ಕೊಡಿಯಾಲ್‌ಬೈಲ್: ಸೈಂಟ್ ಅಲೋಶಿಯಸ್ ಕಾಲೇಜಿನ ಕೊಂಕಣಿ ಸಂಘದ ವತಿಯಿಂದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ‘ಸಾಂಗತ್ ಸುವಾಳೊ’ ರಾಷ್ಟ್ರ ಮಟ್ಟದ ಕೊಂಕಣಿ ಸಾಂಸ್ಕೃತಿಕ ಉತ್ಸವ ಜರಗಿತು.
ಡೈಜಿವರ್ಲ್ಡ್ ಮೀಡಿಯಾದ ಸ್ಥಾಪಕ ವಾಲ್ಟರ್ ನಂದಳಿಕೆ ಉದ್ಘಾಟಿಸಿ, ಪ್ರಸ್ತುತ ತಾಂತ್ರಿಕ ಯುಗದ ಸ್ಪರ್ಶದಿಂದಾಗಿ
ಹೆತ್ತವರೊಂದಿಗೆ ಕಳೆಯುವ ಸಮಯಕ್ಕಿಂತ ಸಾಮಾಜಿಕ ತಾಣಗಳಲ್ಲೇ ಮಕ್ಕಳು ಹೆಚ್ಚು ಒಲವು ಬೆಳೆಸಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕ್ರಿಯಾಶೀಲತೆ ಹೆಚ್ಚಿಸಿ, ಚಟುವಟಿಕೆಯಿಂದ ಕೂಡಿರಲು ಇಂತಹ ಸಂಘಗಳು ಅವಶ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಫಾ| ಡಾ| ಪ್ರವೀಣ್ ಮಾರ್ಟಿಸ್ ಮಾತನಾಡಿ, ಸಂಘಟಿತರಾಗಿ ಕೆಲಸ ಮಾಡಿ ಎಂಬ ಉದ್ದೇಶವನ್ನು ಸಾರುವ ‘ಸಾಂಗತ್ ಸುವಾಳೊ’ ಪದ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕವಾಗಿದೆ ಎಂದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯರಾದ ಸ್ಟಾನಿ ಆಲ್ವಾರಿಸ್, ಲಿಂಗಪ್ಪ ಗೌಡ ಮುಖ್ಯ ಅತಿಥಿಗಳಾಗಿದ್ದರು.
ಕೊಂಕಣಿ ಸಂಘದ ಅಧ್ಯಕ್ಷೆ ರೆನಿಟಾ ಮಿನೇಜಸ್, ಕಾರ್ಯದರ್ಶಿಗಳಾದ ಮೆಲ್‌ರಾಯ್ ಡಿ’ಸೋಜಾ, ಜೆಸ್ವಿಟಾ
ಕ್ವಾಡ್ರಸ್ ಉಪಸ್ಥಿತರಿದ್ದರು. ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ವರ್ಧನೆಗಾಗಿ ಪ್ರೌಢಶಾಲೆ, ಪಪೂ ಕಾಲೇಜು, ಪದವಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಸಾಂಸ್ಕೃತಿಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು.
ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿ ಕುರಿತು ಕಾರ್ಯಾಗಾರ ನಡೆಯಿತು. ವೆಂಕಟೇಶ್ ನಾಯಕ್ ಹಾಗೂ ಐರಿನ್ ರೆಬೆಲ್ಲೊ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಸಮಾರೋಪದಲ್ಲಿ ಸೈಂಟ್ ಅಲೋಶಿಯಸ್ ಕಾಲೇಜಿನ ಎಡ್ಮಿನ್ ಬ್ಲಾಕ್ ಉಪ ಪ್ರಾಂಶುಪಾಲ ಡಾ| ಆಲ್ವಿನ್ ಡೆಸಾ ಮುಖ್ಯ ಅತಿಥಿಯಾಗಿದ್ದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಲಕ್ಷ್ಮಣ ಪ್ರಭು, ದಾಮೋದರ್ ಭಂಡಾರ್ಕರ್ ಗೌರವ ಅತಿಥಿಗಳಾಗಿದ್ದರು. ಜೆಸ್ವಿಟಾ ಕ್ವಾಡ್ರಸ್ ವಂದಿಸಿದರು. ಆಂಜೆಲಿನ್ ಕಾರ್ಯಕ್ರಮ ನಿರೂಪಿಸಿದರು.
ವಿಜೇತರು
ಪದವಿ ವಿಭಾಗದಲ್ಲಿ ಪದುವಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್ ( ಸಮಗ್ರ ಪ್ರಶಸ್ತಿ), ಸೈಂಟ್ ಆ್ಯಗ್ನೆಸ್ ಕಾಲೇಜು (ರನ್ನರ್ ಅಪ್). ಪಪೂ ಕಾಲೇಜು ವಿಭಾಗದಲ್ಲಿ ಪದುವಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್
ಮ್ಯಾನೇಜ್‌ಮೆಂಟ್ (ಸಮಗ್ರಪ್ರಶಸ್ತಿ), ಸೈಂಟ್ ಅಲೋಶಿಯಸ್ ಪಪೂ ಕಾಲೇಜು (ರನ್ನರ್ ಅಪ್) ಪ್ರಶಸ್ತಿ ಪಡೆದುಕೊಂಡಿತು.