Advertisement

ಮಲೆ ಮಹದೇಶ್ವರ ಬೆಟ್ಟದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ ಜೆ.ಪಿ. ನಡ್ಡಾ

04:19 PM Mar 01, 2023 | Team Udayavani |

ಚಾಮರಾಜನಗರ: ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ರಥ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ನಗಾರಿ ಬಾರಿಸಿ, ಬಾವುಟ ಬೀಸುವ ಮೂಲಕ ಚಾಲನೆ ನೀಡಿದರು.

Advertisement

ಮಲೆ ಮಹದೇಶ್ವರ ದೇವಸ್ಥಾನದ ಎದುರಿನ ಮೈದಾನದಲ್ಲಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಕೇಂದ್ರಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ಅರಗ ಜ್ಞಾನೇಂದ್ರ, ಸುನೀಲ್‌ಕುಮಾರ್, ಕೋಟಾ ಶ್ರೀನಿವಾಸಪೂಜಾರಿ, ರಾಜ್ಯ ಸಭಾ ಸದಸ್ಯ ಜಗ್ಗೇಶ್, ಎನ್. ಮಹೇಶ್, ನಿರಂಜನಕುಮಾರ್, ಜಿಲ್ಲಾ ಪ್ರಭಾರಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಜಿಲ್ಲಾಧ್ಯಕ್ಷ ನಾರಾಯಣಪ್ರಸಾದ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿವಿಧ ಜನಪದ ಕಲಾತಂಡಗಳು, ಗೊರವರ ಕುಣಿತ, ವೀರಗಾಸೆ, ಬೇಡಗಂಪಣ ನೃತ್ಯ, ಮಂಗಳವಾದ್ಯ ಮತ್ತಿತರ ಸಾಂಸ್ಕೃತಿಕ ಕಲಾ ತಂಡಗಳ ನಡುವೆ ಯಾತ್ರೆಗೆ ಚಾಲನೆ ನೀಡಲಾಯಿತು. ರಥಯಾತ್ರೆಗೆ ಸಜ್ಜುಗೊಂಡಿರುವ ಬಸ್ ಮೇಲೆ ನಿಂತು ಬಿಜೆಪಿ ನಾಯಕರು ಜನರತ್ತ ಕೈ ಬೀಸಿದರು.

ರಥ ಯಾತೆಗೆ ಚಾಲನೆ ನೀಡಿದ ಬಳಿಕ ಜೆ.ಪಿ. ನಡ್ಡಾ ಅವರು ಮಹದೇಶ್ವರ ಬೆಟ್ಟದ ರಂಗಮಂದಿರದಲ್ಲಿ ಬುಡಕಟ್ಟು ಸಮುದಾಯಗಳಾದ ಬೇಡಗಂಪಣ ಹಾಗೂ ಸೋಲಿಗರೊಂದಿಗೆ ಸಂವಾದ ನಡೆಸಿದರು. ವೇದಿಕೆಯಲ್ಲಿ ಮಾತನಾಡಿದ ನಡ್ಡಾ ಅವರು, ಮಲೆ ಮಹದೇಶ್ವರನ ದರ್ಶನ ಸ್ವಾಮಿಯನ್ನು ನೋಡುವ ಭಾಗ್ಯ ಹಾಗೂ ಆಶೀರ್ವಾದ ಪಡೆಯುವ ಸೌಭಾಗ್ಯ ದೊರೆತಿದೆ. ಹಾಗೆಯೇ ನಿಮ್ಮನ್ನು ನೋಡುವ ಭಾಗ್ಯವೂ ನನ್ನದಾಗಿದೆ. ಈ ಪವಿತ್ರ ಭೂಮಿಯಿಂದ ಮಲೆ ಮಹದೇಶ್ವರ ಸ್ವಾಮಿಯ ಆಶೀರ್ವಾದ ಪಡೆದು ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಆರಂಭವಾಗಿದೆ ಎಂದರು.

Advertisement

ರಾಜ್ಯದ ನಾಲ್ಕು ಕಡೆಗಳಿಂದ ವಿಜಯ ಸಂಕಲ್ಪ ಯಾತ್ರೆ ಆರಂಭವಾಗುತ್ತಿದೆ. 224 ವಿಧಾನಸಭಾ ಕ್ಷೇತ್ರಗಳಲ್ಲೂ ಈ ಯಾತ್ರೆ ನಡೆಯಲಿದೆ. 75 ಸಾರ್ವಜನಿಕ ಸಭೆಗಳು, 150ಕ್ಕೂ ಹೆಚ್ಚು ರೋಡ್ ಶೋಗಳನ್ನು ನಡೆಸಲಿದೆ. ಬೆಳಗಾವಿಯಲ್ಲಿ ದೇಶದ ರಕ್ಷಣಾ ಸಚಿವರಾದ ರಾಜನಾಥ ಸಿಂಗ್ ಹಾಗೂ ಇನ್ನೆರಡು ಕಡೆ ದೇಶದ ಗೃಹ ಸಚಿವ ಅಮಿತ ಶಾ ಅವರು ಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದು ಅವರು ಹೇಳಿದರು.

ನಮಗೆ ವಿಶ್ವಾಸವಿದೆ, ಕರ್ನಾಟಕದ ಜನತೆ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ದೇಶವು ಅತ್ಯಂತ ವೇಗದಲ್ಲಿ ಅಭಿವೃದ್ಧಿ ಸಾಧಿಸುತ್ತಿದೆ. ಕಾಂಗ್ರೆಸ್ ಪಕ್ಷವು ಜಾತಿವಾದ, ಕುಟುಂಬವಾದಗಳಿಂದ ಒಡೆದು ಆಳುತ್ತಿತ್ತು. ಇಂದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಲ್ಲರ ವಿಶ್ವಾಸ ಪಡೆದು ಎಲ್ಲರ ಭಾರತವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಲಾಗುತ್ತಿದೆ. ಜಗತ್ತಿನ ಅಗ್ರಮಾನ್ಯ ದೇಶವಾಗುವತ್ತ ಭಾರತ ಮುನ್ನಡೆಯುತ್ತಿದೆ. ನರೇಂದ್ರಮೋದಿಯವರು ಪ್ರಧಾನಿಯಾಗುವ ಮೊದಲು ಜಗತ್ತಿನಲ್ಲಿ 10ನೇ ಸ್ಥಾನದಲ್ಲಿದ್ದ ಭಾರತ, ಈಗ 5ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಆಟೋಮೊಬೈಲ್, ಮೊಬೈಲ್, ಕೈಗಾರಿಕಾ ಮತ್ತಿತರ ಕ್ಷೇತ್ರಗಳಲ್ಲಿ ದೇಶ ಪ್ರಗತಿ ಸಾಧಿಸಿದೆ. ನಮ್ಮನ್ನು ಆಳಿದ ಬ್ರಿಟಿಷ್ ಸರ್ಕಾರವನ್ನು ಹಿಂದಿಕ್ಕಿ ಭಾರತ ಮುನ್ನಡೆಯುತ್ತಿದೆ ಎಂದು ಬಣ್ಣಿಸಿದರು.

ಇಲ್ಲಿರುವ ಸೋದರಿಯರ ಮಾತನ್ನು ಆಲಿಸಿದ್ದೇನೆ. ನಾನು ಇಲ್ಲಿ ಕೇವಲ ಸಂವಾದ ಮಾಡಲು ಮಾತ್ರ ಬಂದಿಲ್ಲ. ಈ ಪ್ರದೇಶದ ಚಿತ್ರಣವನ್ನು ಬದಲು ಮಾಡುವ ಸಂಕಲ್ಪದೊಂದಿಗೆ ಬಂದಿದ್ದೇನೆ. ಅದನ್ನು ಮಾಡಿಯೇ ಸಿದ್ಧ ಎಂಬ ಆಶ್ವಾಸನೆ ನೀಡುವೆ ಎಂದರು.

ಭಾರತದ ರಾಷ್ಟ್ರಪತಿಯಾಗಿ ಓರ್ವ ವನವಾಸಿ ಬುಡಕಟ್ಟು ಮಹಿಳೆ ಆಯ್ಕೆಯಾಗಲು, ಈ ದೇಶದ ಅತ್ಯುನ್ನತ ಸ್ಥಾನಕ್ಕೆ ಬರಲು ನರೇಂದ್ರ ಮೋದಿಯವರು ಕಾರಣ. ದೇಶದ ಪ್ರತಿಯೊಂದು ಸಮುದಾಯಕ್ಕೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದಲ್ಲ ಒಂದು ಯೋಜನೆಗಳನ್ನು ನೀಡುತ್ತಿದೆ.

ವನವಾಸಿ, ಬುಡಕಟ್ಟು ಜನರು, ಪ.ಜಾತಿ, ಪ.ಪಂಗಡ, ಯುವಕರು, ಮಹಿಳೆಯರು ಹಿಂದುಳಿದ ವರ್ಗ ಎಲ್ಲರ ಬಾಳಿನಲ್ಲಿ ಬೆಳಕಾಗುವ ರೀತಿಯಲ್ಲಿ ಸರ್ಕಾರ ಕೆಲಸ ಮಾಡುತ್ತಿವೆ. ವಾಜಪೇಯಿ ಸರ್ಕಾರದಲ್ಲಿ ವನವಾಸಿ ಜನರಿಗೆ ವಿಶೇಷ ಸ್ಥಾನ ಮಾನವನ್ನು ನೀಡಿದೆ. ನರೇಂದ್ರ ಮೋದಿಯವರ ಸರ್ಕಾರ ನೀಡಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಹಿಂದೂ ಧರ್ಮ ರಕ್ಷಿಸಲು ಆಂಧ್ರದಲ್ಲಿ 2 ಸಾವಿರ ದೇವಾಲಯಗಳ ನಿರ್ಮಾಣ

Advertisement

Udayavani is now on Telegram. Click here to join our channel and stay updated with the latest news.

Next