Advertisement

ರೈಲ್ವೆ ಪ್ರಯಾಣಿಕರಿದ್ದಲ್ಲಿಗೇ ಬರಲಿದೆ ಬಸ್‌!

09:55 AM Dec 06, 2019 | Sriram |

ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದ ಪ್ರಯಾಣಿಕರ ಬಳಿಗೇ ಇನ್ನು ಮುಂದೆ ಬಿಎಂಟಿಸಿ ಬಸ್‌ ಬರಲಿದೆ!

Advertisement

ರೈಲ್ವೆ ನಿಲ್ದಾಣದ ಗೇಟ್‌-3ರ ಮಾರ್ಗವಾಗಿ ಬಿಎಂಟಿಸಿ ಬಸ್‌ಗಳ ಸಂಚಾರ ಪ್ರಾರಂಭಿಸುವ ಸಂಬಂಧ ಬಿಎಂಟಿಸಿ ಮತ್ತು ರೈಲ್ವೆ ಇಲಾಖೆ ಒಪ್ಪಂದ ಮಾಡಿಕೊಂಡಿದ್ದು,ಎರಡು ಇಲಾಖೆಗಳ ಸಹಭಾಗಿತ್ವದಲ್ಲಿ ಈ ಯೋಜನೆ ಅನುಷ್ಠಾನವಾಗುತ್ತಿದೆ.

ಈ ಮಾರ್ಗದಲ್ಲಿ ಪ್ರಯಾಣಿಸುವ ಸಾರ್ವಜನಿಕರನ್ನು ನೋಡಿಕೊಂಡು ಆಯಾ ಮಾರ್ಗದಲ್ಲಿ ಬಸ್‌ ಸಂಚಾರ ಪ್ರಾರಂಭಿಸಲು ಬಿಎಂಟಿಸಿ ಮುಂದಾಗಿದೆ. ಶೀಘ್ರದಲ್ಲೇ ಈ ಮಾರ್ಗದಲ್ಲಿ ಬಸ್‌ಗಳ ಸಂಚಾರ ಪ್ರಾರಂಭವಾಗಲಿದ್ದು, ಪ್ರಾರಂಭಿಕ ಹಂತದಲ್ಲಿ ಪ್ರತಿ ಹತ್ತು ನಿಮಿಷಕ್ಕೆ ಒಂದು ಬಸ್‌ ಈ ಮಾರ್ಗದಲ್ಲಿ ಸಂಚರಿಸಲಿದೆ.

ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣ ಹಾಗೂ ಕೆಂಪೇಗೌಡ ಬಸ್‌ ನಿಲ್ದಾಣದ ನಡುವೆ 300 ಮೀಟರ್‌ ಅಂತರವಿದೆ. ಹೀಗಾಗಿ, ರೈಲ್ವೆ ನಿಲ್ದಾಣದಿಂದ
ರೈಲ್ವೆ ನಿಲ್ದಾಣದ ಗೇಟ್‌-1ರಲ್ಲಿ ನಿತ್ಯ ಒಂದು ಲಕ್ಷಕ್ಕೂ ಹೆಚ್ಚು ಜನ ಪ್ರಯಾಣಿಕರು ಬರುತ್ತಿದ್ದು, ಈ ಭಾಗದಲ್ಲಿ ಸಂಚಾರ ದಟ್ಟಣೆಯೂ ಹೆಚ್ಚಾಗುತ್ತಿದೆ. ಬಸ್‌ ನಿಲ್ದಾಣಕ್ಕೆ ಪ್ರಯಾಣಿಕರು ತೂಕದ ಬ್ಯಾಗ್‌ ಹಾಗೂ ಲಗೇಜ್‌ಗಳನ್ನು ಹೊತ್ತು ಸಾಗಬೇಕಾಗಿದೆ. ಅಲ್ಲದೆ, ಮಕ್ಕಳು, ಗರ್ಭಿಣಿಯರು ರೈಲ್ವೆ ನಿಲ್ದಾಣದಿಂದ ಬಸ್‌ನಿಲ್ದಾಣಕ್ಕೆ ಹೋಗಲು ಹರಸಾಹಸ ಪಡುತ್ತಿದ್ದಾರೆ. ಹೀಗಾಗಿ, ಗೇಟ್‌-3ರಲ್ಲಿ ಪ್ರಾಯೋಗಿಕವಾಗಿ ಬಸ್‌ ಸಂಚಾರ ಪ್ರಾರಂಭಿಸಲು ಎರಡು ಇಲಾಖೆಯ ಅಧಿಕಾರಿಗಳು ಮುಂದಾಗಿದ್ದಾರೆ. ಬಸ್‌ ಸಂಚಾರ ಯಾವ ಮಾರ್ಗಗಳಲ್ಲಿ ಪ್ರಾರಂಭಿಸಬೇಕು ಎನ್ನುವ ಸಂಬಂಧ ರೈಲ್ವೆ ಇಲಾಖೆಯ ವೇಳಪಟ್ಟಿ ಹಾಗೂ ಪ್ರಯಾಣಿಕರು ಇಲ್ಲಿಂದ ಯಾವ ಮಾರ್ಗದಲ್ಲಿ ಹೆಚ್ಚು ಸಂಚಾರ ಮಾಡುತ್ತಾರೆ ಎನ್ನುವ ಬಗ್ಗೆ ಬಿಎಂಟಿಸಿ ಮಾಹಿತಿ ಕಲೆಹಾಕಿದೆ.

ಸಾರ್ವಜನಿಕರಿಗೆ ಮಾಹಿತಿ: ಈ ಯೋಜನೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಎರಡೂ ಇಲಾಖೆಗಳು ಪೂರ್ವ ಸಿದ್ಧತೆಗಳನ್ನು
ಮಾಡಿಕೊಳ್ಳುತ್ತಿದ್ದು, ಪ್ರಯಾಣಿಕರಿಗೆ ಪ್ಲಾಟ್‌ಫಾರಂ ಹಾಗೂ ಸಾರಿಗೆ ಸೇವೆಯ ಬಗ್ಗೆ ಮಾಹಿತಿ ನೀಡುವುದಕ್ಕೆ ಹತ್ತು ಜನ ಸಾರಿಗೆ ಸೇವಕರನ್ನು ನೇಮಕ ಮಾಡಲಾಗಿದೆ. ಈ ಸಂಚಾರ ಸೇವಕರು ರೈಲ್ವೆ ನಿಲ್ದಾಣದ ಒಳಭಾಗದಲ್ಲಿ ಸಂಚಾರ ಸೇವೆಯ ಬಗ್ಗೆ ಮಾಹಿತಿ ನೀಡಲಿದ್ದಾರೆ.

Advertisement

ಈ ಮಾರ್ಗದಲ್ಲಿ ಬಸ್‌ಗಳ ವೇಳಾಪಟ್ಟಿ ನಾಮಫ‌ಲಕ ಅಳವಡಿಸುವುದಕ್ಕೆ ಬಿಎಂಟಿಸಿ ಮುಂದಾಗಿದೆ. ಅಲ್ಲದೆ, ಈ ಭಾಗದಲ್ಲಿ ಬಸ್‌ಗಳ ಆಗಮನ ಹಾಗೂ ನಿರ್ಗಮನ ಸುಗಮವಾಗಿಸುವುದಕ್ಕಾಗಿ ಪಾಳಿ ಪ್ರಕಾರ ಸಂಚಾರ ಸಹಾಯಕರನ್ನು ನೇಮಿಸಲಾಗುತ್ತಿದೆ.

ಖಾಸಗಿ ವಾಹನಗಳಿಗೆ ನಿರ್ಭಂದ: ರೈಲ್ವೆ ನಿಲ್ದಾಣದ ಗೇಟ್‌-3ರ ಬಳಿ ಈಗ ಖಾಸಗಿ ವಾಹನಗಳ ನಿಲುಗಡೆಗೆ ಅವಕಾಶ ನೀಡಲಾಗಿದೆ. ಬಸ್‌ ಸಂಚಾರ ಸೇವೆಯನ್ನು ಪ್ರಾರಂಭಿಸುತ್ತಿರುವ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಆಟೋ ರಿಕ್ಷಾ, ಬೈಕ್‌ ಹಾಗೂ ಕಾರು ಸೇರಿದಂತೆ ಎಲ್ಲ ರೀತಿಯ ಖಾಸಗಿ ವಾಹನಗಳನ್ನು ನಿರ್ಭಂದಿಸಲಾಗಿದೆ.

ಯೋಜನೆಯ ಮುಖ್ಯಾಂಶಗಳು
* ಸಾರ್ವಜನಿಕರಿಗೆ ಮಾಹಿತಿ ನೀಡುವುದಕ್ಕೆ 10ಜನ ಸಂಚಾರ ಸಹಾಯಕರ ನೇಮಕ.
* ಬಸ್‌ ಆಗಮ ಹಾಗೂ ನಿರ್ಗಮನಕ್ಕೆ ಸಂಚಾರ ಸಹಾಯಕರ ಮೇಲ್ವಿಚಾರಣೆ.
* ಕರಪತ್ರ, ಮಾಹಿತಿ ಫ‌ಲಕಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ.
*ಖಾಸಗಿ ವಾಹನಗಳಿಗೆ ಈ ಮಾರ್ಗದಲ್ಲಿ ನಿರ್ಭಂದ.
* ನಿಲ್ದಾಣದ ಉಸ್ತುವಾರಿಗೆ ಕೆಂಪೇಗೌಡ ಬಸ್‌ ನಿಲ್ದಾಣದ ವಿಭಾಗೀಯ ಸಂಚಾರ ಅಧಿಕಾರಿ ನೇಮಕ.

ಮತ್ತಷ್ಟು ಸಿದ್ಧತೆ ಅವಶ್ಯ: ಗೇಟ್‌-3ರಲ್ಲಿನ ಉದ್ದೇಶಿತ ಬಸ್‌ ನಿಲ್ದಾಣದಲ್ಲಿ ಮೂಲಸೌಕರ್ಯಗಳನ್ನು ರೈಲ್ವೆ ಇಲಾಖೆ ಇನ್ನಷ್ಟೇ ಅಳವಡಿಸಬೇಕಿದೆ. ಪ್ರಯಾಣಿಕರಿಗೆ ಕುರ್ಚಿ ವ್ಯವಸ್ಥೆ ಹಾಗೂ ಮಳೆ, ಬಿಸಿಲಿನಿಂದ ರಕ್ಷಣೆಗೆ ತಂಗುದಾಣ ನಿರ್ಮಾಣ ಹಾಗೂ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡುವ ಅವಶ್ಯಕತೆ ಇದೆ.

ಸಾರ್ವಜನಿಕರಿಗೆ ಅನುಕೂಲ
ಉದ್ದೇಶಿತ ಬಸ್‌ನಿಲ್ದಾಣದಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಇನ್ನು ರೈಲ್ವೆ ನಿಲ್ದಾಣದ ಗೇಟ್‌-1ರಲ್ಲಿನ ಕೆಲವು ಟ್ಯಾಕ್ಸಿ ಹಾಗೂ ಆಟೋಗಳು ಚಾಲಕರು ದುಬಾರಿ ಮೊತ್ತ ಪಡೆಯುತ್ತಿರುವ ಆರೋಪ ಇದೆ. ಅಲ್ಲದೆ, ಈ ಮಾರ್ಗದಲ್ಲಿ ಬಿಎಂಟಿಸಿ ಬಸ್‌ ಪರಿಚಯಿಸಿರುವುದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಸಾರ್ವಜನಿಕರು ಸೇವೆ ಬಳಸಿದರೆ, ಬಿಎಂಟಿಸಿ ಆದಾಯ ಹೆಚ್ಚಾಗುವ ಸಾಧ್ಯತೆಯೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next