Advertisement

Madhya Pradesh: ಗೆಲ್ಲಲು ಸಂಘದ ಶಕ್ತಿ- ಪಕ್ಷದ ಯುಕ್ತಿ ಕಾರಣ: ಸಿ.ಟಿ. ರವಿ

11:53 PM Dec 03, 2023 | Pranav MS |

ಮಧ್ಯಪ್ರದೇಶ ಚುನಾವಣಾ ಫ‌ಲಿತಾಂಶವು ನಿರೀಕ್ಷಿತವಾದ ಗೆಲುವಾಗಿದೆ. ಸಮೀಕ್ಷಾ ವರದಿಗಳ ಲೆಕ್ಕಾಚಾರಗಳು ತಲೆಕೆಳ ಗಾಗಿವೆ. ಪಕ್ಷದಲ್ಲಿ ಎಷ್ಟೇ ಸವಾಲುಗಳಿದ್ದರೂ ಅಭೂತಪೂರ್ವ ಗೆಲುವಿಗೆ ಕಾರಣರಾದ ಕಾರ್ಯಕರ್ತರ ಶ್ರಮ ಸಾಕಷ್ಟಿದೆ. ಸತತವಾಗಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುತ್ತಿರುವ ಮತದಾರರಿಗೆ ಅಭಿನಂದನೆ ಸಲ್ಲಿಸು ತ್ತೇನೆ. ಅದರಲ್ಲೂ ಅಧಿಕ ಸಂಖ್ಯೆಯಲ್ಲಿ ಪಕ್ಷವನ್ನು ಬೆಂಬಲಿಸಿ ರುವ ಮಹಿಳಾ ಮತದಾರರಿಗೆ ವಿಶೇಷ ಅಭಿನಂದನೆ ಸಲ್ಲಿಸಲೇಬೇಕು.

Advertisement

ಭಾರತೀಯ ಜನಸಂಘದ ಕಾಲದಿಂದಲೂ ಮಧ್ಯಪ್ರದೇಶದಲ್ಲಿ ನಮ್ಮ ಪಕ್ಷಕ್ಕೆ ಸುಭದ್ರ ಅಡಿಪಾಯ ಇದ್ದೇ ಇದೆ. 1977ರ ನಂತರವೂ ಭಾರತೀಯ ಜನತಾ ಪಕ್ಷವನ್ನೂ ಅಲ್ಲಿನ ಜನರು ಅಷ್ಟೇ ಪ್ರೀತಿಯಿಂದ ಕಂಡಿದ್ದಾರೆ. ಇದೆಲ್ಲದರೊಟ್ಟಿಗೆ ವಿದ್ಯಾಭಾರತಿ, ಏಕಲ ವಿದ್ಯಾಲಯ, ಜಾಗರಣ ಮಂಚ್‌ನಂತಹ ವಿಚಾರ ಪರಿವಾರಗಳು ಬಿಜೆಪಿಯ ಬೆನ್ನಿಗೆ ನಿಂತಿರುವುದು ಆನೆ ಬಲ ನೀಡಿದಂತಾಗಿದೆ.

ಸುಭದ್ರ, ಸುರಕ್ಷಿತ ಮತಬ್ಯಾಂಕ್‌: ಪಕ್ಷದ ಪ್ರತಿಯೊಬ್ಬ ನಾಯಕರೂ ಜನರೊಂದಿಗೆ ಸದಾ ಇರುತ್ತಾರೆ. ಜನಸಂಪರ್ಕವೇ ಜನನಾಯಕರಿಗೆ ಶ್ರೀರಕ್ಷೆ. ಅದರ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ವ್ಯಕ್ತಿತವೂ ಪರಿಣಾಮ ಬೀರಿದೆ. ಕಳೆದ 18-20 ವರ್ಷದಿಂದ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಆಡಳಿತವನ್ನು ಜನರು ಮನಸಾರೆ ಒಪ್ಪಿದ್ದಾರೆ. ಸುದೀರ್ಘ‌ ಕಾಲ ಮುಖ್ಯಮಂ ತ್ರಿಯಾಗಿ ಆಡಳಿತ ವಿರೋಧಿ ಅಲೆ ಇಲ್ಲದಂತೆ ಆಡಳಿತ ನಡೆಸಿದ ಏಕೈಕ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯೂ ಅವರದ್ದಾಗಿದೆ. ಅವರ ನೇತೃತ್ವದಲ್ಲಿ ಸರಕಾರನೀಡಿರುವ ಪ್ರತಿ ಯೋಜನೆಯ ಲಾಭವೂ ಸಮಾ ಜದ ಕಟ್ಟಕಡೆಯ ವ್ಯಕ್ತಿಯನ್ನೂ ತಲುಪುತ್ತಿದೆ. ಇದರಿಂದಾಗಿ ಮಧ್ಯಪ್ರದೇಶದಲ್ಲಿ ಮೊದಲಿನಿಂದಲೂ ಬಿಜೆಪಿಯ ಮತಬ್ಯಾಂಕ್‌ ಸುರಕ್ಷಿತ ಹಾಗೂ ಸುಭದ್ರವಾಗಿದೆ. ಇದೆಲ್ಲದರ ಪರಿಣಾಮ ಇಂದಿನ ಗೆಲುವು ಸುಲಭ ಸಾಧ್ಯವಾಗಿದೆ.

ಕರ್ನಾಟಕ ಸೋಲಿನ ಅನುಭವ ಪಾಠ: ಕರ್ನಾಟಕ ವಿಧಾ ನಸಭೆ ಚುನಾವಣೆಯಲ್ಲಿ ಪಕ್ಷಕ್ಕಾದ ಸೋಲಿನ ಅನುಭವದಿಂದ ಪಾಠ ಕಲಿತಿದ್ದೇವೆ. ಅದನ್ನೂ ಆಧರಿಸಿ ಕೆಲ ಪ್ರಯೋಗಗಳನ್ನು ಮಧ್ಯಪ್ರದೇಶದಲ್ಲಿ ಮಾಡಲಾಯಿತು. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಗೊಂದಲಗಳೇ ಇರಲಿಲ್ಲ, ಪಕ್ಷ ವಿರೋಧಿ ಚಟುವಟಿಕೆಗಳು ನಡೆಯಲೇ ಇಲ್ಲ ಎಂದೇನಿಲ್ಲ. ಆದರೆ, ಇದ್ದ ಗೊಂದಲಗಳನ್ನು ಬಹುಬೇಗ ಗುರುತಿಸಲಾಯಿತು. ಅಷ್ಟೇ ಬೇಗ ಟಿಕೆಟ್‌ ಘೋಷಣೆ ಮಾಡಿದ್ದು ಕೂಡ ಸತ್ಪರಿಣಾಮ ಉಂಟು ಮಾಡಿದೆ. ಜತೆಗೆ ಹಾಲಿ ಸಂಸದರು, ಮಂತ್ರಿಗಳನ್ನು ಕಣಕ್ಕಿಳಿಸಿದ್ದು ಸಕಾರಾತ್ಮಕ ಪರಿಣಾಮ ಬೀರಿದೆ. ಸ್ಥಳೀಯ ವಿಚಾರಗಳಿಗೆ ಆದ್ಯತೆ ಕೊಟ್ಟು ಪರಿಹಾರ ಮಾರ್ಗಗಳನ್ನು ಪ್ರಣಾಳಿಕೆ ಯಲ್ಲಿ ಅಳವಡಿಸಿಕೊಳ್ಳಲಾಯಿತು. ಎಲ್ಲಕ್ಕಿಂತ ಮಿಗಿಲಾಗಿ ಕಾಂಗ್ರೆಸ್‌ ಗ್ಯಾರಂಟಿ ಗಳ ವಿರುದ್ಧ ಬಿಜೆಪಿಯ ತಂತ್ರಗಾರಿಕೆ ಫ‌ಲ ಕೊಟ್ಟಿದೆ. ದೇಶಕ್ಕೆ ಪ್ರಧಾನಿ ಮೋದಿಯೇ ಗ್ಯಾರಂಟಿ ಎಂಬುದನ್ನು ಮತದಾರರು ಒಪ್ಪಿದ್ದಾರೆ.

ಈ ಗೆಲುವಿನಿಂದ ಬಿಜೆಪಿಗೆ ಚೈತನ್ಯ ಬಂದಿದೆ. ಕಾರ್ಯಕರ್ತರಲ್ಲಿ ಹುರುಪು ತುಂಬಿದೆ. ಲೋಕಸಭೆ ಚುನಾವಣೆಗೆ ಇದು ಖಂಡಿತ ಸಕಾರಾತ್ಮಕ ಸತ್ಪರಿಣಾಮ ಬೀರಲಿದೆ. ಹಾಗೆಂದು ಮೈ ಮರೆಯುವಂತೆಯೂ ಇಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next