ಸಂಡೂರು: ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು ಬಿತ್ತನೆಯ ಕಾರ್ಯ ಪ್ರಾರಂಭವಾಗಿದೆ. ರೈತನ ಮೊಗದಲ್ಲಿ ಹರ್ಷ ಮೂಡಿದೆ. ತಾಲೂಕಿನಾದ್ಯಂತ ಒಟ್ಟು 613.83 ಮಿಮೀ ಮಳೆಯಾಗಿದ್ದು, ಅಲ್ಲಲ್ಲಿ ಹೊಂಡಗಳು ತುಂಬಿದ್ದು, ದನಕರುಗಳಿಗೆ ನೀರಿನ ದಾಹ ನೀಗಿದಂತಾಗಿದೆ.
ತಾಲೂಕಿನ ಒಟ್ಟು ಭೌಗೋಳಿಕ 94,359 ಹೆಕ್ಟೇರ್ ಪ್ರದೇಶವಿದ್ದು, ಅದರಲ್ಲಿ 34,290 ಹೆಕ್ಟೇರ್ ಪ್ರದೇಶ ಸಾಗುವಳಿ ಭೂಮಿಯಾಗಿದೆ. ಅದರಲ್ಲಿ ಪ್ರಮುಖವಾಗಿ 28,290 ಹೆಕ್ಟೇರ್ ಭೂಮಿ ಮಳೆಯಾಶ್ರಿತ ಬಿತ್ತನೆಯ ಭೂಮಿಯಾಗಿದೆ. ತಾಲೂಕಿನಾದ್ಯಂತ ಜೋಳ, ಮೆಕ್ಕೆಜೋಳ, ಸಜ್ಜೆ, ರಾಗಿ, ನವಣೆ, ತೊಗರಿ, ಶೇಂಗ, ಸೂರ್ಯಕಾಂತಿ, ತೊಗರಿ, ಗುರೆಳ್ಳು ಬಿತ್ತನೆ ಮಾಡುತ್ತಾರೆ.
ತಾಲೂಕಿನಾದ್ಯಂತ ಉತ್ತಮ ಮಳೆಯ ಪರಿಣಾಮ ಕೃಷಿ ಹೊಂಡಗಳು ತುಂಬಿವೆ. ಕೆಲವು ಚೆಕ್ ಡ್ಯಾಂಗಳಲ್ಲಿ ನೀರಿನ ಸಂಗ್ರಹವಾಗಿದೆ. ಇದರಿಂದ ನಿಂತ ಬೋರ್‌ಗಳು ಮತ್ತೆ ಪುನರಾರಂಭವಾದ ಕಾರಣ ರೈತರು ತಮ್ಮ ಬಾಳೆ, ಇತರ ತೋಟಗಾರಿಕೆ ಬೆಳೆಗಳನ್ನು ಮತ್ತೆ ಬೆಳೆಯಲು ಚುರುಕುಗೊಂಡಿದ್ದಾರೆ. ಜೋಳದ ಬಿತ್ತನೆ: 3750 ಹೆಕ್ಟೇರ್ ಗುರಿ ಹೊಂದಿದ್ದು, ಈಗಾಗಲೇ 1127.63 ಹೆಕ್ಟೇರ್ ಬಿತ್ತನೆಯಾಗಿದೆ. ರಾಗಿ: 550 ಹೆಕ್ಟೇರ್ ಗುರಿ ಹೊಂದಿದ್ದು, 21 ಹೆಕ್ಟೇರ್ ಬಿತ್ತನೆಯಾಗಿದೆ. ಮೆಕ್ಕೆ ಜೋಳ: 13000 ಹೆಕ್ಟೇರ್ ಬಿತ್ತನೆ ಗುರಿ ಇದ್ದು, ಇದರಲ್ಲಿ 323 ಹೆಕ್ಟೇರ್ ಬಿತ್ತನೆಯಾಗಿದೆ. ಸಜ್ಜೆ: 2400 ಹೆಕ್ಟೇರ್ ಬಿತ್ತನೆ ಗುರಿ ಇದ್ದು, 62 ಹೆಕ್ಟೇರ್ ಬಿತ್ತನೆಯಾಗಿದೆ. ಇತರ ಒಟ್ಟು ಬೆಳೆ ಗುರಿ 21,580 ಗುರಿ ಹೊಂದಿದ್ದು, ಈಗಾಗಲೇ 1533.63 ಹೆಕ್ಟೇರ್ ಬಿತ್ತನೆಯಾಗಿದೆ.
ತಾಲೂಕಿನಾದ್ಯಂತ ಒಟ್ಟು 24 ಕೆರೆಗಳಿವೆ. ಅದರಲ್ಲಿ ಸಂಡೂರು 1, ಚೋರನೂರು 19, ತೋರಣಗಲ್ಲು 4 ಕೆರೆಗಳು, 880 ಬಾವಿಗಳು ಇವೆ. ಕಾಲುವೆ ನೀರಾವರಿಯಿಂದಲೂ ಕೃಷಿ ಚಟುವಟಿಕೆ ನಡೆಯುತ್ತದೆ. ತಾಲೂಕಿನಾದ್ಯಂತ ಒಟ್ಟು 22,300 ಕೃಷಿ ಕುಟುಂಬಗಳಿದ್ದು, ಅದರಲ್ಲಿ 15,800 ಮದ್ಯಮ, 3923 ಇತರೆ ರೈತ ಕುಟುಂಬಳು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು, ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಈಗಾಗಲೇ ರೋಹಿಣಿ ಮಳೆಗೆ ಜೋಳ ಬಿತ್ತನೆ ಕಾರ್ಯ ಪ್ರಾರಂಭವಾಗಿದ್ದು, ತಾಲೂಕಿನ ಕೃಷಿ ಇಲಾಖೆಯು ರೈತರಿಗೆ ಬೇಕಾದ ಎಲ್ಲ ರೀತಿಯ ಬೀಜ ಮತ್ತು ಗೊಬ್ಬರ ಪೂರೈಕೆಗೆ ಸಿದ್ಧತೆ ಮಾಡಿಕೊಂಡು ವಿತರಣೆ ಮಾಡುತ್ತಿದೆ. ಸಂಡೂರು ರೈತ ಸಂಪರ್ಕ ಕೇಂದ್ರದಲ್ಲಿ ಒಟ್ಟು 92.93 ಟನ್ ಬೀಜದ ದಾಸ್ತಾನು ಮಾಡಲಾಗಿದೆ. ಇದರಲ್ಲಿ 7.21 ಟನ್ ಬೀಜ ವಿತರಿಸಲಾಗಿದೆ. ಚೋರನೂರು ಕೇಂದ್ರದಲ್ಲಿ 384.60 ಕ್ವಿಂಟಲ್ ಬೀಜ ದಾಸ್ತಾನು ಮಾಡಿದರೆ ಅದರಲ್ಲಿ 89.80 ಕ್ವಿಂಟಲ್ ವಿತರಿಸಲಾಗಿದೆ. ಬಂಡ್ರಿ ಬೀಜ ಮಾರಾಟ ಕೇಂದ್ರದಲ್ಲಿ 26.55 ಕ್ವಿಂಟಲ್ ದಾಸ್ತಾನು , 19.50 ವಿತರಣೆ, ತೋರಣಗಲ್ಲು ರೈತ ಸಂಪರ್ಕ ಕೇಂದ್ರದಲ್ಲಿ 37.07 ಕ್ವಿಂಟಲ್ ದಾಸ್ತಾನು, 3.27 ವಿತರಣೆಯಾಗಿದೆ ಒಟ್ಟು 541.15 ಕ್ವಿಂಟಲ್ ದಾಸ್ತಾನು, 119.78 ಬೀಜ ವಿತರಣೆ ಮಾಡಲಾಗಿದೆ. ಒಟ್ಟು 421.37 ಕ್ವಿಂಟಲ್ ಬೀಜ ಉಳಿದಿದೆ.
•
ಗೌರಾ ಮುಕುಂದರಾವ್,
ಕೃಷಿ ಇಲಾಖೆ ಅಧಿಕಾರಿ.