ಕೋಲ್ಕತಾ: ಸಂದೇಶಖಾಲಿಯಲ್ಲಿ ಮಹಿಳೆಯರು ದಾಖಲಿಸಿದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಮುಖಂಡ ಶಿಬಾಪ್ರಸಾದ್ ಹಜ್ರಾ ಅಲಿಯಾಸ್ ಶಿಬು ಹಜ್ರಾ ಅವರನ್ನು ಪಶ್ಚಿಮ ಬಂಗಾಳ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಪೊಲೀಸರು ಪ್ರಕರಣದಲ್ಲಿ ಟಿಎಂಸಿ ನಾಯಕರಾದ ಶಿಬಾಪ್ರಸಾದ್ ಹಜ್ರಾ ಮತ್ತು ಉತ್ತಮ್ ಸರ್ದಾರ್ ವಿರುದ್ಧ ಸಾಮೂಹಿಕ ಅತ್ಯಾಚಾರದ ಆರೋಪಗಳನ್ನು ಸೇರಿಸಿದ್ದಾರೆ. ತೃಣಮೂಲ ಕಾಂಗ್ರೆಸ್‌ನಿಂದ ಆರು ವರ್ಷಗಳ ಕಾಲ ಅಮಾನತುಗೊಂಡಿದ್ದ ಸರ್ದಾರ್ ನನ್ನು ಕಳೆದ ವಾರವೇ ಬಂಧಿಸಲಾಗಿತ್ತು.
ಕೆಲ ದಿನಗಳ ಹಿಂದೆ ಸಂದೇಶಖಾಲಿ ಮಹಿಳೆಯರು ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಪರಾರಿಯಾಗಿರುವ ಪಕ್ಷದ ಮುಖಂಡ ಶೇಖ್ ಷಹಜಹಾನ್ ಅವರ ಆಪ್ತರಾಗಿರುವ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ತಮ್ಮ ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354, ಮಹಿಳೆಯ ಮೇಲೆ ದೌರ್ಜನ್ಯ ಅಡಿಯಲ್ಲಿ ದೌರ್ಜನ್ಯ ಪ್ರಕರಣವನ್ನು ದಾಖಲಿಸಿದ್ದು, ದೂರುದಾರರ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾಗಿದೆ.
ಮಹಿಳೆ ನನಗೆ ಕಿರುಕುಳ ನೀಡಿಲ್ಲ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಂತರ ನ್ಯಾಯಾಲಯವು ಟಿಎಂಸಿ ನಾಯಕರ ವಿರುದ್ಧದ ಪ್ರಕರಣದಲ್ಲಿ ಸಾಮೂಹಿಕ ಅತ್ಯಾಚಾರದ ಆರೋಪಗಳನ್ನು ಸೇರಿಸಲು ಪೊಲೀಸರಿಗೆ ಆದೇಶ ನೀಡಿದೆ.
ಪ್ರಕರಣವು ಆಡಳಿತಾರೂಢ ಟಿಎಂಸಿ ಮತ್ತು ವಿಪಕ್ಷ ಬಿಜೆಪಿ ಹೊಸ ಸಂಘರ್ಷಕ್ಕೆ ಕಾರಣವಾಗಿ ತೀವ್ರ ಅಶಾಂತಿ ನಿರ್ಮಾಣವಾಗಿತ್ತು. ಕಾಂಗ್ರೆಸ್ ಮತ್ತು ಎಡಪಕ್ಷಗಳು ಟಿಎಂಸಿ ವಿರುದ್ಧ ಆಕ್ರೋಶ ಹೊರ ಹಾಕಿದ್ದವು.