ಬೆಂಗಳೂರು: ಬೆಂಗಳೂರು ವಿರುದ್ಧ ರವಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಗಮನ ಸೆಳೆದಿದ್ದರು. ಈ ಇನ್ನಿಂಗ್ಸ್ ವೇಳೆ ಅವರು ಅಪರೂಪದ ದಾಖಲೆ ಮಾಡಿರುವುದು ಯಾರ ಗಮನಕ್ಕೆ ಬಂದಿಲ್ಲ.
ಕೇವಲ 45 ಎಸೆತಗಳಿಂದ 92 ರನ್ ಸಿಡಿಸಿದ್ದರಿಂದ ರಾಜಸ್ಥಾನ ಮೊತ್ತ 200 ಗಡಿ ದಾಟುವಂತಾಯಿತು. ಕ್ರಿಕೆಟ್ ಮೈದಾನದಲ್ಲಿ ನೋಡದಂತಹ ಕೆಲವೊಂದು ಹೊಡೆತಗಳನ್ನು ಪ್ರದರ್ಶಿಸಿದ ಸ್ಯಾಮ್ಸನ್ ತನ್ನ ಅಸಾಮಾನ್ಯ ಬ್ಯಾಟಿಂಗ್ ಶಕ್ತಿಯನ್ನು ಹೊರಗೆಡಹಿದರು. ಮ್ಯಾಚ್ ವಿನ್ನಿಂಗ್ ಹೊಡೆತದ ವೇಳೆ ಅವರು ನಿತೀಶ್ ರಾಣ ಅವರು ಐಪಿಎಲ್ ಪಂದ್ಯವೊಂದರಲ್ಲಿ ಮಾಡಿದ ದಾಖಲೆಯನ್ನು ಮುರಿದರು.
ಮುಂಬೈ ಇಂಡಿಯನ್ಸ್ ಪರ ಆಡಿದ್ದ ರಾಣ ಅವರು ಬೌಂಡರಿ ಬಾರಿಸದೇ 34 ಎಸೆತಗಳಲ್ಲಿ 62 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಕಳೆದ ವರ್ಷ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ರಾಣ ಈ ದಾಖಲೆ ನಿರ್ಮಿಸಿದ್ದರು. ಇದರಿಂದಾಗಿ ಮುಂಬೈ 8 ವಿಕೆಟ್‌ಗಳಿಂದ ಗೆಲುವು ಸಾಧಿಸಿತ್ತು.
ರವಿವಾರ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಸ್ಯಾಮ್ಸನ್ ಬೌಂಡರಿ ಬಾರಿಸದೇ 65 ರನ್ ಗಳಿಸುವ ಮೂಲಕ ಸ್ಯಾಮ್ಸನ್ ಅವರು ರಾಣ ದಾಖಲೆಯನ್ನು ಮುರಿದರು. ಆರ್‌ಸಿಬಿಯ ಕುಲವಂತ್ ಖೆಜೊÅàಲಿಯ ಅವರನ್ನು ಬಹಳಷ್ಟು ದಂಡಿಸಿ ಸ್ಯಾಮ್ಸನ್ ಈ ಸಾಧನೆ ಮಾಡಿದ್ದರು. ಕ್ರಿಸ್ ವೋಕ್ಸ್ ಎಸೆತವೊಂದನ್ನು ಸಿಕ್ಸರ್‌ಗೆ ತಳ್ಳುವ ಮೂಲಕ ತನ್ನ ಮೊತ್ತವನ್ನು 71ಕ್ಕೇರಿಸಿದ ಸ್ಯಾಮ್ಸನ್ ಆಬಳಿಕ ತನ್ನ ಇನ್ನಿಂಗ್ಸ್‌ನ ಮೊದಲ ಬೌಂಡರಿ ಹೊಡೆದರು. ಮುಂದಿನ ಎಸೆತದಲ್ಲಿ ಅವರು ಈ ಇನ್ನಿಂಗ್ಸ್‌ನ ಕೊನೆಯ ಬೌಂಡರಿ ಬಾರಿಸಿದ್ದರು.
23ರ ಹರೆಯದ ಸ್ಯಾಮ್ಸನ್ ಉಮೇಶ್ ಯಾದವ್ ಎಸೆದ ಅಂತಿಮ ಓವರಿನಲ್ಲಿ ಎರಡು ಸಿಕ್ಸರ್ ಬಾರಿಸಿದ್ದರು. ಆದರೆ 8 ರನ್ನಿನಿಂದ ಶತಕ ಪೂರ್ತಿಗೊಳಿಸಲು ಅವರಿಂದ ಸಾಧ್ಯವಾಗಲಿಲ್ಲ. ಅವರು ಸ್ವಲ್ಪದರಲ್ಲಿ ಇನ್ನೊಂದು ದಾಖಲೆ ಮಾಡಲು ವಿಫಲರಾದರು. ಸ್ಯಾಮ್ಸನ್ ಅವರ 10 ಸಿಕ್ಸರ್ 100ರ ಒಳಗಿನ ಇನ್ನಿಂಗ್ಸ್ ವೇಳೆ ಹೊಡೆದ ಎರಡನೇ ಗರಿಷ್ಠ ಸಿಕ್ಸರ್ ಆಗಿದೆ. ಗರಿಷ್ಠ ಸಿಕ್ಸರ್ ಹೊಡೆದ ದಾಖಲೆ ಆ್ಯಂಡ್ರೆ ರಸೆಲ್ ಹೆಸರಲ್ಲಿದೆ. ಅವರು ಚೆನ್ನೈ ವಿರುದ್ಧದ ಪಂದ್ಯದಲ್ಲಿ ಅಜೇಯ 88 ರನ್ ಗಳಿಸಿದ ವೇಳೆ 11 ಸಿಕ್ಸರ್ ಬಾರಿಸಿದ್ದರು.