ಮುಂಬೈ: 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಇಂದಿನಿಂದ ಆರಂಭವಾಗುತ್ತಿದೆ. ಹತ್ತು ತಂಡಗಳ ಹೊಸ ಮಾದರಿಯ ಕೂಟ ಮುಂಬೈನಲ್ಲಿ ಇಂದು ಶುಭಾರಂಭಗೊಳ್ಳಲಿದೆ. ಎಲ್ಲಾ ತಂಡಗಳು ಹೊಸ ಆಟಗಾರರು ಮತ್ತು ಹೊಸ ಹುರುಪಿನೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ.
ಆದರೆ ಇದಕ್ಕೂ ಮೊದಲೇ ರಾಜಸ್ಥಾನ ರಾಯಲ್ಸ್ ತಂಡ ಪೇಚಿಗೆ ಸಿಲುಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯವಾಗಿರುವ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯ ಸಾಮಾಜಿಕ ಜಾಲತಾಣ ತಂಡ ಶುಕ್ರವಾರ ನಾಯಕ ಸಂಜು ಸ್ಯಾಮ್ಸನ್ ಕೋಪಕ್ಕೆ ಗುರಿಯಾಗಿದೆ.
ಇದನ್ನೂ ಓದಿ:ಎದೆ ಹಾಲಿನಿಂದಲೇ ಆಭರಣ; 15 ಕೋಟಿ ರೂ. ನಿರೀಕ್ಷೆ!
ಸಂಜು ಸ್ಯಾಮ್ಸನ್ ಅವರ ಚಿತ್ರವೊಂದನ್ನು ತಮಾಷೆಯಾಗಿ ಎಡಿಟ್ ಮಾಡಿ ರಾಜಸ್ಥಾನ ರಾಯಲ್ಸ್ ಅಧಿಕೃತ ಖಾತೆಯಿಂದ ಪೋಸ್ಟ್ ಮಾಡಲಾಗಿತ್ತು. ಆದರೆ ಈ ಕೀಟಲೆಯನ್ನು ಸಹಿಸದ ಸಂಜು ಸ್ಯಾಮ್ಸನ್ ಕೋಪಗೊಂಡು, ‘ಗೆಳೆತನದ ನಡುವೆ ಇದೆಲ್ಲಾ ಪರವಾಗಿಲ್ಲ, ಆದರೆ ತಂಡಗಳು ವೃತ್ತಿಪರವಾಗಿಬೇಕು” ಎಂದು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದರು. ಇದಾದ ಬಳಿಕ ರಾಜಸ್ಥಾನ ರಾಯಲ್ಸ್ ಆ ಚಿತ್ರವನ್ನು ಡಿಲೀಟ್ ಮಾಡಿದೆ.
ಸ್ಯಾಮ್ಸನ್ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ ನಂತರ, ಫ್ರ್ಯಾಂಚೈಸಿಯು ಟ್ವಿಟ್ಟರ್ ನಲ್ಲಿ ಅಧಿಕೃತ ಪ್ರಕಟಣೆಯನ್ನು ಪೋಸ್ಟ್ ಮಾಡಿದೆ. “ತನ್ನ ಡಿಜಿಟಲ್ ತಂತ್ರವನ್ನು ಮರುಪರಿಶೀಲಿಸುತ್ತದೆ ಮತ್ತು ಶೀಘ್ರದಲ್ಲೇ ಹೊಸ ಸಾಮಾಜಿಕ ಮಾಧ್ಯಮ ತಂಡವನ್ನು ನೇಮಿಸುತ್ತದೆ” ಎಂದು ಉಲ್ಲೇಖಿಸಿದೆ.
ರಾಜಸ್ಥಾನ ರಾಯಲ್ಸ್ ತಂಡವು ತನ್ನ ಮೊದಲ ಪಂದ್ಯವನ್ನು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ಈ ಪಂದ್ಯ ಮಾ.29ರಂದು ನಡೆಯಲಿದೆ.