ಬಸವರಾಜ ಬಣಕಾರ
ಸಂಡೂರು: ನಮ್ಮೂರಿನ ಯಾಣಕ್ಕೆ ಒಂದೊಮ್ಮೆ ಬಂದು ನೋಡಿ ಎಂದು ಸಂಡೂರಿನ ಸುಂದರ ಪರಿಸರ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಹಸಿರ ಸೀರೆಯನುಟ್ಟು ಮೈದುಂಬಿಕೊಂಡಿರುವ ಸಂಡೂರಿನ ಬೆಟ್ಟ ಗುಡ್ಡಗಳು ಹಚ್ಚ ಹಸಿರಿನಿಂದ ಕಂಗೊಳ್ಳಿಸುತ್ತಾ ಅದರ ಮಧ್ಯದಲ್ಲಿ ಹರಿಯುತ್ತಿರುವ ನಾರಿಹಳ್ಳದ ಜುಳು ಜುಳು ನಿನಾದ ಎಂಥವರನ್ನು ಸಹ ಒಂದೊಮ್ಮೆ ನೋಡುವಂತೆ ಮಾಡುತ್ತದೆ.
ಸಂಡೂರು ಎಂದಾಕ್ಷಣ ಗಣಿಗಳ ನಾಡು ಎನ್ನುತ್ತೇವೆ. ಇಂತಹ ನಾಡು ಧೂಳಿನ ಬೀಡಾಗಿತ್ತು.ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರು ಭೇಟಿ ನೀಡಿ ಇಲ್ಲಿಯ ಅಕ್ರಮ ಗಣಿಗೆ ಬ್ರೇಕ್ ಹಾಕಿದ ಪರಿಣಾಮ ಇಂದು ಸುಂದರ ತಾಣವಾಗಿ ಪರಿವರ್ತನೆಯಾಗಿದೆ. ಸುತ್ತಲೂ ಸಹ ಸುಂದರ ಕಾಡನ್ನು ಹೊಂದಿದ್ದು ನೋಡುಗರ ಮೈಮನ ಸೆಳೆಯುವಂತೆ ಮಾಡುತ್ತದೆ.
ಈ ಕಾಡುಗಳ ಮಧ್ಯದಲ್ಲಿಯೇ ಸುಂದರ ಪ್ರವಾಸಿ ತಾಣಗಳು ನೈಸರ್ಗಿಕವಾಗಿ ನಿರ್ಮಾಣವಾಗಿವೆ. ಪ್ರಮುಖವಾಗಿ ಉಬ್ಬಲ ಗಂಡಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಸುತ್ತಲಿನ ಪ್ರದೇಶ ಯಾಣಕ್ಕಿಂತಲೂ ಅದ್ಭುತವಾದಂಥ ಉದ್ದನೆಯ ಶಿಖರಗಳನ್ನು ಕಾಣಬಹುದು. ಸಂಡೂರು ಕೂಡ್ಲಿಗಿ ರಸ್ತೆಗೆ ಹೊಂದಿಕೊಂಡ ಗಂಡಿ ನರಸಿಂಹಸ್ವಾಮಿಯ ಗಂಡಿ ಪ್ರದೇಶವಂತೂ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.
12 ತೀರ್ಥಗಳಿದ್ದು ಸುಂದರ ತಾಣಗಳಾಗಿವೆ. ಹರಿಶಂಕರತೀರ್ಥ, ನವಿಲುತೀರ್ಥ, ಭೀಮತೀರ್ಥ, ಭೈರವ ತೀರ್ಥಗಳು ಇಂದು ಸದಾ ಹರಿಯುತ್ತಿದ್ದು ನೋಡುಗರನ್ನು ಸೆಳೆಯುತ್ತದೆ. ಅಲ್ಲದೆ ಜಗತ್ತಿನ ಅತಿ ವಿಶೇಷವಾದ ಸಸ್ಯಗಳ ತಾಣ ಇದಾಗಿದೆ. 12ವರ್ಷಕ್ಕೊಮ್ಮೆ ಬಿಡುವ ನೀಲಕುರಂಜಿ ಹೂ ಬಿಡುವ ತಾಣವೂ ಇದಾಗಿದೆ. ಇಂಥ ಸುಂದರವಾದ ತಾಣಕ್ಕೆ ರಾಷ್ಟ್ರಪಿತ ಮಹಾತ್ಮ ಗಾಂಧಿಧೀಜಿಯವರು ಸಹ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಇಲ್ಲಿಯ ಪ್ರಕೃತಿ ಸೌಂದರ್ಯ,ಬೆಟ್ಟಗುಡ್ಡಗಳನ್ನು ಕಂಡ ಅವರು ಸಂಡೂರು ಸೀ ಇನ್ ಸೆಪ್ಟೆಂಬರ್ ಎಂದು ಉದ್ಘಾರ ತೆಗೆದಿದ್ದಾರೆ. ಇಂಥ ಸಂಡೂರು ಈ ಬಾರಿ ಕಡಿಮೆ ಮಳೆ ಬಿದ್ದರೂ ಸಹ ಬಹು ಸುಂದರವಾಗಿಯೇ ಮೈದುಂಬಿಕೊಂಡು ಪ್ರವಾಸಿಗರಿಗಾಗಿ ಕಾಯುತ್ತಿದ್ದು ಒಮ್ಮೆ ನೋಡ ಬನ್ನಿ ಎಂದು ಕರೆಯುತ್ತಿದೆ.
ತಾಲೂಕಿನ ಒಟ್ಟು ಅರಣ್ಯ ಪ್ರದೇಶವನ್ನು ನಾಲ್ಕು ಬ್ಲಾಕ್‌ಗಳಾಗಿ ವಿಂಗಡಿಸಿದ್ದು ನಾರ್ಥ ಈಸ್ಟ ಬ್ಲಾಕ್ 10596 ಹೆಕ್ಟೇರ್, ರಾಮನಮಲೈ ಬ್ಲಾಕ್ 7769.85 ಹೆಕ್ಟೇರ್, ದೋಣಿಮಲೈ ಬ್ಲಾಕ್ 6733.18 ಹೆಕ್ಟೇರ್, ಸ್ವಾಮಿ ಮಲೈ ಬ್ಲಾಕ್ 6993.12 ಹೆಕ್ಟೇರ್ ಇದೆ. ಇದರಲ್ಲಿ ಉತ್ತರ ವಲಯ ಪ್ರದೇಶದಲ್ಲಿ ವಿಶೇಷವಾಗಿ ಔಷಧ ಸಸ್ಯಗಳು ಸಿಗುತ್ತಿದ್ದು ಅವುಗಳಿಗಾಗಿ 345 ಹೆಕ್ಟೇರ್ ಪ್ರದೇಶವನ್ನು ಯಾವುದೇ ಕಾರಣಕ್ಕೂ ಬಳಸದಂತೆ ಇಡಲಾಗಿದೆ. ಅಲ್ಲದೆ ಔಷಧ ವನ, ಮತ್ತು ಸಸ್ಯಗಳ ಅಭಿವೃದ್ಧಿ ಕಾರ್ಯವೂ ಸಹ ನಡೆಯುತ್ತಿದೆ. ಪ್ರತಿ ನಕ್ಷತ್ರಗಳಿಗೆ ಒಂದು ಮರ, ಗ್ರಹಗಳಿಗೆ ವನಗಳನ್ನು ಸಹ ನಿರ್ಮಿಸಲಾಗಿದೆ. ಈ ಬಾರಿ ಶಾಸಕರು ಪ್ರವಾಸಿ ತಾಣವಾಗಿಸುವ ಎಲ್ಲ ರೀತಿಯ ಪ್ರಯತ್ನ ನಡೆಸಿದ್ದಾರೆ. ಅದಕ್ಕೆ ಅರಣ್ಯ ಇಲಾಖೆ ಕೈಜೋಡಿಸಿದ್ದು ಅದು ಇನ್ನೂ ಕೈಗೂಡಬೇಕಾಗಿದೆ. ಒಟ್ಟು ಅರಣ್ಯ ಪ್ರದೇಶ ಬಹು ಸುಂದರವಾಗಿ ಬೆಳೆದು ನಿಂತಿದ್ದು ನೋಡುಗರ ಮೈಮನ ಸೆಳೆಯುವಂತಿದೆ.