ಬೆಂಗಳೂರು: ನಿವೃತ್ತ ಪೊಲೀಸ್ ಪೇದೆಗೆ ಡಿಕ್ಕಿ ಹೊಡೆದು ಅವರ ಸಾವಿಗೆ ಕಾರಣವಾಗಿದ್ದ ಆಟೋ ಚಾಲಕನ ಸುಳಿವಿಗೆ ಸಹಕರಿಸಿದ್ದು ಬಾಲಿವುಡ್ ನಟ ಸಂಜಯ್‌ದತ್ ಚಿತ್ರ. ಈ ಸುಳಿವು ಆಧರಿಸಿ ತನಿಖೆ ಚುರುಕುಗೊಳಿಸಿದ ಮಡಿವಾಳ ಸಂಚಾರ ಠಾಣೆ ಪೊಲೀಸರು, ಆರೋಪಿ ಶೋಯಬ್ ಖಾನ್ (19)ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜೂ.17ರಂದು ಮಧ್ಯಾಹ್ನ 1 ಗಂಟೆಗೆ ಮಡಿವಾಳ ಮಾರುಕಟ್ಟೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕೆಎಸ್‌ಆರ್‌ಪಿ ನಿವೃತ್ತ ಪೇದೆ ರಾಮರಾವ್ (66) ಅವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ. ತೀವ್ರವಾಗಿ ಗಾಯಗೊಂಡಿದ್ದ ರಾಮರಾವ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಸಂಚಾರ ಠಾಣೆ ಪೊಲೀಸರು ಆರೋಪಿ ಆಟೋಚಾಲಕನ ಬಂಧನಕ್ಕೆ ಕಾರ್ಯಾಚರಣೆ ಆರಂಭಿಸಿದ್ದರು. ಘಟನಾ ಸ್ಥಳದಿಂದ ಸುಮಾರು 500 ಮೀ. ದೂರದಲ್ಲಿರುವ ಸಿಸಿ ಕ್ಯಾಮೆರಾ ಫೂಟೇಜ್ ಪರಿಶೀಲಿಸಿದ್ದರು. ಅದರಲ್ಲಿ
ಆಟೋ ದೃಶ್ಯಗಳು ಅಸ್ಪಷ್ಟವಾಗಿದ್ದು, ನಂಬರ್ ಕೂಡ ಸರಿಯಾಗಿ ಕಾಣಿಸುತ್ತಿರಲಿಲ್ಲ. ಆದರೆ, ಆಟೋ ಹಿಂದಿದ್ದ ನಟ ಸಂಜಯ್ ದತ್ ಫೋಟೋ ಕಾಣಿಸುತ್ತಿತ್ತು.
ಈ ಸುಳಿವು ಆಧರಿಸಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಸುಮಾರು ಮೂವತ್ತು ಆಟೋ ಜಪ್ತಿ ಮಾಡಿ ಚಾಲಕರನ್ನು ವಿಚಾರಣೆಗೆ ಒಳಪಡಿಸಿದರೂ ಆರೋಪಿಯ ಸುಳಿವು ಸಿಗಲಿಲ್ಲ. ಬಳಿಕ ಸಿದ್ದಾಪುರದ ಮನೆಯ ಮುಂಭಾಗದ ಆಟೋ ಜಪ್ತಿ ಮಾಡಿ ಅದರ ಚಾಲಕ ಶೋಯಬ್‌ಖಾನ್‌ನನ್ನು ವಿಚಾರಣೆಗೊಳಪಡಿಸಿದಾಗ, ತಪ್ಪೊಪ್ಪಿಕೊಂಡಿದ್ದಾನೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.
ಅಪಘಾತದಲ್ಲಿ ಮೃತಪಟ್ಟಿದ್ದ ರಾಮರಾವ್ ಕೆಎಸ್‌ಆರ್‌ಪಿಯಲ್ಲಿ ಮುಖ್ಯಪೇದೆಯಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದು, ಪೊಲೀಸ್ ವಸತಿ ಗೃಹದಲ್ಲಿ ವಾಸಿಸುತ್ತಿದ್ದರು. ಮೇ 17ರಂದು ಕೆಎಸ್‌ಆರ್‌ಪಿ ನಾಲ್ಕನೇ ಬೆಟಾಲಿಯನ್ ಮುಖ್ಯದ್ವಾರದ ಮುಂಭಾಗ ನಡೆದುಕೊಂಡು ಬರುತ್ತಿದ್ದಾಗ ಏಕಮುಖರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಹೋದ ಶೋಯಬ್‌ಖಾನ್, ರಾಮರಾವ್ ಅವರಿಗೆ ಡಿಕ್ಕಿಹೊಡೆದು ಪರಾರಿಯಾಗಿದ್ದ.
ಇನ್ಸ್‌ಪೆಕ್ಟರ್ ಗವಿಸಿದ್ದಪ್ಪ, ಪಿಎಸ್‌ಐ ಟಿ.ಬಿ.ಜಯರಾಮ್, ಮುಖ್ಯಪೇದೆಗಳಾದ ರಾಘವೇಂದ್ರ ಹಾಗೂ ಮೌಸಿನ್‌ಖಾನ್ ತನಿಖಾ ತಂಡದಲ್ಲಿದ್ದರು.