Advertisement

ಭಾವ ಭಾಮೈದ?

06:00 AM Nov 04, 2018 | |

ಭೋಪಾಲ್‌/ಹೈದರಾಬಾದ್‌/ಚಂಢೀಗಡ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಮಧ್ಯಪ್ರದೇಶದಲ್ಲಿ ರಾಜಕೀಯ ಮೇಲಾಟ ಬಿರುಸುಗೊಂಡಿದೆ. ಕಾಂಗ್ರೆಸ್‌ನ ಪ್ರಮುಖ ನಾಯಕರೊಬ್ಬರನ್ನು ಬಿಜೆಪಿ ತನ್ನತ್ತ ಸೆಳೆದುಕೊಂಡ ಬೆನ್ನಲ್ಲೇ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಭಾಮೈದ(ಪತ್ನಿಯ ತಮ್ಮ)ನನ್ನೇ ಕಾಂಗ್ರೆಸ್‌ ತನ್ನ ಬುಟ್ಟಿಗೆ ಹಾಕಿಕೊಂಡಿದೆ.

Advertisement

ಶನಿವಾರ ಸಿಎಂ ಚೌಹಾಣ್‌ ಅವರ ಪತ್ನಿ ಸಾಧನಾ ಸಿಂಗ್‌ ಅವರ ಸೋದರ ಸಂಜಯ್‌ ಸಿಂಗ್‌ ಮಸಾನಿ ಮಧ್ಯಪ್ರದೇಶ ಕಾಂಗ್ರೆಸ್‌ ರಾಜ್ಯಾ ಧ್ಯಕ್ಷ ಕಮಲ್‌ನಾಥ್‌ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆ ಯಾಗಿದ್ದಾರೆ. ವಿಶೇಷವೆಂದರೆ, ಚೌಹಾಣ್‌ ಸ್ಪರ್ಧಿಸುತ್ತಿರುವ ಬುದ್ನಿ ಕ್ಷೇತ್ರದಲ್ಲೇ ಸಂಜಯ್‌ರನ್ನು ಕಾಂಗ್ರೆಸ್‌ ಕಣಕ್ಕಿಳಿಸುವ ಸಾಧ್ಯತೆಯಿದೆ. ಇದು ನಿಜವಾದರೆ, ಬುದ್ನಿಯಲ್ಲಿ ಭಾವ- ಭಾಮೈದ ಫೈಟ್‌ ಖಚಿತ.

ಚೌಹಾಣ್‌ ವಿರುದ್ಧ ವಾಗ್ಧಾಳಿ: ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಲೇ ಸಿಎಂ ಚೌಹಾಣ್‌ ವಿರುದ್ಧ ವಾಗ್ಧಾಳಿ ನಡೆಸಿ ರುವ ಸಂಜಯ್‌ ಮಸಾನಿ, 13 ವರ್ಷ ಗಳ ಕಾಲ ರಾಜ್ಯವನ್ನು ಆಳಿದ ಚೌಹಾಣ್‌ ಮಾಡಿದ್ದಾದರೂ ಏನು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಬಿಜೆಪಿಯು ಬೇರುಮಟ್ಟದಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಿದವ ರನ್ನು ನಿರ್ಲಕ್ಷಿಸಿ, ಕೇವಲ ನಾಯ ಕರ ಮಕ್ಕಳಿಗಷ್ಟೇ ಟಿಕೆಟ್‌ ನೀಡುವ ಮೂಲಕ ವಂಶಾಡಳಿತಕ್ಕೆ ಪ್ರೋತ್ಸಾಹ ನೀಡಿದೆ ಎಂದು ಆರೋಪಿಸಿದ್ದಾರೆ. ಈ ಬೆಳವಣಿಗೆ ಕುರಿತು ಪ್ರತಿ ಕ್ರಿಯಿ ಸಿದ ಬಿಜೆಪಿ, ಸಂಜಯ್‌ ಅವರ ರಾಜಕೀಯ ವರ್ಚಸ್ಸು ಎಷ್ಟಿದೆ ಎಂದು ಪ್ರಶ್ನಿಸಿದ್ದಲ್ಲದೆ, ಕಾಂಗ್ರೆಸ್‌ನ ಇಂಥ ಕ್ರಮಗಳು ಆ ಪಕ್ಷಕ್ಕೇ ತಿರುಗುಬಾಣವಾಗ ಲಿದೆ ಎಂದು ಹೇಳಿದೆ.

ಐಎನ್‌ಎಲ್‌ಡಿ ಕಲಹ: ಈ ನಡುವೆ, ಹರ್ಯಾಣ ದಲ್ಲಿ ಇಂಡಿಯನ್‌ ನ್ಯಾಷನಲ್‌ ಲೋಕದಳ್‌(ಐಎನ್‌ಎಲ್‌ಡಿ) ವರಿಷ್ಠ ಓಂಪ್ರಕಾಶ್‌ ಚೌಟಾಲಾ ಅವರ ಕೌಟುಂಬಿಕ ಕಲಹವು ಪಕ್ಷದ ಮೇಲೆ ತೀವ್ರ ಪರಿಣಾಮ ಬೀರಿದೆ. ಚೌಟಾಲಾ ಅವರು ತಮ್ಮ ಮೊಮ್ಮಕ್ಕಳಾದ ದುಶ್ಯಂತ್‌ ಮತ್ತು ದಿಗ್ವಿಜಯ್‌ರನ್ನು ಪಕ್ಷದಿಂದ ವಜಾ ಮಾಡಿದ ಬೆನ್ನಲ್ಲೇ, ರಾಜ್ಯಾ ದ್ಯಂತ ದುಶ್ಯಂತ್‌ ಬೆಂಬಲಿಗರು ತಮ್ಮ ಸದಸ್ಯತ್ವಕ್ಕೇ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಪಕ್ಷದಲ್ಲಿ ತೀವ್ರ ಗೊಂದಲ ಸೃಷ್ಟಿಯಾಗಿದೆ.

ಟಿಡಿಪಿ-ಬಿಜೆಪಿ ವಾಕ್ಸಮರ: ಆಂಧ್ರಪ್ರದೇಶದಲ್ಲಿ ಟಿಡಿಪಿ ಮತ್ತು ಬಿಜೆಪಿ ನಡುವೆ ವಾಕ್ಸಮರ ತಾರಕ ಕ್ಕೇರಿದೆ. ಟಿಡಿಪಿ ನಾಯಕ, ಹಣಕಾಸು ಸಚಿವ ಯನಮಾಲಾ ರಾಮಕೃಷ್ಣನುಡು ಅವರು ಪ್ರಧಾನಿ ಮೋದಿ ಅವರನ್ನು “ಬೃಹತ್‌ ಅನಕೊಂಡ’ ಎಂದು ಕರೆದಿದ್ದಾರೆ. ರಾಷ್ಟ್ರೀಯ ಸಂಸ್ಥೆಗಳನ್ನು ನುಂಗಿಹಾಕು ತ್ತಿರುವ ಮೋದಿಗಿಂತ ದೊಡ್ಡ ಅನಕೊಂಡ ಇದೆಯಾ ಎಂದು ಅವರು ಪ್ರಶ್ನಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಬಿಜೆಪಿ, ಟಿಡಿಪಿ ನಾಯಕ ಚಂದ್ರ ಬಾಬು ನಾಯ್ಡು ಅವರು “ಭ್ರಷ್ಟಾಚಾರದ ದೊರೆ’ ಯಾಗಿದ್ದು, ಅದು ಬಹಿರಂಗವಾಗುತ್ತದೆಂಬ ಭಯ ಅವರಲ್ಲಿ ಆವರಿಸಿದೆ ಎಂದು ಹೇಳಿದೆ.

Advertisement

ಔತಣಕೂಟ ಏರ್ಪಡಿಸಿದಾತ ಬಿಜೆಡಿಗೆ: ಕಳೆದ ವರ್ಷ ಒಡಿಶಾದ ಗಂಜಾಂ ಜಿಲ್ಲೆಗೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಭೇಟಿ ನೀಡಿದ್ದಾಗ, ಅವರಿಗೆ ಭರ್ಜರಿ ಔತಣಕೂಟ ಏರ್ಪಡಿಸಿದ್ದ ನವೀನ್‌ ಸ್ವೆನ್‌ ಶನಿ ವಾರ ಏಕಾಏಕಿ ಬಿಜೆಡಿಗೆ ಸೇರ್ಪಡೆಯಾಗಿ ದ್ದಾರೆ. ಅವರೊಂದಿಗೆ ಬಿಜೆಪಿ ಸರಪಂಚ್‌ ಪ್ರದೀಪ್‌ ಕುಮಾರ್‌ ಮತ್ತಿತರ ಬೆಂಬಲಿಗರೂ ಪಕ್ಷ ತೊರೆದಿದ್ದಾರೆ. 

ಅಕ್ಬರುದ್ದೀನ್‌ ಒವೈಸಿ ವಿರುದ್ಧ ಮುಸ್ಲಿಂ ಯುವತಿಯನ್ನು ಕಣಕ್ಕಿಳಿಸಿದ ಬಿಜೆಪಿ ಡಿಸೆಂಬರ್‌ 7ರ ವಿಧಾನಸಭೆ ಚುನಾವಣೆಗೆ ಸಿದ್ಧವಾಗುತ್ತಿರುವ ತೆಲಂಗಾಣದಲ್ಲಿ ಎಐಎಂಐಎಂ ನಾಯಕ ಅಕºರುದ್ದೀನ್‌ ಒವೈಸಿಗೆ ಶಾಕ್‌ ಕೊಟ್ಟಿರುವ ಬಿಜೆಪಿ, ಅವರ ವಿರುದ್ಧ ಮುಸ್ಲಿಂ ಯುವತಿಯೊಬ್ಬರನ್ನು ಕಣಕ್ಕಿಳಿಸಿದೆ. ಆಲ್‌ ಇಂಡಿಯಾ ಮಜಿಸ್‌-ಇ-ಇತ್ತೆಹಾದುಲ್‌ ಮುಸ್ಲಿಮೀನ್‌(ಎಐಎಂಐಎಂ) ಪಕ್ಷದ ಭದ್ರಕೋಟೆ ಎಂದೇ ಪರಿಗಣಿಸಲಾಗಿರುವ ಚಂದ್ರಯಂಗುಟ್ಟಾ ಕ್ಷೇತ್ರದಲ್ಲಿ ಎಬಿವಿಪಿ ನಾಯಕಿ ಸಯ್ಯದ್‌ ಶೆಹಜಾದಿ ಅವರನ್ನು ಬಿಜೆಪಿ ಕಣಕ್ಕಿಳಿಸಿದ್ದು, ಈ ಯುವತಿಯು 4 ಬಾರಿ ಶಾಸಕರಾಗಿದ್ದ ಒವೈಸಿ ಅವರನ್ನು ಎದುರಿಸಲಿದ್ದಾರೆ. ತೆಲಂಗಾಣದ ಅದಿಲಾಬಾದ್‌ನವರಾದ ಶೆಹಜಾದಿ ರಾಜಕೀಯದಲ್ಲಿ ಅನನುಭವಿಯಾಗಿದ್ದರೂ, ಎಬಿವಿಪಿಯ ಪ್ರಭಾವಿ ನಾಯಕಿ. ಒಸ್ಮಾನಿಯಾ ವಿವಿಯಲ್ಲಿ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ. ಶನಿವಾರ ಮಾತನಾಡಿದ ಶೆಹಜಾದಿ, ಒವೈಸಿ ಅವರು ಕ್ಷೇತ್ರಕ್ಕಾಗಿ ಏನು ಮಾಡಿದ್ದಾರೆ, ನಿಮ್ಮ ಬದುಕಲ್ಲಿ ಏನಾದರೂ ಬದಲಾವಣೆ ತಂದಿದ್ದೀರಾ, ಎಷ್ಟು ಮಂದಿಗೆ ಉದ್ಯೋಗ ಕಲ್ಪಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ. 

ಎಕೆ47ನಿಂದ ಗುಂಡಿನ ಮಳೆಗರೆದಂತೆ ಕೆಲವರ ಬಾಯಿಯಿಂದ ಸುಳ್ಳುಗಳ ಮಳೆ
“ವಿಪಕ್ಷಗಳ ಕೆಲವು ನಾಯಕರು ಸುಳ್ಳು ಹೇಳುವ ಯಂತ್ರಗಳಂತೆ. ಎಕೆ-47 ರೈಫ‌ಲ್‌ನಲ್ಲಿ ಗುಂಡುಗಳ ಸುರಿಮಳೆಯಾದಂತೆ, ಇವರ ಬಾಯಿಯಿಂದ ಸುಳ್ಳುಗಳ ಸುರಿಮಳೆಯಾಗುತ್ತದೆ.’ ಹೀಗೆಂದು ಪ್ರತಿಪಕ್ಷ ನಾಯಕರ ವಿರುದ್ಧ ಕಿಡಿಕಾರಿರುವುದು ಪ್ರಧಾನಿ ನರೇಂದ್ರ ಮೋದಿ. ಶನಿವಾರ 5 ಲೋಕಸಭಾ ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರ ಜೊತೆಗೆ ಸಂವಾದ ನಡೆಸಿದ ಪ್ರಧಾನಿ ಮೋದಿ, “ದೇಶವನ್ನು ಬದಲಿಸಲು ಬಿಜೆಪಿ ಯತ್ನಿಸುತ್ತಿದ್ದರೆ, ಪ್ರತಿಪಕ್ಷಗಳು ವಂಶಾಡಳಿತವನ್ನು ಉಳಿಸಲೆಂದು ಕೈಜೋಡಿಸುತ್ತಿವೆ. ಪ್ರತಿಪಕ್ಷಗಳ ಮೈತ್ರಿ ಬಗ್ಗೆ ಕಾರ್ಯಕರ್ತರು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಏಕೆಂದರೆ, ಅವರನ್ನು ಜನರು ಸ್ವೀಕರಿಸುವುದಿಲ್ಲ. ಮಾತ್ರವಲ್ಲ, ದೇಶದಲ್ಲಿ ನಡೆಯುತ್ತಿರುವ ಉತ್ತಮ ಕೆಲಸಗಳನ್ನು ಒಪ್ಪಿಕೊಳ್ಳಲು ನಿರಾಕರಿಸುವಂಥ ಹಾಗೂ ಸೇನೆಯನ್ನು ಅವಮಾನ ಮಾಡುವಂಥ ಪಕ್ಷಗಳನ್ನು ಜನ ದ್ವೇಷಿಸುತ್ತಾರೆ’ ಎಂದೂ ಹೇಳಿದ್ದಾರೆ. ಕೆಲವು ನಾಯಕರಂತೂ ಸುಳ್ಳಿನ ಯಂತ್ರಗಳಿದ್ದಂತೆ. ಅವರು ಬಾಯಿ ತೆರೆದಾಗಲೆಲ್ಲ ಸುಳ್ಳುಗಳೇ ಹೊರಬರುತ್ತವೆ. ಸರ್ಕಾರದ ನೈಜ ಸಾಧನೆಗಳನ್ನು ಜನರಿಗೆ ತಲುಪಿಸುವ ಮೂಲಕ ಅಂಥವರು ಹೇಳುವ ಸುಳ್ಳುಗಳನ್ನು ಬಯಲು ಮಾಡಬೇಕು ಎಂದು ರಾಹುಲ್‌ಗಾಂಧಿ ಹೆಸರೆತ್ತದೆ ಮೋದಿ ವಾಗ್ಧಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next