ಬೆಂಗಳೂರು: ರಾಜಾನುಕುಂಟೆ ಗ್ರಾಪಂ ವ್ಯಾಪ್ತಿಯಲ್ಲಿ ಅಂಗಡಿಗಳ ಆವರಣಗಳಲ್ಲಿ ಸ್ಯಾನಿಟೈಸರ್ ಸಿಂಪಡಣೆ ಮಾಡುವ ಹೊಣೆಯನ್ನು ಅಲ್ಲಿನಸ್ವಸಹಾಯ ಗುಂಪುಗಳಿಗೆ ನೀಡಲು ಉದ್ದೇಶಿಸಲಾಗಿದೆ.ಉದ್ದೇಶಿತ ಈ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 350ರಿಂದ 400 ವಾಣಿಜ್ಯ ಮಳಿಗೆಗಳಿವೆ. ಅವುಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಕೋವಿಡ್ 19 ಹರಡದಂತೆ ಕ್ರಮಕೈಗೊಳ್ಳಬೇಕಾಗಿದೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಅಂಗಡಿಗಳಿಗೆ ಭೇಟಿ ನೀಡುವುದರಿಂದ ಕೋವಿಡ್ 19 ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ರಾಜಾನುಕುಂಟೆ ಗ್ರಾಮ ಪಂಚಾಯ್ತಿ ಈ ಕ್ರಮ ಕೈಗೊಂಡಿದೆ. ಈ ಕಾರ್ಯಕ್ಕಾಗಿ ಸ್ವ-ಸಹಾಯ ಗುಂಪುಗಳ ಮೊರೆಹೋಗಿರುವ ಗ್ರಾಪಂ ಇದಕ್ಕಾಗಿ ಮುಂದೆ ಬರುವ ಗುಂಪುಗಳಿಗೆ ಸ್ಯಾನಿಟೈಸ್ ಮಾಡುವ ಕಿಟ್‌ಗಳನ್ನು ಒದಗಿಸುತ್ತಿದೆ. ಸ್ಯಾನಿಟೈಸರ್ ಸಿಂಪಡಣೆ ಸಂಬಂಧ ಈಗಾಗಲೇ ಗ್ರಾಪಂ ಸುತ್ತೋಲೆ ಹೊರಡಿಸಿದೆ. ಸ್ಯಾನಿಟೈಸರ್ ಸಿಂಪಡಣೆ ಮಾಡುವ ಸ್ವಸಹಾಯ ಗುಂಪುಗಳಿಗೆ ಆಯಾ ಅಂಗಡಿಗಳ ಮಾಲಿಕರೇ ಹಣ ನೀಡುವಂತೆ ಸುತ್ತೋಲೆಯಲ್ಲಿ ಈಗಾಗಲೇ ತಿಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗುಂಪುಗಳಿಗೆ ತರಬೇತಿ: ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಅಂಗಡಿಗಳಲ್ಲಿ ಯಾವ ರೀತಿಯಲ್ಲಿ ಸ್ಯಾನಿಟೈಸರ್ ಸಿಂಪಡಣೆ ಮಾಡಬೇಕು ಎಂಬ ಬಗ್ಗೆ ಸ್ವಸಹಾಯ ಗುಂಪುಗಳಿಗೆ ತರಬೇತಿ ನೀಡಲಾ ಗುವುದು. ಇದಾದ ಬಳಿಕ ಅಂಗಡಿ ಮಾಲೀಕರು ತಮಗೆ ಬೇಕಾದ ವೇಳೆ ದಿನಕ್ಕೆ ಒಂದು ಬಾರಿ ಸ್ಯಾನಿಟೈಸರ್ ಸಿಂಪಟಣೆ ಮಾಡಿಸಿಕೊಳ್ಳಬಹುದು. ಸ್ಯಾನಿಟೈಸರ್ ಸಿಂಪಡಿಸುವ ಸ್ವಸಹಾಯ ಗುಂಪುಗಳಿಗೆ ಸಣ್ಣ ಅಂಗಡಿಗಳು ಇದ್ದರೆ, ತಿಂಗಳಿಗೆ ನೂರು ರೂ. ದೊಡ್ಡ ಮಟ್ಟದ ಅಂಗಡಿಗಳಿಗೆ 500ರಿಂದ 1000 ರೂ. ನೀಡುವಂತೆ ಅಂಗಡಿಗಳ ಮಾಲೀಕರಿಗೆ ಸೂಚಿಸಲಾಗಿದೆ.
ತಪ್ಪಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಪಂ ಪಿಡಿಒ ರಾಜೇಶ್ ತಿಳಿಸಿದ್ದಾರೆ. ಕೋವಿಡ್-19 ನಿಯಂತ್ರಣವನ್ನು ಕೇವಲ ಅಧಿಕಾರಿಗಳು ಮತ್ತು ಸರ್ಕಾರದ ಜವಾಬ್ದಾರಿ ಎಂದುಭಾವಿಸುವುದು ಸರಿಯಲ್ಲ. ಇದರಲ್ಲಿ ಸಾರ್ವಜನಿಕರ ಜವಾಬ್ದಾರಿ ಕೂಡ ಇದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಕೋವಿಡ್ 19 ನಿಯಂತ್ರಣದ ಸಂಬಂಧ ರಾಜಾನುಕುಂಟೆ ಗ್ರಾಮ ಪಂಚಾಯ್ತಿ ಹಲವು ಕ್ರಮಗಳನ್ನು ಕೈಗೊಂಡಿದೆ. ಸರ್ಕಾರ ಲಾಕ್‌ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಅಂಗಡಿಗಳು ಕೂಡ ತೆರೆದಿವೆ. ಅಲ್ಲೆಲ್ಲಾ ಸ್ಯಾನಿಟೈಸರ್ ಸಿಂಪಡಣೆ ಮಾಡುವ ಕಾರ್ಯವನ್ನು ಸ್ವಸಹಾಯ ಗುಂಪುಗಳಿಗೆ ನೀಡಲು ತೀರ್ಮಾನಿಸಲಾಗಿದೆ.
-ರಾಜೇಶ್, ರಾಜಾನುಕುಂಟೆ ಗ್ರಾಪಂ ಪಿಡಿಒ
* ದೇವೇಶ್ ಸೂರಗುಪ್ಪ