Advertisement

ಆಗಸ್ಟ್‌  ಪ್ರಥಮ ವಾರದಲ್ಲಿ ಮರು ಆರಂಭ ನಿರೀಕ್ಷೆ

01:29 AM Jul 30, 2021 | Team Udayavani |

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸಿಆರ್‌ಝಡ್‌ ಹಾಗೂ ನಾನ್‌ ಸಿಆರ್‌ಝಡ್‌ ವಲಯದಲ್ಲಿ  ಜೂ. 1ರಿಂದ‌ ಎರಡು ತಿಂಗಳು ಜಾರಿಯಲ್ಲಿದ್ದ ಮರಳುಗಾರಿಕೆ ನಿಷೇಧ ಜು. 31ಕ್ಕೆ ಕೊನೆಗೊಳ್ಳಲಿದೆ. ಆಗಸ್ಟ್‌ ಪ್ರಥಮ ವಾರದಲ್ಲಿ ಮರು ಆರಂಭಿಸಲು ಸಿದ್ಧತೆಗಳು ನಡೆಯುತ್ತಿವೆ.

Advertisement

ಜಿಲ್ಲಾಧಿಕಾರಿ ಅಧ್ಯಕ್ಷತೆ ಯಲ್ಲಿರುವ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಮರಳುಗಾರಿಕೆ ಪುನರಾರಂಭ ಕುರಿತಂತೆ ಸಭೆ ನಡೆಸಿ ಅಧಿಸೂಚನೆ ಹೊರಡಿಸಿದ ಬಳಿಕ ಮರಳುಗಾರಿಕೆಗೆ ಚಾಲನೆ ದೊರಕ ಲಿದೆ. ಹಾಲಿ ಅವಧಿಯಲ್ಲಿ  ಸಿಆರ್‌ಝಡ್‌ ವಲಯದಲ್ಲಿ ನೀಡಿರುವ ಪರವಾನಿಗೆ ಅವಧಿ ಸೆಪ್ಟಂಬರ್‌ ಅಂತ್ಯದವರೆಗೆ ಇದ್ದು ಅಲ್ಲಿಯ ವರೆಗೆ ಸಿಆರ್‌ಝಡ್‌ ವಲಯದಲ್ಲಿ ಮರಳು ತೆಗೆಯಲು ಅವಕಾಶವಿದೆ. ಬಳಿಕ

ಹೊಸದಾಗಿ ಬ್ಯಾಥಮೆಟ್ರಿಕ್‌ ಸರ್ವೇ ಆಗಿ  ಮರಳು ದಿಬ್ಬ ಗುರುತಿಸಿ  ಪರಿಸರ ಇಲಾಖೆಯ ಅನುಮತಿ ಪಡೆದು ಮರಳು ಗಾರಿಕೆ ಆರಂಭಗೊಳ್ಳಬೇಕಿದೆ.   2020ರ ನವೆಂಬರ್‌ನಲ್ಲಿ ಮರು ಆರಂಭ ಗೊಂಡಿತ್ತು. ಸಿಆರ್‌ಝಡ್‌ ವ್ಯಾಪ್ತಿಯೊಳಗೆ ಬರುವ ನೇತ್ರಾವತಿಯಲ್ಲಿ  8, ಗುರುಪುರ ನದಿಯಲ್ಲಿ 4 ಹಾಗೂ

ಶಾಂಭವಿ ನದಿಯಲ್ಲಿ  1  ಬ್ಲಾಕ್‌ ಸೇರಿದಂತೆ 13 ಬ್ಲಾಕ್‌ಗಳಲ್ಲಿ (ದಿಬ್ಬ) ಈ ಬಾರಿ ಮರಳು ತೆರವಿಗೆ ಪರಿಸರ ಇಲಾಖೆಯಿಂದ ಅನುಮತಿ ಲಭಿಸಿ ಎರಡು ಹಂತಗಳಲ್ಲಿ 105 ಮಂದಿ ಗುತ್ತಿಗೆದಾರರಿಗೆ ಮರಳು ತೆಗೆಯಲು ಪರವಾನಿಗೆ ನೀಡಲಾಗಿತ್ತು. ಸಿಆರ್‌ಝಡ್‌ನ‌ಲ್ಲಿ  ಕಳೆದ ನವೆಂಬರ್‌ನಿಂದ  ಮೇ 10ರ ವರೆಗೆ ಒಟ್ಟು 2,26,852 ಮೆ.ಟನ್‌  ಮರಳು ತೆರವುಗೊಳಿಸಲಾಗಿತ್ತು. ನಾನ್‌ ಸಿಆರ್‌ಝಡ್‌ ವಲಯದಲ್ಲಿ ಇ-ಟೆಂಡರ್‌ ಮೂಲಕ 16 ಬ್ಲಾಕ್‌ಗಳ ಗುತ್ತಿಗೆ ಮಂಜೂರು ಮಾಡಲಾಗಿದ್ದು 1,66,684 ಮೆಟ್ರಿಕ್‌ ಟನ್‌  ಮರಳು ತೆರವುಗೊಳಿಸಲಾಗಿತ್ತು.

ಉಡುಪಿಯಲ್ಲೂ ಸಿದ್ಧತೆ:

Advertisement

ಉಡುಪಿ ಜಿಲ್ಲೆಯ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಜಿಲ್ಲಾಡಳಿತದ ಸೂಚನೆ ಮೇರೆಗೆ ಆ. 1ರಿಂದ ಮರಳುಗಾರಿಕೆ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಮರಳುಗಾರಿಕೆ ನಡೆಸುವವರ ಬಳಿ ಮಾತುಕತೆ ನಡೆಸುತ್ತಿದ್ದು ಸೋಮವಾರ ಖಚಿತ ಚಿತ್ರಣ ಸಿಗಲಿದೆ.

ಉಡುಪಿ ಜಿಲ್ಲೆಯಲ್ಲಿ 8,000 ಮೆಟ್ರಿಕ್‌ ಟನ್‌ ಮರಳು ಉತ್ಪಾದಿಸುವ ಗುರಿ ಹೊಂದಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಇದು ಮುಂದಿನ ಜೂನ್‌ ವರೆಗೆ ಸಾಕಾಗಲಿದೆ. ಸರಕಾರದಿಂದ ಹಸಿರುನಿಶಾನೆ ಸಿಕ್ಕಿದ ತತ್‌ಕ್ಷಣ ಆರಂಭವಾಗಲಿದೆ.

ಹೊಸದಾಗಿ ಪ್ರಕ್ರಿಯೆ:

ಸಿಆರ್‌ಝಡ್‌ ವಲಯದಲ್ಲಿ ಈ ಬಾರಿಯ ಮರಳುಗಾರಿಕೆ ಅನುಮತಿ ಅವಧಿ ಮುಕ್ತಾಯಗೊಂಡ ಹೊಸದಾಗಿ ಪ್ರಕ್ರಿಯೆಗಳು ನಡೆಯಬೇಕಿದೆ. ನೇತ್ರಾವತಿ, ಫಲ್ಗುಣಿ ಹಾಗೂ ಶಾಂಭವಿ ನದಿಯ ಸಿಆರ್‌ಝಡ್‌ ವಲಯದಲ್ಲಿ ಬ್ಯಾಥಮೆಟ್ರಿಕ್‌ ಸರ್ವೇ ನಡೆದು ಮರಳು ದಿಬ್ಬಗಳನ್ನು ಗುರುತಿಸಿದ ಬಳಿಕ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿರುವ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ವರದಿಯನ್ನು ಪರಿಶೀಲಿಸಿ ಕರ್ನಾಟಕ ಕರಾವಳಿ ವಲಯ ನಿರ್ವಹಣೆ ಸಮಿತಿಗೆ (ಕೆಸಿಝಡ್‌ಎಂ) ಅನುಮೋದನೆಗೆ ಕಳುಹಿಸಿಕೊಡುತ್ತದೆ. ಕೆಸಿಝಡ್‌ಎಂ ಇದನ್ನು ಪರಿಶೀಲಿಸಿ ಅನುಮೋದನೆ ನೀಡಿದ ಬಳಿಕ ಹೊಸದಾಗಿ ಮರಳುಗಾರಿಕೆ ಪ್ರಕ್ರಿಯೆಗಳಿಗೆ ಚಾಲನೆ ದೊರಕುತ್ತದೆ.

ದ.ಕ. ಜಿಲ್ಲೆಯಲ್ಲಿ ಜೂ. 1ರಿಂದ ಇದ್ದ 2 ತಿಂಗಳ ಮರಳು ಗಾರಿಕೆಗೆ ನಿಷೇಧ ಜು. 31ಕ್ಕೆ ಕೊನೆಯಾಗುತ್ತದೆ. ಮರಳು  ಉಸ್ತುವಾರಿ ಸಮಿತಿ ಸಭೆ ನಡೆಸಿ ಮುಂದಿನ ಕ್ರಮದ ಬಗ್ಗೆ ಸೂಚಿಸಲಾಗುವುದು. – ಡಾ| ಕೆ.ವಿ. ರಾಜೇಂದ್ರ, ಜಿಲ್ಲಾಧಿಕಾರಿ, ಜಿಲ್ಲಾ ಮರಳು  ಉಸ್ತುವಾರಿ ಸಮಿತಿಯ ಅಧ್ಯಕ್ಷ

ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆ ಪುನಃ ಆರಂಭಿಸಲು ಎಲ್ಲ ಸಿದ್ಧತೆಗಳನ್ನು ನಡೆಸಲಾಗಿದೆ. ಸರಕಾರ ದಿಂದ ಸೂಚನೆ ಬಂದ ತತ್‌ಕ್ಷಣ ಆರಂಭವಾಗಲಿದೆ.– ಜಿ. ಜಗದೀಶ್‌,  ಜಿಲ್ಲಾಧಿಕಾರಿ, ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next