Advertisement

ಬಸ್ಸಿನಲ್ಲೇ ಓಡಾಡುತ್ತಿದ್ದ ಸ್ಟಾರ್ ನಟ…ಬಾಲಿವುಡ್ ನಲ್ಲಿ ಜನಪ್ರಿಯತೆ ಗಳಿಸದ ದುರಂತ ಬದುಕು!

06:53 PM Sep 12, 2020 | Nagendra Trasi |

ಬಾಲಿವುಡ್ ಎಂಬ ಸಾಗರದಲ್ಲಿ 1960-70ರ ದಶಕದಲ್ಲಿ ಅಶೋಕ್ ಕುಮಾರ್, ರಾಜ್ ಕಪೂರ್, ದಿಲೀಪ್ ಕುಮಾರ್, ದೇವ್ ಆನಂದ್, ಶಮ್ಮಿ ಕಪೂರ್, ಸುನೀಲ್ ದತ್, ರಾಜ್ ಕುಮಾರ್, ಧರ್ಮೇಂದ್ರ, ಅಮಿತಾಬ್ ಹೀಗೆ ಸ್ಟಾರ್ ನಟರ ದಂಡು ಇದ್ದ ಸಂದರ್ಭದಲ್ಲಿಯೂ ತನ್ನ ಛಾಪನ್ನು ಮೂಡಿಸಿದ್ದ ಮತ್ತೊಬ್ಬ ನಟರೆಂದರೆ ಅದು “ಸಂಜೀವ್ ಕುಮಾರ್”! ಹೌದು 1960-70ರ ದಶಕದ ಅತ್ಯಂತ ಜನಪ್ರಿಯ ನಟರಲ್ಲಿ ಸಂಜೀವ್ ಕುಮಾರ್ ಕೂಡಾ ಒಬ್ಬರಾಗಿದ್ದಾರೆ. ಬಹುಮುಖ ಪ್ರತಿಭೆಯ ಸಂಜೀವ್ ಅದ್ಯಾಕೆ ಅಷ್ಟೊಂದು ದೊಡ್ಡ ಮಟ್ಟದಲ್ಲಿ ಬಾಲಿವುಡ್ ಗುರುತಿಸದೇ ಹೋಯಿತು? ಯಾವ ಪಾತ್ರವನ್ನಾಗಲಿ ಲೀಲಾಜಾಲವಾಗಿ ಒಪ್ಪಿಕೊಂಡು ಅದಕ್ಕೆ ಜೀವ ತುಂಬುತ್ತಿದ್ದ ಸಂಜೀವ್ ಕುಮಾರ್ ಅಪಾರ ಜನಪ್ರಿಯತೆ ಪಡೆಯಲೇ ಇಲ್ಲ ಎಂಬುದನ್ನು ಗಮನಿಸಬೇಕಾಗಿದೆ.

Advertisement

ಗುಜರಾತಿನಲ್ಲಿ 1937ರಂದು ಜನಿಸಿದ್ದ ಹರಿಹರ್ ಜೇಠಾಲಾಲ್ ಜರಿವಾಲಾ ಮುಂದೆ ಬೆಳ್ಳಿಪರದೆ ಮೇಲೆ ಸಂಜೀವ್ ಕುಮಾರ್ ಎಂದೇ ಗುರುತಿಸಿಕೊಂಡಿದ್ದರು. ಅರ್ಜುನ್ ಪಂಡಿತ್, ಶೋಲೆ, ತ್ರಿಶೂಲ್ ನಂತಹ ಸಿನಿಮಾಗಳಲ್ಲಿ ನಟಿಸಿದ್ದ ಕುಮಾರ್ ಎರಡು ಬಾರಿ ಅತ್ಯುತ್ತಮ ನಟನೆಗಾಗಿ ರಾಷ್ಟ್ರಪ್ರಶಸ್ತಿ ತಮ್ಮ ಮುಡಿಗೇರಿಸಿಕೊಂಡಿದ್ದರು. ಸಂಜೀವ್ ಕುಮಾರ್ ನಟನೆ ಹೇಗಿತ್ತು ಎಂಬ ಬಗ್ಗೆ ನೀವು “ಮಂಚಾಲಿ”, ಪತಿ, ಪತ್ನಿ ಔರ್ ವೊ, ಬೀವಿ ಓ ಬೀವಿ ಮತ್ತು ಹೀರೋ ಸಿನಿಮಾ ವೀಕ್ಷಿಸಿ.

ತುಂಬಾ ಕಿರಿಯ ವಯಸ್ಸಿನಲ್ಲಿಯೇ ಸೂರತ್ ನಿಂದ ಮುಂಬೈಗೆ ಬಂದಿದ್ದ ಹರಿಹರ್ ಜರಿವಾಲಾ ಹರಿಭಾಯಿ ಎಂದೇ ಸಿನಿಮಾರಂಗದಲ್ಲಿ ಚಿರಪರಿಚಿತರಾಗಿದ್ದರು. ಸ್ಟಾರ್ ನಟರಾಗಿ ಪ್ರವರ್ಧಮಾನಕ್ಕೆ ಬರುವ ಸಂದರ್ಭದಲ್ಲಿಯೇ ಸಂಜೀವ್ ಕುಮಾರ್ ಬದುಕು ದುರಂತದ ಕಡೆಗೆ ಸಾಗಿತ್ತು…

ಇದನ್ನೂ ಓದಿ: ವೃತ್ತಿಪರ ಛಾಯಾಗ್ರಾಹಕರಾಗಲು ಯಾವ ರೀತಿಯ ಫೋಟೋ ತೆಗೆಯಬೇಕು… ಇಲ್ಲಿದೆ ಟಿಪ್ಸ್ !

Advertisement

ಸ್ಟಾರ್ ನಟರಾದರು ಬಸ್ ನಲ್ಲಿಯೇ ಓಡಾಡುತ್ತಿದ್ದ ಸಿಂಪಲ್ ಮ್ಯಾನ್:

1960ರಲ್ಲಿ ರಾಮ್ ಮುಖರ್ಜಿ ನಿರ್ದೇಶನದ “ಹಮ್ ಹಿಂದೂಸ್ತಾನಿ” ಎಂಬ ಸಿನಿಮಾದಲ್ಲಿ ಸಂಜೀವ್ ಪುಟ್ಟ ಪಾತ್ರದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿದ್ದರು. ನಂತರ 1965ರಲ್ಲಿ ಅಸ್ಪಿ ಇರಾನಿ ನಿರ್ದೇಶನದ ನಿಶಾನ್ ಸಿನಿಮಾದಲ್ಲಿ ನಾಯಕ ನಟರಾಗಿ ಮಿಂಚಿದ್ದರು. 1968ರಲ್ಲಿ ತೆರೆಕಂಡಿದ್ದ ಸಂಘರ್ಷ ಚಿತ್ರದಲ್ಲಿ ಹಿರಿಯ ನಟ ದಿಲೀಪ್ ಕುಮಾರ್ ಜತೆ ಸಂಜೀವ್ ಕುಮಾರ್ ನಟಿಸಿದ್ದರು. ನಂತರ ಸ್ಟಾರ್ ಪಟ್ಟ ಪಡೆದ ಸಂಜೀವ್ ಕುಮಾರ್ ಬಾಲಿವುಡ್ ಪಯಣದಲ್ಲಿ ಹಿಂದಿರುಗಿ ನೋಡಲೇ ಇಲ್ಲ.

ಸ್ಟಾರ್ ನಟರಾಗಿದ್ದ ವೇಳೆಯೂ ಸಂಜೀವ್ ಕುಮಾರ್ ಬಸ್ಸಿನಲ್ಲಿಯೇ ಓಡಾಡುತ್ತಿದ್ದರಂತೆ. ಒಂದು ದಿನ ಸ್ಟುಡಿಯೋ ಮುಂಭಾಗದಲ್ಲಿ ಸಂಜೀವ್ ಕುಮಾರ್ ಬಸ್ ನಿಂದ ಇಳಿಯುತ್ತಿರುವುದನ್ನು ಕಂಡ ಚಿತ್ರದ ನಾಯಕಿ, ನಿರ್ಮಾಪಕ, ನಿರ್ದೇಶಕರ ಬಳಿ ಹೋಗಿ ನಾನು ಆ ವ್ಯಕ್ತಿ(ಸಂಜೀವ್) ಜತೆ ನಟಿಸುವುದಿಲ್ಲ ಎಂದು ಜಗಳ ತೆಗೆದಿರುವುದಾಗಿ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದರು!

ಯುವಕನಾಗಿದ್ದಾಗಲೇ ಮುದುಕನ ಪಾತ್ರದಲ್ಲೇ ಹೆಚ್ಚು ಮಿಂಚಿದ್ದ ಸಂಜೀವ್ ಕುಮಾರ್!

ತನ್ನ ಬಣ್ಣದ ಬದುಕಿನುದ್ದಕ್ಕೂ ಸಂಜೀವ್ ಕುಮಾರ್ ಹೆಚ್ಚು ಆರಿಸಿಕೊಂಡಿದ್ದು, ವಯಸ್ಸಾದವರ ಪಾತ್ರ. ರಂಗಭೂಮಿಯಲ್ಲಿ ನಟಿಸುವಾಗಲೂ 22ರ ಹರೆಯದ ಸಂಜೀವ್ ಕುಮಾರ್ “ಆಲ್ ಮೈ ಸನ್ಸ್” ನಾಟಕದಲ್ಲಿ ಎ.ಕೆ.ಹಾನಗಲ್ ಅವರ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದರು. ಸಂಜೀವ್ ಅವರಿಗಿಂತ ಎ.ಕೆ.ಹಾನಗಲ್ 24 ವರ್ಷ ಹಿರಿಯರಾಗಿದ್ದರು! ಅಷ್ಟೇ ಅಲ್ಲ ಸಂಜೀವ್ ಅವರು ಅವರು ಯಾವತ್ತೂ ಸಣ್ಣ ಪಾತ್ರದಲ್ಲಿಯೂ ನಟಿಸಲು ಒಪ್ಪಿಕೊಳ್ಳುತ್ತಿದ್ದದ್ದರು.

1970ರಲ್ಲಿ ದಸ್ತಕ್ ಸಿನಿಮಾದಲ್ಲಿನ ಅದ್ಭುತ ನಟನೆಗಾಗಿ ಸಂಜೀವ್ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಹೃಷಿಕೇಶ್ ಮುಖರ್ಜಿ, ಗುಲ್ಜಾರ್ ಹಾಗೂ ಸತ್ಯಜಿತ್ ರೇಯಂತಹ ನಿರ್ದೇಶಕರು ಕುಮಾರ್ ಅವರ ಅಭಿನಯಕ್ಕೆ ತಲೆಬಾಗಿದ್ದರು. ರೇ ಅವರ ಶತರಂಜ್ ಕೇ ಖಿಲಾರಿ ಸಿನಿಮಾದಲ್ಲಿನ ಕುಮಾರ್ ನಟನೆ ಮರೆಯುವಂತಹದ್ದಲ್ಲ. ಇದೆಲ್ಲದರ ನಡುವೆ ಸಂಜೀವ್ ಕುಮಾರ್ ಅಮಿತಾಬ್ ಅಥವಾ ಧರ್ಮೇಂದ್ರ ರೀತಿ ಇಮೇಜ್ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲವಾಗಿತ್ತು. 1970ರ ಕಿಲೋನಾ ಹಾಗೂ ಕೋಶಿಶ್ ಸಿನಿಮಾದಲ್ಲಿನ ಕುಮಾರ್ ಅವರ ಕಿವುಡ ಮತ್ತು ಮೂಗನಾಗಿ ನಟಿಸಿದ್ದ ರೀತಿ ಅಂದು ಮನೆಮಾತಾಗಿತ್ತು.

ಇದನ್ನೂ ಓದಿ: ಆ್ಯಂಗ್ರಿ ಹನುಮಾನ್ ಚಿತ್ರ… ಇವರ ಗ್ರಾಫಿಕ್ ಕಲೆ ಸಿಕ್ಕಾಪಟ್ಟೆ ವೈರಲ್…ಯಾರಿವರು?

ನವರಸ ನಾಯಕ, ಕನ್ನಡದ ಕಸ್ತೂರಿ ನಿವಾಸ ರಿಮೇಕ್ ನಲ್ಲೂ ಸಂಜೀವ್ ಕಮಾಲ್:

ಅಮಿತಾಬ್ ಬಚ್ಚನ್ ನಟನೆಯ ಶೋಲೆ ಚಿತ್ರದಲ್ಲಿ ಸಂಜೀವ್ ಕುಮಾರ್ ಅವರ ಠಾಕೂರ್ ಪಾತ್ರ ಇಂದಿಗೂ ಮರೆಯಲು ಸಾಧ್ಯವಿಲ್ಲ. ಅಲ್ಲದೇ 1964ರಲ್ಲಿ ತಮಿಳಿನಲ್ಲಿ ತೆರೆಕಂಡಿದ್ದ ನವರಾತ್ರಿ (ಶಿವಾಜಿ ಗಣೇಶನ್) ಸಿನಿಮಾದ ಹಿಂದಿ ರಿಮೇಕ್ ನಯಾ ದಿನ್ ನಯಿ ರಾತ್ (1974) ಚಿತ್ರದಲ್ಲಿ ಸಂಜೀವ್ ಕುಮಾರ್ ಬರೋಬ್ಬರಿ ಒಂಬತ್ತು ಪಾತ್ರಗಳಲ್ಲಿ ಅಭಿನಯಿಸಿ ನವರಸ ನಾಯಕನೆನಿಸಿಕೊಂಡಿದ್ದರು! ಈ ಚಿತ್ರದಲ್ಲಿ ಜಯಬಾಧುರಿ (ಜಯಾಬಚ್ಚನ್) ಹೀರೋಯಿನ್ ಆಗಿದ್ದರು.

ದಕ್ಷಿಣ ಭಾರತದ ನಿರ್ದೇಶಕರು, ನಿರ್ಮಾಪಕರು ತಮ್ಮ ತಮಿಳು ಮತ್ತು ತೆಲುಗು ಚಿತ್ರದ ಹಿಂದಿ ರಿಮೇಕ್ ನಲ್ಲಿ ಸಂಜೀವ್ ಕುಮಾರ್ ಅಥವಾ ರಾಜೇಶ್ ಖನ್ನಾ ನಾಯಕ ನಟರಾಗಿ ನಟಿಸಬೇಕೆಂದು ಬಯಸುತ್ತಿದ್ದರಂತೆ. 1970ರಲ್ಲಿ ತಮಿಳಿನಲ್ಲಿ ಬಿಡುಗಡೆಯಾಗಿದ್ದ ಎಂಗಿರುಂದೋ ವಂದಾಲ್ ಹಿಂದಿ ರಿಮೇಕ್ ಕಿಲೋನಾದಲ್ಲಿ ಸಂಜೀವ್ ಅಭಿನಯಿಸಿದ್ದರು. 1971ರಲ್ಲಿ ಕನ್ನಡದಲ್ಲಿ ಡಾ.ರಾಜ್ ಕುಮಾರ್ ನಟಿಸಿದ್ದ ಕಸ್ತೂರಿ ನಿವಾಸ ಸಿನಿಮಾದ ಹಿಂದಿ ರಿಮೇಕ್ ಶಾಂದಾರ್ ನಲ್ಲಿಯೂ ನಟಿಸಿ ಪ್ರೇಕ್ಷಕರ ಮನಗೆದ್ದ ಕೀರ್ತಿ ಸಂಜೀವ್ ಕುಮಾರ್ ಅವರದ್ದಾಗಿದೆ.

ಅವಿವಾಹಿತ, ಪ್ರೀತಿ ವಂಚಿತ ಕುಮಾರ್ ಕುಡಿತದ ದಾಸರಾಗಿಬಿಟ್ಟಿದ್ರು!

ಅದ್ಭುತ ಪ್ರತಿಭೆಯ ಸರಳ ಸಜ್ಜನಿಕೆಯ ನಟರಾಗಿದ್ದ ಸಂಜೀವ್ ಕುಮಾರ್ ಅವರು 1973ರಲ್ಲಿ ನಟಿ ಹೇಮಾ ಮಾಲಿನಿ ಬಳಿ ತಮ್ಮ ಪ್ರೇಮವನ್ನು ನಿವೇದಿಸಿಕೊಂಡಿದ್ದರು. 1976ರಲ್ಲಿ ಕುಮಾರ್ ಗೆ ಹೃದಯಾಘಾತವಾಗುವವರೆಗೆ ಇಬ್ಬರು ಆತ್ಮೀಯರಾಗಿದ್ದರು. ಏತನ್ಮಧ್ಯೆ ನಟಿ ಸುಲಕ್ಷಣಾ ಪಂಡಿತ್ ಸಂಜೀವ್ ಕುಮಾರ್ ಅವರನ್ನು ಇಷ್ಟಪಡತೊಡಗಿದ್ದರು. ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದರು. ಆದರೆ ಕುಮಾರ್ ಮದುವೆಯಾಗಲು ನಿರಾಕರಿಸಿದ್ದರು. ಇದರಿಂದಾಗಿ ತಾನು ಯಾರನ್ನೂ ಮದುವೆಯಾಗುವುದಿಲ್ಲ ಎಂದು ಸುಲಕ್ಷಣಾ ಶಪಥ ಮಾಡಿಬಿಟ್ಟಿದ್ದರು. ಮತ್ತೊಂದೆಡೆ 1980ರಲ್ಲಿ ಹೇಮಾ ಮಾಲಿನಿ ಧರ್ಮೇಂದ್ರನ ಎರಡನೇ ಪತ್ನಿಯಾಗಿ ಕೈಹಿಡಿದಿದ್ದರು. ಕೊನೆಗೂ ಭಗ್ನ ಹೃದಯಿಯಾದ ಸಂಜೀವ್ ಅವಿವಾಹಿತರಾಗಿ ಉಳಿಯುವ ನಿರ್ಧಾರಕ್ಕೆ ಬಂದು ಬಿಟ್ಟಿದ್ದರು.

ತನಗೆ ಪ್ರೀತಿ ದಕ್ಕಿಲ್ಲ ಎಂದು ಮನನೊಂದ ಸಂಜೀವ್ ಕುಮಾರ್ ದಿನಂಪ್ರತಿ ಕುಡಿಯತೊಡಗಿದ್ದರು. ತಮಗೆ ಕೊನೆಯವರೆಗೂ ಸಂಗಾತಿಯಾಗಿ ಇರೋದು ಇದೊಂದೇ(ಮದ್ಯ) ಎಂದು ಹೇಳುತ್ತಿದ್ದ ಸಂಜೀವ್ ಕುಮಾರ್ ಮುಂಬೈನ ಪ್ರತಿಷ್ಠಿತ ರೆಸ್ಟೋರೆಂಟ್ ನಲ್ಲಿ ಮುಂಜಾನೆ 2ಗಂಟೆವರೆಗೂ ಕಾಲ ಕಳೆಯುತ್ತಿದ್ದರಂತೆ ಹೀಗೆ ಕುಡಿತದ ದಾಸರಾಗಿದ್ದ ಕುಮಾರ್ 1985ರಲ್ಲಿ ಕೇವಲ 48ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದರು!

Advertisement

Udayavani is now on Telegram. Click here to join our channel and stay updated with the latest news.

Next