ಬೆಂಗಳೂರು: ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಕೆಲ ಯುವತಿ, ಯುವಕರಿಂದ ಲಕ್ಷಾಂತರ ರೂ. ಪಡೆದು ವಂಚಿಸಿದ ಆರೋಪದಡಿ ಕಾಂಗ್ರೆಸ್ ನಾಯಕಿ ಎನ್ನಲಾದ ಸಂಧ್ಯಾ ಪವಿತ್ರಾ ನಾಗರಾಜ್ ಎಂಬವರ ವಿರುದ್ಧ ಜ್ಞಾನಭಾರತಿ ಮತ್ತು ಜಯನಗರ ಪೊಲೀಸ್ ಠಾಣೆಗಳಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.
ಮಾರುತಿ ನಗರ ನಿವಾಸಿ ವೀಣಾ ಎಂಬವರು ನೀಡಿದ ದೂರಿನ ಮೇರೆಗೆ ಸಂಧ್ಯಾ ಪವಿತ್ರಾ ನಾಗರಾಜ್ ವಿರುದ್ಧ ಜ್ಞಾನಭಾರತಿ ಠಾಣೆ ಪೊಲೀಸರು ಗಂಭೀರ ಸ್ವರೂಪ ವಲ್ಲದ ಪ್ರಕರಣ (ಎನ್‌ಸಿಆರ್) ದಾಖಲಿಸಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮೂಲಕ ಪರಿಚಯವಾದ ಸಂಧ್ಯಾ, ಬಹುಮಹಡಿ ಕಟ್ಟಡದಲ್ಲಿ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದಾರೆ.
ಬಳಿಕ ಹಂತವಾಗಿ 20 ಲಕ್ಷ ರೂ. ಪಡೆದುಕೊಂಡಿದ್ದಾರೆ. ಆದರೆ, ಎರಡು ವರ್ಷಗಳು ಕಳೆದರೂ ಇದುವರೆಗೆ ಕೆಲಸ ಕೊಡಿಸಿಲ್ಲ. ಹಣವನ್ನು ವಾಪಸ್ ನೀಡಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಸಾಮಾಜಿಕ ಜಾಲತಾಣದಲ್ಲಿ ತನ್ನ ಫೋಟೋಗಳನ್ನು ಹರಿಬಿಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ವೀಣಾ ದೂರಿನಲ್ಲಿ ಆರೋಪಿಸಿದ್ದಾರೆ. ಹೀಗಾಗಿ ಪೊಲೀಸರು ಸಂಧ್ಯಾ ವಿರುದ್ಧ ಎನ್‌ಸಿಆರ್ ದಾಖಲಿಸಿದ್ದಾರೆ.
ಅಕ್ಕ-ತಮ್ಮನಿಗೆ ವಂಚನೆ: ಮತ್ತೂಂದು ಪ್ರಕರಣದಲ್ಲಿ ರಂಗಸ್ವಾಮಿ ಮತ್ತು ಆತನ ಸಹೋದರಿ ರೂಪಾ ಎಂಬವರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ 11.20 ಲಕ್ಷ ರೂ. ಪಡೆದು ವಂಚಿಸಿದ್ದಾರೆ. ಈ ಸಂಬಂಧ ಮಹಾಲಕ್ಷ್ಮಿ ಲೇಔಟ್ ನಿವಾಸಿ ರೂಪಾ ಎಂಬವರು 2023ರಲ್ಲಿ ಜಯನಗರ ಠಾಣೆಯಲ್ಲಿ ಸಂಧ್ಯಾ ಪವಿತ್ರಾ ನಾಗರಾಜ್, ಭಾನು ಪ್ರಕಾಶ್, ಹರೀಶ್ ಎಂಬವರ ವಿರುದ್ಧ ದೂರು ದಾಖಲಿಸಿದ್ದಾರೆ. ರಂಗಸ್ವಾಮಿ ಮತ್ತು ರೂಪಾ ಎಂಬವರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಭಾನುಪ್ರಕಾಶ್, ಹರೀಶ್ ಮೂಲಕ ಪರಿಚಯವಾದ ಸಂಧ್ಯಾ ಹಂತವಾಗಿ ಅಕ್ಕ-ತಮ್ಮನಿಂದ 11.20 ಲಕ್ಷ ರೂ. ಪಡೆದು ವಂಚಿಸಿದ್ದಾರೆ. ಈ ಸಂಬಂಧ ಕಳೆದ ವರ್ಷ ರೂಪಾ ದೂರು ನೀಡಿದ್ದರು.
ಠಾಣೆಗೆ ಬಂದಿದ್ದ ಆರೋಪಿಗಳು ಹಣ ವಾಪಸ್ ನೀಡುವುದಾಗಿ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದಾರೆ. ಆದರೆ, ಇದುವರೆಗೂ ಹಣ ನೀಡಿಲ್ಲ.
ಯುವಕನ ಗೋಳಾಟದ ವಿಡಿಯೋ ವೈರಲ್
ಇನ್ನೊಂದು ಪ್ರಕರಣದಲ್ಲಿ ಯಾದಗಿರಿ ಮೂಲದ ಚಂದು ಎಂಬಾತನಿಂದ ಲಕ್ಷಾಂತರ ರೂ. ಪಡೆದುಕೊಂಡು ಕೆಲಸ ಕೊಡಿಸದೇ ಸಂಧ್ಯಾ ವಂಚಿಸಿದ್ದಾರೆ. ಸದ್ಯ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಯುವಕ ಚಂದು, ತನ್ನ ಹಣ ತನಗೆ ವಾಪಸ್ ನೀಡಿ ಎಂದು ವಿಡಿಯೋ ಮಾಡಿ ಗೋಳಾಡುತ್ತಿದ್ದಾನೆ. ಮನೆಯಲ್ಲಿ ಕಷ್ಟ ಇದೆ, ಜತೆಗೆ ನನಗೆ ಅನಾರೋಗ್ಯವಿದೆ. ಆಸ್ಪತ್ರೆ ಖರ್ಚಿಗೆ ಹಣ ಬೇಕಿದೆ ನನ್ನ ಹಣ ವಾಪಸ್ ನೀಡಿ ಎಂದು ವಿಡಿಯೋದಲ್ಲಿ ಅಂಗಲಾಚಿದ್ದಾನೆ. ಸಂದ್ಯಾ ಅವರೊಂದಿಗೆ ಚಾಟ್ ಮಾಡಿರುವ ಮೆಸೇಜ್‌ಗಳು ಮತ್ತು ಹಣ ವಾಪಸ್ ನೀಡುವಂತೆ ಮಾಡಿರುವ ವಿಡಿಯೋ ವೈರಲ್ ಆಗಿವೆ.
ಸಿಎಂ, ಡಿಸಿಎಂ ಜತೆ ಫೋಟೋ
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಜತೆ ಸಂಧ್ಯಾ ಪವಿತ್ರಾ ನಾಗರಾಜ್ ತೆಗೆಸಿಕೊಂಡಿರುವ ಫೋಟೋಗಳು ಹರಿದಾಡುತ್ತಿದ್ದು, ಈ ಫೋಟೋಗಳನ್ನು ತೋರಿಸಿಯೇ ಆಕೆ, ಕಾಂಗ್ರೆಸ್ ನಾಯಕಿ ಎಂದು ಹೇಳಿಕೊಂಡು ವಂಚಿಸುತ್ತಿದ್ದಳು ಎಂದು ಹೇಳಲಾಗಿದೆ.