಿಗೆ ಕೊಲೆ ಬೆದರಿಕೆ ಹಾಕಿ ಪರಾರಿಯಾಗಿದ್ದ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಗೆ ದೂರು ನೀಡಲಾಗಿತ್ತು.

ಅನಂತರ ಈ ಪ್ರಕರಣ ಅಂದು ಕುಂದಾಪುರದಲ್ಲಿದ್ದ ಮಹಿಳಾ ಠಾಣೆಗೆ ವರ್ಗಾವಣೆಯಾಗಿದ್ದು, ಅಂದಿನ ಮಹಿಳಾ ಠಾಣೆ ಪಿಎಸ್‌ಐ ಸುಜಾತಾ ಸಾಲ್ಯಾನ್‌ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.17 ಸಾಕ್ಷಿದಾರರಲ್ಲಿ 10 ಮಂದಿ ಸಾಕ್ಷಿ ವಿಚಾರಣೆ ನಡೆಸಿದ್ದು, ಪ್ರಮುಖವಾಗಿ ಸಂತ್ರಸ್ತ ಬಾಲಕಿ ಹಾಗೂ ಆಕೆ ಸಹೋದರ ನುಡಿದ ಸಾಕ್ಷಿ ಅಭಿಯೋಜನೆಗೆ ಪೂರಕವಾಗಿದ್ದು, ಆರೋಪಿ ಪ್ರಮೋದ್‌ ಕುಕೃತ್ಯ ನಡೆಸಿರುವುದು ಸಾಬೀತಾಗಿದೆ.

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಕ್ಕೆ ಪೋಕ್ಸೋ ಕಾಯ್ದೆಯಡಿ 3 ವರ್ಷ ಕಠಿನ ಸಜೆ, 10 ಸಾವಿರ ರೂ. ದಂಡ, ದಂಡ ಪಾವತಿಸದಿದ್ದಲ್ಲಿ 1 ವರ್ಷ ಸಜೆ, ಅಕ್ರಮ ಪ್ರವೇಶ (ಐಪಿಸಿ ಸೆಕ್ಷನ್‌ 448), ಅಕ್ರಮ ತಡೆಗೆ (ಐಪಿಸಿ 342) ತಲಾ 6 ತಿಂಗಳಿನಂತೆ 1 ವರ್ಷ ಸಜೆ, 1 ಸಾವಿರ ರೂ. ದಂಡ ತಪ್ಪಿದಲ್ಲಿ 2 ತಿಂಗಳು ಜೈಲು, ಕೊಲೆ ಬೆದರಿಕೆ (ಐಪಿಸಿ ಕಲಂ 506) 1 ವರ್ಷ ಜೈಲು, 1,500 ರೂ. ದಂಡ ತಪ್ಪಿದಲ್ಲಿ 6 ತಿಂಗಳು ಸಜೆ. ಒಟ್ಟು 12,500 ರೂ. ದಂಡದ ಮೊತ್ತದಲ್ಲಿ 7,500 ರೂ. ಸರಕಾರಕ್ಕೆ ಹಾಗೂ 5 ಸಾವಿರ ರೂ. ಮೊತ್ತವನ್ನು ಬಾಲಕಿಗೆ ನೀಡಲು ಮತ್ತು ಸರಕಾರದಿಂದ ನೊಂದ ಬಾಲಕಿಗೆ 25 ಸಾವಿರ ರೂ. ಪರಿಹಾರ ನೀಡಲು ನ್ಯಾಯಾಲಯ ಆದೇಶಿಸಿದೆ. ಉಡುಪಿಯ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ಅವರು ಪ್ರಾಸಿಕ್ಯೂಶನ್‌ ಪರ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next