Advertisement
ಈ ಹೂವು ಎಲ್ಲ ಹೂವುಗಳಂತೆ ಮುಂಜಾನೆ ಅರಳಿ ಮುಸ್ಸಂಜೆ ಬಾಡುವುದಿಲ್ಲ. ಬದಲಾಗಿ ಇದು ರಾತ್ರಿ ಅರಳಿ ರಾತ್ರಿಯೇ ಬಾಡುವ ಹೂವಾಗಿದ್ದು, ಬರೀ ಎರಡು ತಾಸು ಮಾತ್ರ ಜೀವಂತವಾಗಿರುತ್ತದೆ. ಆದ್ದರಿಂದ ಇದನ್ನು ರಾತ್ರಿ ರಾಣಿ ಎಂದು ಕರೆಯಲಾಗುತ್ತದೆ. ಇದು ಮಧ್ಯ ಮಾನ್ಸೂನ್ (ಜೂನ್ -ಆಗಸ್ಟ್) ತಿಂಗಳಲ್ಲಿ ಅರಳುತ್ತದೆ. ಈ ಪುಷ್ಪವು ಬಿಳಿ, ಗುಲಾಬಿ ಮತ್ತು ಕೆಂಪು ಬಣ್ಣದಲ್ಲಿ ಕಂಗೊಳಿಸುತ್ತದೆ.
Related Articles
Advertisement
ಹೆಸರೇ ಹೇಳುವಂತೆ ಪೌರಾಣಿಕತೆಯನ್ನು ಒಳಗೊಂಡ ಪುಷ್ಪವಿದು. ಸಂಪತ್ತು, ಅದೃಷ್ಟ ಹಾಗೂ ಪವಿತ್ರತೆಯ ಸಂಕೇತವನ್ನು ಹೊಂದಿದೆ. ಮಹಾವಿಷ್ಣುವಿನ ನಾಭಿಯಲ್ಲಿ ಅರಳಿದ ಕಮಲದ ಮೂಲಕ ಬ್ರಹ್ಮದೇವರು ಹೊರಬಂದರು ಎಂಬ ನಂಬಿಕೆ. ಈ ಪುಷ್ಪವನ್ನು ಬ್ರಹ್ಮದೇವರು ಕೈಯಲ್ಲಿ ಧರಿಸಿರುತ್ತಾರೆ. ಇದರಿಂದಾಗಿ ಈ ಪುಷ್ಪಕ್ಕೆ ಬ್ರಹ್ಮ ಕಮಲ ಎಂಬ ಹೆಸರು ಬಂದಿತು ಎಂಬ ಪ್ರತೀತಿ ಇದೆ.
ಕೆಲವು ಪುರಾಣಗಳ ಪ್ರಕಾರ ಶಿವನು ಗಣೇಶನ ರುಂಡ ಕಡಿದ ಅನಂತರ ಆನೆಯ ತಲೆಯನ್ನು ಜೋಡಿಸುವ ಸಂದರ್ಭದಲ್ಲಿ ಈ ಬ್ರಹ್ಮಕಮಲ ಪುಷ್ಪದ ರಸವನ್ನು ಲೇಪಿಸಿದ ಅನಂತರವೇ ತಲೆ ಜೋಡಣೆಯಾಯಿತು. ಅದರಿಂದಾಗಿ ಗಣೇಶನು ಬಲಶಾಲಿ ಹಾಗೂ ಬುದ್ಧಿವಂತನಾದ ಎಂಬ ನಂಬಿಕೆ ಇದೆ. ಈ ಪುಷ್ಪವು ಉತ್ತರಾಖಂಡ ಹಾಗೂ ಹಿಮಾಲಯದ ಭಾಗದಲ್ಲಿ ಕಂಡುಬರುವುದರಿಂದ ಇಲ್ಲಿನ ಇತಿಹಾಸ ಪ್ರಸಿದ್ಧ ದೇವಾಲಯಗಳಾದ ಕೇದಾರನಾಥ, ಬದರಿನಾಥ ಹಾಗೂ ತುಂಗಭದ್ರನಾಥ ದೇವರಿಗೆ ಈ ಪುಷ್ಪವನ್ನು ಆರಾಧಿಸಲು ಬಳಸುತ್ತಾರೆ.
ಮೊದಲ ಬಾರಿ ಅರಳುವಾಗ 5 ಜನ ಮತ್ತೈದೆಯರಿಗೆ ಉಡಿ ತುಂಬಿಸಿ ಸಾಂಪ್ರದಾಯಿಕವಾಗಿ ಸತ್ಕರಿಸುವ ಸಂಪ್ರದಾಯ / ಪದ್ಧತಿ ಉತ್ತರ ಕರ್ನಾಟಕದ ಭಾಗದಲ್ಲಿದೆ. ಮಾತ್ರವಲ್ಲದೆ, ವಾಸ್ತು ಶಾಸ್ತ್ರವು ಈ ಪುಷ್ಪವನ್ನು ಮಂಗಳಕರವೆಂದು ಪರಿಗಣಿಸುತ್ತಾರೆ. ಈ ಪುಷ್ಪವನ್ನು ಮನೆಯ ಬ್ರಹ್ಮ ಸ್ಥಾನದಲ್ಲೇ ನೆಡಬೇಕು.
ಇದರಿಂದಾಗಿ ಪುಷ್ಪವು ತನ್ನ ಸುವಾಸನೆಭರಿತವಾದ ಪರಿಮಳವನ್ನು ಮನೆಯ ತುಂಬಾ ಪಸರಿಸುವಂತೆ ಮಾಡುತ್ತದೆ. ಈ ಪುಷ್ಪವು ಮನೆಯಲ್ಲಿನ ದುಷ್ಟಶಕ್ತಿ ಹಾಗೂ ನಕಾರಾತ್ಮಕತೆಯನ್ನು ಹೋಗಲಾಡಿಸಿ, ಧನಾತ್ಮಕ ಶಕ್ತಿಯನ್ನು ನೆಲೆಸುವಂತೆ ಮಾಡುತ್ತದೆ ಮತ್ತು ಮನೆಯಲ್ಲಿ ಸಂತೋಷ, ಸಂಪತ್ತು ಹಾಗೂ ಸಮೃದ್ಧಿಯು ವೃದ್ಧಿಯಾಗುವಂತೆ ಮಾಡುತ್ತದೆ. ಆದ್ದರಿಂದ ಈ ಪುಷ್ಪವನ್ನು ದೇವಲೋಕದ ಪುಷ್ಪವೆಂದು ಸಹ ಕರೆಯುತ್ತಾರೆ.
ಆರೋಗ್ಯದ ಸಂಜೀವಿನಿ
ಬ್ರಹ್ಮಕಮಲವು ಆಯುರ್ವೇದದಲ್ಲೂ ತನ್ನ ಮಹತ್ವವನ್ನು ಗುರುತಿಸಿಕೊಂಡಿದೆ. ಆಯುರ್ವೇದದಲ್ಲಿ ನಾವು ಈ ಪುಷ್ಪದ ಅಪಾರ ಉಪಯೋಗವನ್ನು ಕಾಣಬಹುದು. ಬ್ರಹ್ಮಕಮಲ ಹೂವು ಕಹಿ ರುಚಿ ಹೊಂದಿದ್ದರೂ ಉತ್ತಮ ಆರೋಗ್ಯಕ್ಕೆ ಇದು ಸಿಹಿಯಾಗಿದೆ. ಇದರ ಕಾಂಡ, ಬೇರು, ಹೂವು ಎಲ್ಲವೂ ಉತ್ತಮವಾದ ಅಮೃತವಾಗಿದೆ.
- ಈ ಪುಷ್ಪವು ಲಿವರ್‌ಗೆ ಸಂಬಂಧಪಟ್ಟಂತಹ ಸಮಸ್ಯೆಯನ್ನು ದೂರ ಮಾಡುತ್ತದೆ ಮತ್ತು ಲಿವರ್‌ಗೆ ಹಾನಿಯಾಗದಂತೆ ತಡೆಯುತ್ತದೆ.
- ಇದು ನಂಜು ನಿರೋಧಕವಾಗಿದೆ ಹಾಗೂ ಗಾಯ, ಕಡಿತವನ್ನು ಗುಣಪಡಿಸಲು ಸಹಕರಿಸುತ್ತದೆ.
- ಇದು ಉರಿಯೂತಕ್ಕೆ, ರಕ್ತದ ಪ್ರಮಾಣ ಹೆಚ್ಚಿಸುವಿಕೆಗೆ, ರಕ್ತ ಶುದ್ಧೀಕರಣಕ್ಕೆ ಮತ್ತು ರಕ್ತದ ಪೂರೈಕೆಗೆ ಸಹಕರಿಸುತ್ತದೆ.
- ಇದು ಹೃದಯ ಸಂಬಂಧಿ ಖಾಯಿಲೆ ಗುಣಪಡಿಸುತ್ತದೆ.
- ಈ ಪುಷ್ಪದ ಕಷಾಯವು ಅತಿಯಾದ ಜ್ವರವನ್ನು ಬೇಗನೆ ಶಮನಗೊಳಿಸುತ್ತದೆ.
- ಮಹಿಳೆಯರ ಮುಟ್ಟಿಗೆ ಸಂಬಂಧಪಟ್ಟಂತಹ ಸಮಸ್ಯೆಗೆ ಈ ಗಿಡದ ಔಷಧ ಉತ್ತಮ ಪ್ರಯೋಜನಕಾರಿಯಾಗಿದೆ.