ಕುಂದಾಪುರ, ಜೂ. 20: ಇಲ್ಲಿನ ಪುರಸಭೆ ವ್ಯಾಪ್ತಿಯ ಸಂಗಮ್ ಜಂಕ್ಷನ್ ಬಳಿಯ ಚರಂಡಿ ಸಮಸ್ಯೆ ಕುರಿತಂತೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಬರೆದ ಮನವಿ ಪತ್ರಕ್ಕೆ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಸ್ಪಂದಿಸಿದ್ದು, ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಮಸ್ಯೆ ಪರಿಹರಿಸುವ ಭರವಸೆಯಿತ್ತರು.
ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಭೇಟಿ ನೀಡಿ, ಸ್ಥಳೀಯರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು, ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಐಆರ್‌ಬಿ ಸಂಸ್ಥೆಯ ಅಧಿಕಾರಿಗಳಿಂದ ಅಹವಾಲು ಸ್ವೀಕರಿಸಿದರು.
ಸಂಗಮ್ ಜಂಕ್ಷನ್ ಬಳಿ ಚಿಕ್ಕನ್ ಸಾಲ್ ರಸ್ತೆಯಿಂದ ಚರಂಡಿ ನೀರು ಸರಾಗವಾಗಿ ಹರಿದು ಹೋಗದೆ, ಅಲ್ಲೇ ನಿಂತು ಕೃತಕ ನೆರೆ ಸೃಷ್ಟಿಯಾಗುತ್ತಿದೆ. ಇದಕ್ಕೆ ಸಂಗಮ್ ಕ್ರಾಸ್ ಬಳಿಯಿಂದ ಹೊಳೆಯವರೆಗೆ ಚರಂಡಿಯ ತಳ ಮಟ್ಟವನ್ನು ಇನ್ನು ಒಂದು ಫೀಟು ಇಳಿಸುವಂತೆ ಹಾಗೂ ಈ ಬಗ್ಗೆ ಈ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಹೆದ್ದಾರಿ ಇಲಾಖೆಯ ನಿರ್ದೇಶಕರು ಐಆರ್‌ಬಿ ಅಧಿಕಾರಿಗಳಿಗೆ ಆದೇಶ ನೀಡಿದರು.
ಸಂಗಮ್ ಜಂಕ್ಷನ್ ಬಳಿ ಚರಂಡಿ ಯಲ್ಲಿ ನೀರು ನಿಲ್ಲುವುದರಿಂದ ಕೃತಕ ನೆರೆ ಸೃಷ್ಟಿಯಾಗಿ ಸಮಸ್ಯೆಯಾಗುತ್ತದೆ ಎನ್ನುವ ಕುರಿತು ಶಾಸಕರು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧೀಕ್ಷಕರ ಅಭಿಯಂತರರಿಗೆ ಪತ್ರ ಬರೆದಿದ್ದರು. ಇದರ ಪ್ರತಿಯನ್ನು ಸಂಸದೆ ಶೋಭಾ ಕರಂದ್ಲಾಜೆ ಅವರ ಮೂಲಕ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೂ ಕಳುಹಿಸಲಾಗಿತ್ತು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಡಾ| ಎಸ್. ಎಸ್. ಮಧುಕೇಶ್ವರ್ ಅವರು ಚರಂಡಿ ಸಮಸ್ಯೆ ಕುರಿತಂತೆ ವಿವರಿಸಿದರು.
ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಪುರಸಭೆ ಸದಸ್ಯರಾದ ಸಂತೋಷ್ ಶೆಟ್ಟಿ, ಶ್ರೀಧರ್ ಶೇರೆಗಾರ್, ಎಂಜಿನಿಯರ್ ನಯನಾ ತಾರಾ, ಕುಂದಾಪುರ ವೃತ್ತ ನಿರೀಕ್ಷಕ ಮಂಜಪ್ಪ, ಎಸ್‌ಐ ಹರೀಶ್ ಆರ್. ನಾಯ್ಕ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು, ಸಮಸ್ಯೆ ಬಗ್ಗೆ ತಿಳಿಸಿದರು.