Advertisement

ಮತ್ತೆ ಷರತ್ತು ಅಡ್ಡಿ; ಸಡಿಲಿಕೆಗೆ ಜಿಲ್ಲಾಡಳಿತ ಪ್ರಸ್ತಾವನೆ

12:50 AM Jan 23, 2019 | Team Udayavani |

ಮಂಗಳೂರು: ನಾನ್‌ ಸಿಆರ್‌ಝಡ್‌ ವಲಯದ‌ಲ್ಲಿ ಮರಳುಗಾರಿಕೆ ನಡೆಸಲು ಗುತ್ತಿಗೆದಾರರು ಕನಿಷ್ಠ ಐದು ವರ್ಷ ಸಾಂಪ್ರದಾಯಿಕ ಮರಳುಗಾರಿಕೆ ನಿರತರಾಗಿರಬೇಕು ಎಂಬ ಷರತ್ತು ಜಿಲ್ಲೆಯಲ್ಲಿ ಮರಳುಗಾರಿಕೆಗೆ ಮತ್ತೆ ಅಡ್ಡಿಯಾಗಿದೆ. 

Advertisement

ಈ ನಿಯಮ ಸಡಿಲಗೊಳಿಸಿ ಮರಳುಗಾರಿಕೆಗೆ ಅವಕಾಶ ನೀಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ನಾನ್‌ ಸಿಆರ್‌ಝಡ್‌ ವಲಯದ ಮರಳುಗಾರಿಕೆಗೆ 2 ಬಾರಿ ಟೆಂಡರ್‌ ಕರೆಯಲಾಗಿದ್ದರೂ ಷರತ್ತುಗಳು ಕಠಿನವಾಗಿದ್ದರಿಂದ ಇಬ್ಬರು ಮಾತ್ರ ಭಾಗವಹಿಸಲು ಸಾಧ್ಯವಾಗಿತ್ತು. ನಿಯಮದಲ್ಲಿ ಕೆಲವು ಸಡಿಲಿಕೆ ತಂದು ನ. 15ರಂದು 3ನೇ ಬಾರಿಗೆ ಕರೆದ ಟೆಂಡರ್‌ಗೆ 15 ಮಂದಿ ಪ್ರತಿಕ್ರಿಯಿಸಿದ್ದರು. ಇವರಲ್ಲಿ ಕೇವಲ 6 ಮಂದಿ ಮಾತ್ರ ನಿಯಮ ಪ್ರಕಾರ 5 ವರ್ಷ ಸಾಂಪ್ರದಾಯಿಕ ಮರಳುಗಾರಿಕೆ ನಡೆಸಿದ್ದಾರೆ. ಉಳಿದ 9 ಮಂದಿ ಈ ಅರ್ಹತೆ ಹೊಂದಿಲ್ಲ. 

ಹೀಗಾಗಿ ನಿಯಮ ಇನ್ನೂ ಸಡಿಲಗೊಳಿಸಬೇಕು ಎಂಬ ಪ್ರಸ್ತಾವನೆಯನ್ನು ಸಲ್ಲಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
ಇದರ ಜತೆಗೆ ನಾನ್‌ಸಿಆರ್‌ಝಡ್‌ನ‌ಲ್ಲಿ ಟೆಂಡರ್‌ ಸಲ್ಲಿಸದೆ ಬಾಕಿಯುಳಿದಿರುವ ಬ್ಲಾಕ್‌ಗಳನ್ನು ಸರಕಾರಿ ಏಜೆನ್ಸಿಗಳಿಗೆ ನೀಡಲು ಜಿಲ್ಲಾಡಳಿತ ನಿರ್ಧರಿಸಿದ್ದು, ಈ ಕುರಿತು ಜಿಲ್ಲಾ ಮರಳು ಕಾರ್ಯ ಪಡೆಯ ಸಭೆ ನಡೆಯಲಿದೆ.
ನಾನ್‌ ಸಿಆರ್‌ಝಡ್‌ನ‌ಲ್ಲಿ ಮರಳು ಗಾರಿಕೆಗೆ ಅರ್ಹ ಗುತ್ತಿಗೆದಾರರು ಲಭ್ಯವಾಗದಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಸಂಬಂಧಪಟ್ಟ ಗ್ರಾಮ ಪಂಚಾಯತ್‌ಗಳು, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ, ನಿರ್ಮಿತಿ ಕೇಂದ್ರ, ಲೋಕೋಪಯೋಗಿ ಇಲಾಖೆಗಳಿಗೆ ಮರಳುಗಾರಿಕೆಯನ್ನು ವಹಿಸಿಕೊಡಲು ರೂಪುರೇಷೆಗಳನ್ನು ಸಿದ್ಧಪಡಿಸುವಂತೆ ಜ. 4ರಂದು ಬೆಂಗಳೂರಿನಲ್ಲಿ ಕರಾವಳಿ ಜಿಲ್ಲೆಗಳ ಮರಳು ಸಮಸ್ಯೆಗೆ ಸಂಬಂಧಿಸಿ ಜರಗಿದ ಶಾಸಕರು, ಸಚಿವರು, ಅಧಿಕಾರಿಗಳ ಸಭೆಯಲ್ಲಿ ಗಣಿಗಾರಿಕೆ ಸಚಿವ ರಾಜಶೇಖರ ಪಾಟೀಲ್‌ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು.

ಬಾಕಿ 10 ಬ್ಲಾಕ್‌ಗಳಿಗೂ ಅನುಮತಿ 
ಜಿಲ್ಲೆಯಲ್ಲಿ ಸಿಆರ್‌ಝಡ್‌ ವಲಯದಲ್ಲಿ ಗುರುತಿಸಲಾಗಿರುವ 22 ಮರಳು ದಿಬ್ಬಗಳ (ಬ್ಲಾಕ್‌) ಪೈಕಿ 12ರಲ್ಲಿ 72 ಮಂದಿ ಗುತ್ತಿಗೆದಾರರಿಗೆ ಮರಳು ತೆಗೆಯುವುದಕ್ಕೆ ಈಗಾಗಲೇ ಅನುಮೋದನೆ ನೀಡಿದ್ದು, ಮರಳುಗಾರಿಕೆ ನಡೆಯುತ್ತಿದೆ. ಬಾಕಿ 10 ಬ್ಲಾಕ್‌ಗಳಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಯಿಂದ ಅನುಮತಿ ದೊರಕಿದ್ದು, ಪ್ರಥಮ ಹಂತದಲ್ಲಿ ಬಾಕಿ 24 ಮಂದಿ ಅರ್ಹ ಗುತ್ತಿಗೆದಾರರಿಗೆ ವಹಿಸಲು ನಿರ್ಧರಿಸಲಾಗಿದೆ. 

Advertisement

ಸಿಆರ್‌ಝಡ್‌ ವಲಯದ ಬಾಕಿ 10 ದಿಬ್ಬಗಳಲ್ಲೂ ಮರಳುಗಾರಿಕೆ ಅನುಮತಿಗೆ ಕ್ರಮ ಕೈಗೊಳ್ಳುವಂತೆ ಜ. 4ರಂದು ಬೆಂಗಳೂರಿನ ಸಭೆ ಯಲ್ಲಿ ಸಚಿವ ರಾಜಶೇಖರ ಪಾಟೀಲ್‌ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು.

ಕರೆಗಳು ಬರುತ್ತಿಲ್ಲ
ಜಿಲ್ಲೆಯಲ್ಲಿ ಮರಳು ಸಮಸ್ಯೆ ಕುರಿತು ಸಾರ್ವಜನಿಕರ ದೂರು ಹಾಗೂ ಅಹವಾಲು ಆಲಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್‌ ರೂಂ ಸ್ಥಾಪಿಸಲಾಗಿತ್ತು. ಆದರೆ ಯಾವುದೇ ದೂರುಗಳು ಬಂದಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ. 

ನಾನ್‌ಸಿಆರ್‌ಝಡ್‌ ವಲಯದಲ್ಲಿ ಮರಳು ಗುತ್ತಿಗೆ ವಹಿಸಿಕೊಳ್ಳಲು ಕನಿಷ್ಠ 5 ವರ್ಷ ಸಾಂಪ್ರದಾಯಿಕ ಮರಳುಗಾರಿಕೆ ಮಾಡಿರಬೇಕು ಎಂಬ ನಿಯಮ ಸಡಿಲಗೊಳಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಸಿಆರ್‌ಝಡ್‌ ವಲಯದಲ್ಲಿ ಬಾಕಿ 10 ಬ್ಲಾಕ್‌ಗಳಲ್ಲೂ ಗುತ್ತಿಗೆ ನೀಡಲಾಗುತ್ತಿದೆ. ಪೂರ್ಣ ಪ್ರಮಾಣದಲ್ಲಿ ಮರಳು ಲಭ್ಯತೆಗೆ ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಮರಳು ಸಮಸ್ಯೆ ಕುರಿತು ಸಾರ್ವಜನಿಕರಿಂದಲೂ ಈಗ ದೂರುಗಳು ಬರುತ್ತಿಲ್ಲ. ಮರಳು ದರವೂ ಇಳಿಕೆಯಾಗಿದ್ದು, 4ರಿಂದ 5 ಸಾವಿರ ರೂ.ಗೆ ಲಭ್ಯವಾಗುತ್ತಿರುವ ಮಾಹಿತಿ ಬಂದಿದೆ. 
– ಶಶಿಕಾಂತ ಸೆಂಥಿಲ್‌, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next