ಹೊಸದಿಲ್ಲಿ: ಅಮೇಠಿಯ ಕಾಂಗ್ರೆಸ್ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಸಂಜಯ ಸಿಂಗ್ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಬುಧವಾರ ಅವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಮೇಲ್ಮನೆಯಲ್ಲಿ ಅವರು ಅಸ್ಸಾಂ ಅನ್ನು ಪ್ರತಿನಿಧಿಸುತ್ತಿದ್ದಾರೆ.
2020ರ ವರೆಗೆ ಅವರ ಸದಸ್ಯತ್ವದ ಅವಧಿ ಇದೆ. ರಾಜೀನಾಮೆ ನೀಡಿದ ಬಳಿಕ ಮಾತನಾಡಿದ ಅವರು, “ಕಾಂಗ್ರೆಸ್‌ನಲ್ಲಿ ಭವಿಷ್ಯವೇ ಕಾಣಿಸುತ್ತಿಲ್ಲ. ಅದು ಇನ್ನೂ ಹಿಂದಿನ ದಿನಗಳಲ್ಲಿಯೇ ಇದೆ. ಸದ್ಯ ದೇಶ ಪ್ರಧಾನಿ ಮೋದಿಯವರ ಜತೆಗೆ ಇದೆ. ನಾನೂ ಕೂಡ ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದೇನೆ. ಬುಧವಾರ ಬಿಜೆಪಿಗೆ ಸೇರ್ಪಡೆಯಾಗಲಿದ್ದೇನೆ’ ಎಂದು ಹೇಳಿದ್ದಾರೆ.
1998ರಲ್ಲಿ ಸಿಂಗ್ ಬಿಜೆಪಿ ಟಿಕೆಟ್‌ನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು. ಅನಂತರ ಅವರು ಕಾಂಗ್ರೆಸ್‌ಗೆ ಮರಳಿದ್ದರು. 2014ರ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗೆಲುವಿನಲ್ಲಿ ಅವರು ಪ್ರಧಾನ ಪಾತ್ರ ವಹಿಸಿದ್ದರು.
ಅಮೇಠಿಯ ರಾಜವಂಶಸ್ಥರೂ ಆಗಿರುವ ಸಿಂಗ್ ಅಮೇಠಿ ಮತ್ತು ರಾಯ್‌ಬರೇಲಿಯಲ್ಲಿ ಸೋನಿಯಾ ಮತ್ತು ರಾಹುಲ್ ಅನುಪಸ್ಥಿತಿಯಲ್ಲಿ ಪಕ್ಷದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಸಿಂಗ್ ಪತ್ನಿ ಅಮಿತಾ ಸಿಂಗ್ ಕೂಡ ಕಾಂಗ್ರೆಸ್ ತೊರೆದಿದ್ದಾರೆ. ಮುಂದಿನ ದಿನಗಳಲ್ಲಿ ಅವರನ್ನು ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ಸಾಧ್ಯತೆ ಇದೆ.
ರಾಜ್ಯಸಭೆಯಲ್ಲಿರುವ ಒಟ್ಟು 245 ಸ್ಥಾನಗಳಲ್ಲಿ ಬಿಜೆಪಿಗೆ 78 ಸ್ಥಾನಗಳಿದ್ದರೆ, ಎನ್‌ಡಿಎಗೆ 111 ಸ್ಥಾನಗಳಿವೆ. ಯುಪಿಎಗೆ 64, ಬಿಜೆಪಿ ವಿರೋಧಿ ಪಕ್ಷಗಳು-44, ಬಿಜೆಡಿ 7, ಟಿಆರ್‌ಎಸ್6, ವೈಎಸ್‌ಆರ್‌ಸಿಪಿ 2, ಎನ್‌ಪಿಎಫ್ 1 , 5 ಖಾಲಿ ಸ್ಥಾನಗಳಿವೆ. ಸರಕಾರದ ಪರ ಸರಳ ಬಹುಮತಕ್ಕೆ 121 ಸ್ಥಾನಗಳು ಬೇಕು.