Advertisement

Sangolli Rayanna: ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ ರಾಯಣ್ಣನ ಸಂಗೊಳ್ಳಿ

06:18 PM May 29, 2024 | Team Udayavani |

*ಎಂ.ಆರ್‌.ಬಡೇಘರ
ಉದಯವಾಣಿ ಸಮಾಚಾರ
ಬೈಲಹೊಂಗಲ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹುಟ್ಟೂರಿನಲ್ಲಿ 10 ಎಕರೆ ಭೂಪ್ರದೇಶದಲ್ಲಿ ನಿರ್ಮಿಸಿರುವ ಸಂಗೊಳ್ಳಿ ರಾಯಣ್ಣನ ಜೀವನ ಚರಿತ್ರೆ ಸಾರುವ ರಾಕ್‌ ಗಾರ್ಡನ್‌ ಹಾಗೂ ರಾಷ್ಟ್ರಮಟ್ಟದ ಸೈನಿಕ ಶಾಲೆ ಕಣ್ಮನ ಸೆಳೆಯುತ್ತಿದೆ.

Advertisement

ರಾಕ್‌ ಗಾರ್ಡನ್‌ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಕುಟುಂಬ ಸಮೇತ ಕುಳಿತು ಊಟ ಮಾಡಲು, ವಿಶ್ರಾಂತಿ ಪಡೆಯಲು ಅಲ್ಲಲ್ಲಿ ವ್ಯವಸ್ಥೆ ಮಾಡಲಾಗಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇದೆ. ಒಟ್ಟು 20 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಒಂದು ಕ್ಯಾಂಟೀನ್‌ ವ್ಯವಸ್ಥೆ ಕೂಡ ಇದೆ.

ಪ್ರವಾಸಿಗರಿಗೆ ಯಾವುದೇ ತರಹದ ತೊಂದರೆಯಾಗದಂತೆ ಕಾಳಜಿ ವಹಿಸಲಾಗಿದೆ. ರಾಕ್‌ ಗಾರ್ಡನ್‌ ನಿರ್ವಹಣೆ ಹಾಗೂ ಸ್ವಚ್ಛತೆಗೆ
ಒಟ್ಟು 35 ಜನ ಸಿಬ್ಬಂದಿ ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ, ಅನೈತಿಕ ಚಟುವಟಿಕೆಗಳು, ಮೂರ್ತಿಗಳಿಗೆ
ಹಾನಿಯುಂಟು ಮಾಡುವುದನ್ನು ತಡೆಯಲು ಒಟ್ಟು 12 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಹೊರಗಡೆ ವಾಹನಗಳಿಗೆ ಪಾರ್ಕಿಂಗ್‌ ವ್ಯವಸ್ಥೆ ಕೂಡ ಇದೆ.

ವ್ಯಾಪಾರ-ವಹಿವಾಟು ಹೆಚ್ಚು: ರಾಕ್‌ ಗಾರ್ಡನ್‌ ನಿರ್ಮಾಣದಿಂದ ವ್ಯಾಪಾರ ವಹಿವಾಟು ಹೆಚ್ಚಿದೆ. ಗಾರ್ಡ್‌ನ್‌ ಹೊರಗಡೆ ರಸ್ತೆ ಮೇಲೆ ಸಣ್ಣ ಪುಟ್ಟ ವ್ಯಾಪಾರ ನಡೆಸುತ್ತಿದ್ದಾರೆ.

ಇನ್ನು ಒಂದು ವರ್ಷದಲ್ಲಿ ಬೃಹತ್‌ ಹೋಟೆಲ್‌ ಸೇರಿದಂತೆ ಅನೇಕ ಮಳಿಗೆಗಳು ತಲೆ ಎತ್ತಲಿವೆ. ಸಂಗೊಳ್ಳಿ ರಾಕ್‌ ಗಾರ್ಡನ್‌ಗೆ ಹೋಗಲು ಸಾರಿಗೆ ಸಂಸ್ಥೆ ಬಸ್‌ ವ್ಯವಸ್ಥೆ ಇಲ್ಲದ ಕಾರಣ ಅನೇಕರು ಖಾಸಗಿ ಕ್ರೂಸರ್‌, ಟಾಟಾ ಏಸ್‌ ರಿಕ್ಷಾ ಹೊಡೆದು ಜೀವನಕ್ಕೆ ದಾರಿ ಮಾಡಿಕೊಂಡಿದ್ದಾರೆ.

Advertisement

ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ರಜಾ ದಿನಗಳಲ್ಲಿ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ರಾಕ್‌ ಗಾರ್ಡನ್‌ ವೀಕ್ಷಣೆ ಮಾಡಿ ಖುಷಿ ಪಡುತ್ತಿದ್ದಾರೆ. ಬೇರೆ, ಬೇರೆ ಜಿಲ್ಲೆಗಳಿಂದ ಆಗಮಿಸುವ ಪ್ರವಾಸಿಗರು ಉಳಿಯಲು ಯಾತ್ರಿ ನಿವಾಸ ಅಥವಾ ಲಾಡ್ಜ್ ನಿರ್ಮಿಸುವುದರಿಂದ ಇನ್ನಷ್ಟು ಮೆರಗು ಹೆಚ್ಚಲಿದೆ ಎಂಬುದು ಪ್ರವಾಸಿಗರ ಅಭಿಪ್ರಾಯ. ಗ್ರಾಮದಲ್ಲಿ ಉತ್ತಮ ರಸ್ತೆಗಳು, ಬೀದಿದೀಪ,  ಗಾರ್ಡ್‌ನ್‌ಗೆ ಬಸ್‌ ವ್ಯವಸ್ಥೆ ಕಲ್ಪಿಸುವುದರ ಜತೆಗೆ ಸುಸಜ್ಜಿತ ಬಸ್‌ ತಂಗುದಾಣ ನಿರ್ಮಿಸಬೇಕೆಂಬುದು ಗ್ರಾಮಸ್ಥರ, ಪ್ರವಾಸಿಗರ ಆಗ್ರಹವಾಗಿದೆ.

ಎಷ್ಟಿದೆ ಪ್ರವೇಶ ದರ
3 ವರ್ಷದಿಂದ 12 ವರ್ಷದೊಳಗಿನ ಮಕ್ಕಳಿಗೆ 50 ರೂ., 12 ವರ್ಷ ಮೇಲ್ಪಟ್ಟವರಿಗೆ 100 ರೂ., ಶಾಲಾ ಮಕ್ಕಳಿಗೆ 25 ರೂ., ಕಾಲೇಜು ವಿದ್ಯಾರ್ಥಿಗಳಿಗೆ 50 ರೂ.ನಂತೆ ನಿಗದಿ ಮಾಡಲಾಗಿದ್ದು, ಪ್ರವೇಶ ರಸೀದಿ ಪಡೆದು ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next