Advertisement

ಅ.15ರಿಂದ ಮರಳುಗಾರಿಕೆ ಋತು ಆರಂಭ; ಅಕ್ರಮ ಮರಳುಗಾರಿಕೆಗೆ ಬೀಳದ ಕಡಿವಾಣ

08:10 PM Oct 04, 2021 | Team Udayavani |

ವಿಶೇಷ ವರದಿ- ಕುಂದಾಪುರ: ಕಟ್ಟಡ, ಮನೆ ನಿರ್ಮಾಣಕ್ಕೆ ಮರಳು ಯಾವಾಗ ದೊರೆಯುತ್ತದೆ ಎಂದು ಕೊರಳು ಉದ್ದ ಮಾಡುವವರಿಗೆ ಶುಭ ಸುದ್ದಿ. ಅ.15ರಿಂದ ಮರಳುಗಾರಿಕೆ ಕುಂದಾಪುರ, ಬೈಂದೂರಿನಲ್ಲಿ ಆರಂಭವಾಗಲಿದ್ದು ಜಿಲ್ಲೆಯ ಇತರೆಡೆ ಕೆಲವೇ ದಿನಗಳಲ್ಲಿ ಮರಳು ಲಭ್ಯವಾಗಲಿದೆ.

Advertisement

ಮರಳಿಲ್ಲ
ಅಭಿವೃದ್ಧಿ ಕಾರ್ಯಗಳಿಗೆ, ಖಾಸಗಿ ಕಟ್ಟಡಗಳ ರಚನೆಗೆ ಮರಳಿಗಾಗಿ ಜಿಲ್ಲೆಯಲ್ಲಿ ಮರಳು ಗಣಿ ಆರಂಭವಾಗದೆ ಹೊರ ತಾಲೂಕನ್ನು ಆಶ್ರಯಿಸಬೇಕಿದೆ. ಮರಳು ಆ್ಯಪ್‌ ಮೂಲಕ ಮರಳು ಪಡೆಯಲು ಅವಕಾಶ ಇರುವಾಗಲೂ ದೂರದಿಂದ ಬರುವ ಕಾರಣ ದುಬಾರಿಯಾಗುತ್ತದೆ. ಹಿರಿಯಡಕ, ಬ್ರಹ್ಮಾವರ ತಾಲೂಕಿನಿಂದ ಬೈಂದೂರು ತಾಲೂಕಿನ ಮೂಲೆ ಮೂಲೆಗೆ ಮರಳು ತಲುಪುವಾಗ ಸಾಗಾಟ ವೆಚ್ಚವೇ ಅಧಿಕವಾಗುತ್ತದೆ.

ಅನುಮತಿ
ಗುಲ್ವಾಡಿ, ಕಾವ್ರಾಡಿ, ಬಳ್ಕೂರು, ಜಪ್ತಿ, ಹಳ್ನಾಡು ಗ್ರಾಮಗಳಲ್ಲಿ ವಾರಾಹಿ ನದಿಯಲ್ಲಿ ಮರಳುಗಾರಿಕೆಗೆ ಐದು ವರ್ಷಗಳ ಅವಧಿಗೆ 2019ರ ಸೆಪ್ಟಂಬರ್‌ನಿಂದ 2024ರ ಸೆಪ್ಟಂಬರ್‌ವರೆಗೆ ಮರಳುಗಾರಿಕೆಗೆ ಇಬ್ಬರಿಗೆ ಅನುಮತಿ ನೀಡಲಾಗಿತ್ತು. ಇಲ್ಲಿ ಅ.15ರಿಂದ ಮರಳು ತೆಗೆಯಲು ಆರಂಭಿಸಿ ಗ್ರಾಹಕರಿಗೆ ವಿತರಿಸಲಿವೆ.

ಮರಳು ಮಾರಾಟ
ಅನುಮತಿಯ ಬಳಿಕ ಪ್ರತೀ ವರ್ಷ ಗುಲ್ವಾಡಿ, ಕಾವ್ರಾಡಿ, ಬಳ್ಕೂರು ವ್ಯಾಪ್ತಿಯಲ್ಲಿ ಬ್ಲಾಕ್‌ ನಂ.4ರಲ್ಲಿ 56,821 ಮೆ.ಟನ್‌ ಮರಳು ತೆಗೆಯಲು ಅನುಮತಿ ಇತ್ತು. ಈ ಪೈಕಿ ಕಳೆದ ವರ್ಷ 48 ಸಾವಿರ ಮೆ.ಟನ್‌ ಮರಳು ತೆಗೆಯಲಾಗಿದೆ. ಉಳಿಕೆ 8,821 ಮೆ. ಟನ್‌ 2021ರ ಮಾರ್ಚ್‌ ವೇಳೆಗೆ ತೆಗೆಯಬೇಕಿತ್ತು. 700 ಲೋಡ್‌ನ‌ಷ್ಟು ಮರಳು ಸಂಗ್ರಹ ಮಾಡಿದ್ದರೂ ಸಕಾಲದಲ್ಲಿ ವಿತರಣೆ ಸಾಧ್ಯವಾಗಿರಲಿಲ್ಲ. ಹಳ್ನಾಡು, ಜಪ್ತಿ ವ್ಯಾಪ್ತಿಯಲ್ಲಿ ಬ್ಲಾಕ್‌ ನಂ.6ರಲ್ಲಿ ಪ್ರತೀ ವರ್ಷ 27,218 ಮೆ. ಟನ್‌ ಮರಳು ತೆಗೆಯಲು ಅನುಮತಿಯಿದ್ದು ಕಳೆದ ವರ್ಷ ಪೂರ್ಣ ಪ್ರಮಾಣದಲ್ಲಿ ತೆಗೆಯಲಾಗಿದೆ. ಇಲ್ಲಿ 1 ಟನ್‌ಗೆ 7 ಸಾವಿರ ರೂ.ಗಳಂತೆ ಮರಳನ್ನು ನೀಡಬೇಕು. ಇದರಲ್ಲಿ ಸಾಗಾಣಿಕೆ ವೆಚ್ಚ ಸೇರಿಲ್ಲ.

ಇದನ್ನೂ ಓದಿ:ಅ.8 ರಂದು ಶೃಂಗೇರಿ ಶ್ರೀ ಶಾರದಾ ಪೀಠಕ್ಕೆ ರಾಷ್ಟ್ರಪತಿ ಆಗಮನ: ಹೆಲಿಪ್ಯಾಡ್‌ಗೆ ಸಿದ್ಧತೆ

Advertisement

ಅನುಮತಿ
ಉಡುಪಿ ಜಿಲ್ಲೆಯಲ್ಲಿ 171 ಪರವಾನಿಗೆದಾರರು ಮರಳುಗಾರಿಕೆ ಅನುಮತಿ ಪಡೆದಿದ್ದು ಆ್ಯಪ್‌ ಮೂಲಕ ಮರಳು ತರಿಸಿಕೊಳ್ಳಬಹುದು . ನಾನ್‌ಸಿಆರ್‌ಝಡ್‌ ಪ್ರದೇಶದಲ್ಲಿ ಮರಳುಗಾರಿಕೆಗೆ ಹೊಸ ಮರಳು ನೀತಿಯನ್ವಯ ಮರಳು ಅಡ್ಡೆಗಳನ್ನು ಗುರುತಿಸಿ ಅನುಮತಿ ನೀಡುವ ಪ್ರಕ್ರಿಯೆ ಚಾಲನೆಯಲ್ಲಿದೆ.

ಅಕ್ರಮ ಮರಳುಗಾರಿಕೆ
ಬಂಟ್ವಾಡಿ, ಮೊವಾಡಿ, ನಾಡ, ಬಡಾಕೆರೆ, ಗಂಗೊಳ್ಳಿ, ತೊಪ್ಲು, ಚುಂಗಿಗುಡ್ಡೆ, ಜೋಯಿಸರಬೆಟ್ಟು ಮೊದಲಾದೆಡೆ ಮರಳುಗಾರಿಕೆ ನಡೆಯುತ್ತಿದೆ. ಹೊರರಾಜ್ಯದ 1,884 ಕಾರ್ಮಿಕರು ಇಲ್ಲೆಲ್ಲ ಮರಳುಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ ಎನ್ನಲಾಗಿದೆ. ಜಿಪಿಎಸ್‌ ಅಳವಡಿಸಿದ ದೋಣಿ, ಟಿಪ್ಪರ್‌ ಇರಬೇಕೆಂಬ ನಿಯಮ ಇದ್ದರೂ ಅದನ್ನು ಉಲ್ಲಂ ಸಲಾಗಿದೆ. ಅದನ್ನು ಮರವೊಂದಕ್ಕೆ ತೂಗುಹಾಕುವ ಮೂಲಕ ಲಾರಿ ಎಲ್ಲಿಯೂ ಚಲಿಸುತ್ತಿಲ್ಲ ಎಂದು ಭಾಸವಾಗುವಂತೆ ಮಾಡಲಾಗಿದೆ ಎಂಬ ಆರೋಪವೂ ಇದೆ. ಜನಸಾಮಾನ್ಯರು ಅಕ್ರಮ ಮರಳುಗಾರಿಕೆಯಿಂದ ರೋಸಿ ಹೋಗಿದ್ದಾರೆ. ಜಿಲ್ಲಾಡಳಿತ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಅಪವಾದವೂ ಇದೆ.

ಬಗೆಹರಿಯದ ಸಮಸ್ಯೆ
ಉಡುಪಿ ಜಿಲ್ಲೆಯಲ್ಲಿ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ತೆಗೆಯುವ ಮರಳು ಧಕ್ಕೆಯಲ್ಲಿ ಒಂದು ಮೆಟ್ರಿಕ್‌ ಟನ್‌ಗೆ 550 ರೂ. ದರ ನಿಗದಿಪಡಿಸಲಾಗಿದೆ. ಮೂರು ಯುನಿಟ್‌ (10 ಮೆಟ್ರಿಕ್‌ ಟನ್‌) ಮರಳು 5,500 ರೂ.ಗಳಿಗೆ ಗ್ರಾಹಕರಿಗೆ ಲಭ್ಯವಾಗಬೇಕು. ಇದರಲ್ಲಿ ಸರಕಾರದ ರಾಜಸ್ವವೂ ಸೇರಿದೆ. ಲಾರಿಯಲ್ಲಿ 20 ಕಿ.ಮೀ. ವ್ಯಾಪ್ತಿಯಲ್ಲಿ ಮರಳು ಸಾಗಾಟಕ್ಕೆ 2,500 ರೂ. ದರ ನಿಗದಿಗೊಳಿಸಲಾಗಿದೆ. ಅನಂತರದ ಪ್ರತೀ ಕಿ.ಮೀ.ಗೆ 50 ರೂ. ಹೆಚ್ಚುವರಿ ದರ ನಿಗದಿಯಾಗಿದೆ. ಮರಳು ಬುಕ್ಕಿಂಗ್‌ ಆ್ಯಪ್‌ ಗೊಂದಲಮಯವಾಗಿದ್ದು, ಸರ್ವರ್‌ ತೊಂದರೆ, ಒಟಿಪಿ ಸರಿಯಾಗಿ ಬಾರದೆ ಇರುವುದು ಅನೇಕ ತಾಂತ್ರಿಕ ಸಮಸ್ಯೆಗಳಿದ್ದವು. ಆ್ಯಪ್‌ ಮೂಲಕ ಬುಕ್ಕಿಂಗ್‌ ಮಾಡಿದರೆ ಮರಳಿನ ದರ 5,500 ರೂ., ಲಾರಿ ಬಾಡಿಗೆ, ಜಿಎಸ್‌ಟಿ ಇತ್ಯಾದಿ ಸೇರಿ 9 ಸಾವಿರ ರೂ. ಬರಬೇಕು. ಆದರೆ ಬುಕ್ಕಿಂಗ್‌ ಮಾಡುತ್ತಾ ಹೋದಂತೆ 13,149 ರೂ.ಗೆ ತಲುಪುತ್ತಿತ್ತು. ಆ್ಯಪ್‌ ಶುಲ್ಕ ಮತ್ತಿತರ ಶುಲ್ಕ ಸೇರಿ 10 ಮೆ.ಟ. ಮರಳಿಗೆ 13 ರಿಂದ 16,000 ರೂ.ಗಳಾಗುತ್ತಿತ್ತು. ಈ ಬಾರಿ ಸಮಸ್ಯೆ ನಿವಾರಣೆಯಾಗುವ ಭರವಸೆ ಜನರದ್ದು.

ಮಳೆ ಬಂದರೆ ರಸ್ತೆ ಕೆಸರು ಗದ್ದೆ
ಹೊಸಾಡು ಗ್ರಾಮದ ಬಂಟ್ವಾಡಿ ಮೊದಲಾದೆಡೆ ಅಕ್ರಮ ಮರಳುಗಾರಿಕೆಯ ವಾಹನಗಳು ಹೋಗುವ ಕಾರಣ ರಸ್ತೆ ಹಾಳಾಗಿದೆ. ಮಳೆ ಬಂದರೆ ಕೆಸರು ಗದ್ದೆಯಂತಾಗುತ್ತದೆ. ಹೊಂಡ ಗುಂಡಿಯ ರಸ್ತೆಯಲ್ಲಿ ವಾಹನಗಳ ಓಡಾಟ ಕಠಿನವಾಗಿದೆ. ಒಂದು ತಿಂಗಳಿನಿಂದ ಸೇತುವೆ ಬಳಿ ಮರಳುಗಾರಿಕೆ ಆರಂಭವಾಗಿದೆ. ಮನೆಯ ಆವರಣ ಗೋಡೆ ಬಿರುಕು ಬಿಟ್ಟು ಬೀಳುವ ಭೀತಿಯಿದೆ. ಮನೆಗಳ ಛಾವಣಿ ಬಿರುಕುಬಿಟ್ಟಿದ್ದು ನೀರು ಸರಬರಾಜಿನ ಪೈಪುಗಳು ಒಡೆದಿವೆ. ಅನಾರೋಗ್ಯವಾದರೆ ಈ ರಸ್ತೆಯಲ್ಲಿ ಸಣ್ಣಪುಟ್ಟ ವಾಹನಗಳು ಬರದಂತಾಗಿದೆ.

ಅನುಮತಿ ಪ್ರಕ್ರಿಯೆ
ಕುಂದಾಪುರದಲ್ಲಿ ಈಗಾಗಲೇ ನೀಡಿದ ಪರವಾನಿಗೆ 2024ರ ವರೆಗೆ ಇದ್ದು ಉಳಿದೆಡೆ ಶೀಘ್ರದಲ್ಲಿ ಆರಂಭವಾಗಲಿದೆ. ಈ ಕುರಿತು ಪ್ರಕ್ರಿಯೆಗಳು ನಡೆಯುತ್ತಿವೆ. ಸಮಿತಿ ಸಭೆ ನಡೆದಿದ್ದು ಅನುಮತಿ ನೀಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.
-ಸಂದೀಪ್‌ ಜಿ.ಯು.
ಹಿರಿಯ ಭೂವಿಜ್ಞಾನಿ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next