ಸಂಡೂರು: ಅದಿರು ಲಾರಿಗಳ ಹಾವಳಿಯಿಂದ ಕುಮಾರಸ್ವಾಮಿ ದೇವಸ್ಥಾನದಿಂದ ಕಮತೂರು, ಆರ್‌ಎನ್‌ಜಿಪಿವರೆಗೆ ರಸ್ತೆ ಪೂರ್ಣ ಹಾಳಾಗಿದ್ದು, ಸಾರ್ವಜನಿಕರಿಗೆ ಸಂಪರ್ಕವಿಲ್ಲದೆ ಮತೂರು ಗ್ರಾಮಸ್ಥರು ಅಂಡಮಾನ್‌ನಲ್ಲಿ ವಾಸಿಸಿದಂತಾಗಿದೆ ಎಂದು ದೇವಗಿರಿ ಗ್ರಾಪಂ ಅಧ್ಯಕ್ಷ ಸುರೇಶ್ ಒತ್ತಾಯಿಸಿದರು.
ತಾಲೂಕಿನ ದೇವಗಿರಿ ಗ್ರಾಮದ ಪಂಚಾಯಿತಿ ಕಚೇರಿಯ ಮುಂಭಾಗದಲ್ಲಿ ಸದಸ್ಯರು ಮತ್ತು ಸಾರ್ವಜನಿಕರು ರಸ್ತೆಗಾಗಿ ಹಮ್ಮಿಕೊಂಡಿದ್ದ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲೂಕಿನ ಆರಾಧ್ಯ ದೈವವಾದ ಕುಮಾರಸ್ವಾಮಿ ದೇವಸ್ಥಾನ ಮತ್ತು ತಾಲೂಕು ಕೇಂದ್ರಕ್ಕೆ ಕಮತೂರು ಗ್ರಾಮದ ಜನರು ಹೋಗುವುದು ದುಸ್ತರವಾಗಿದೆ. ಇರುವ ರಸ್ತೆಯಲ್ಲಿ ಕಿಮೀಗಟ್ಟಲೇ ಅದಿರು ಲಾರಿಗಳು ನಿಂತುಕೊಂಡು ಟ್ರಾಫಿಕ್ ಜಾಮ್ ಅಗುತ್ತದೆ. ಅಲ್ಲದೆ ರಸ್ತೆ ಪೂರ್ಣ ಪ್ರಮಾಣದಲ್ಲಿ ಹಾಳಗಿದ್ದು, ರಸ್ತೆ ನಿರ್ಮಾಣ ವಾಗಿಲ್ಲ. ಈ ಬಗ್ಗೆ ಈ ಹಿಂದೆ ನಡೆದ ಜನಸ್ಪಂದನಾ ಸಭೆಯಲ್ಲಿ ಮಂತ್ರಿಗಳು, ಸುತ್ತಲಿನ ಗಣಿ ಕಂಪನಿಗಳು ಮಾಡುತ್ತೇವೆ ಎಂದು ಭರವಸೆ ನೀಡಿದ್ದರೂ ಅದು ಬರೀ ಭರವಸೆಯಾಗಿಯೇ ಉಳಿದುಕೊಂಡಿದೆ ಎಂದು ಆರೋಪಿಸಿದರು.
ಕಮತೂರು, ದೇವಗಿರಿ, ಸುಬ್ರಾಯನಹಳ್ಳಿ ಇತರ ಗ್ರಾಮಗಳು ಸರ್ವೇ ಸೆಟಲ್ಮೆಂಟ್ ಅಗಿಲ್ಲ ಆದರೂ ಎನ್‌ಎಂಡಿಸಿ ಮತ್ತು ಇತರ ಕಂಪನಿಗಳು ಗಣಿಗಾರಿಕೆ ವಿಪರೀತ ಮಾಡುತ್ತಿದ್ದು, ಸಾರ್ವಜನಿಕರು ಬಹಳಷ್ಟು ತೊಂದರೆಯಾಗಿದೆ, ಶಾಲಾ ಮಕ್ಕಳು ಸಹ ಶಾಲೆಗೆ ಹೋಗುವುದು ದುಸ್ತರವಾಗಿದೆ. ಮಕ್ಕಳನ್ನು ರಸ್ತೆಯಲ್ಲಿ ಬಸ್‌ಗೆ ಹೋಗಲು ಸಹ ಕಷ್ಟಸಾಧ್ಯವಾಗಿದೆ. ಅದರ ಜತೆಯಲ್ಲಿ ವಿಪರೀತ ಧೂಳು ಆವರಿಸಿದ್ದು, ಇಡೀ ಕಮತೂರು ಗ್ರಾಮದ ಜನತೆ ಅನಾರೋಗ್ಯದಿಂದ ನರಳುವಂತಾಗಿದೆ. ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಆಸ್ಪತ್ರೆ ಇಲ್ಲವಾಗಿದೆ. ತಾಲೂಕು ಕೇಂದ್ರಕ್ಕೆ ಹೋಗಲು ರಸ್ತೆ ಇಲ್ಲ. ಇದ್ದ ರಸ್ತೆಯಲ್ಲಿ ಅದಿರು ಲಾರಿಗಳು ಸದಾ ನಿಂತಿರುತ್ತವೆ. ಇದರಿಂದ ಸಾರ್ವಜನಿಕ ರಸ್ತೆಯೇ ಇಲ್ಲ, ಇಂತಹ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಸೂಚಿಸಿದರು.
ಮಾಹಿತಿ ತಿಳಿಸಿದ ತಾಲೂಕು ಆಡಳಿತ ತಹಶೀಲ್ದಾರ್ ಸಿದ್ದೇಶ್ವರ, ಜಿಪಂ ಅಧಿಕಾರಿಗಳು, ಅರಣ್ಯಾಧಿಕಾರಿಗಳ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾ ನಿರತರೊಂದಿಗೆ ಮಾತುಕತೆ ನಡೆಸಿತು. ಅಲ್ಲದೆ ಮಾಲಿನ್ಯದ ಬಗ್ಗೆಯೂ ಗಮನ ಹರಿಸಿತು. ಅದಿರು ಲಾರಿಗಳ ಅರ್ಭಟವೂ ಕಂಡಿತು. ಜನತೆ ನರಕ ಬದುಕು ಸಹ ಸ್ಪಷ್ಟವಾಗಿ ಕಂಡಿತು. ನಂತರ ಅವರು ಮನವಿ ಸ್ವೀಕರಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಮುಖಂಡರಾದ ಟಿ.ಹುಲುಗಪ್ಪ, ತಿಮ್ಮಾರಡ್ಡಿ, ಪರಮೇಶ್ವರ, ನೀಲಮ್ಮ, ಅರಣಕುಮಾರ್, ಇತರ ಹಲವಾರು ಮುಖಂಡರು, ಗ್ರಾಮ ಪಂಚಾಯಿತಿಯ ಸದಸ್ಯರು ಇದ್ದರು.