ಕೋಲ್ಕತಾ: ಬಂಧಿತ ಸಂದೇಶಖಾಲಿ ದೌರ್ಜನ್ಯ ಪ್ರಕರಣ ಹಾಗೂ ಜಾರಿ ನಿರ್ದೇಶನಾಲಯ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದ ಪ್ರಮುಖ ಆರೋಪಿ, ಟಿಎಂಸಿ ಮುಖಂಡ ಶಹಜಹಾನ್ ಶೇಕ್ ಗೆ ಪಶ್ಚಿಮಬಂಗಾಳದ ಬಸ್ರಿಹಾತ್ ಕೋರ್ಟ್ ಗುರುವಾರ (ಫೆ.29) 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Rescued: 2 Km ಹೊತ್ತು ಸಾಗಿ ಆತ್ಮಹತ್ಯೆಗೆ ಯತ್ನಿಸಿದ ರೈತನ ಜೀವ ಉಳಿಸಿದ ಪೊಲೀಸ್ ಸಿಬ್ಬಂದಿ
ವಿಚಾರಣೆಯ ಹಿನ್ನೆಲೆಯಲ್ಲಿ ಆರೋಪಿಯನ್ನು 14 ದಿನಗಳ ಕಾಲ ಕಸ್ಟಡಿಗೆ ಒಪ್ಪಿಸಬೇಕೆಂದು ಪೊಲೀಸರು ಕೋರ್ಟ್ ಗೆ ಮನವಿ ಮಾಡಿಕೊಂಡಿದ್ದರು, ಆದರೆ ಕೋರ್ಟ್ 10 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿರುವುದಾಗಿ ಶಹಜಹಾನ್ ಪರ ವಕೀಲ ರಾಜಾ ಬೌಮಿಕ್ ತಿಳಿಸಿರುವುದಾಗಿ ವರದಿಯಾಗಿದೆ.
ಜನವರಿ ತಿಂಗಳಿನಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದ ವೇಳೆ ಶಹಜಹಾನ್ ಮತ್ತು ಬೆಂಬಲಿಗರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ (ಫೆ.29) ಬೆಳಗ್ಗೆ ಪಶ್ಚಿಮಬಂಗಾಳ ಪೊಲೀಸರು ಶಹಜಹಾನ್ ನನ್ನು ಬಂಧಿಸಿ, ಕೋರ್ಟ್ ಗೆ ಹಾಜರುಪಡಿಸಿದ್ದರು.
ಭೂ ಮಾಫಿಯಾ ಮತ್ತು ಲೈಂಗಿಕ ದೌರ್ಜನ್ಯದಲ್ಲಿ ಶಹಜಹಾನ್ ಹಾಗೂ ಆತನ ಬೆಂಬಲಿಗರು ಶಾಮೀಲಾಗಿದ್ದು, ಆತನನ್ನು ಬಂಧಿಸಬೇಕು ಎಂದು ಕಳೆದ ಒಂದು ತಿಂಗಳಿನಿಂದ ಸಂದೇಶ ಖಾಲಿಯಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಏತನ್ಮಧ್ಯೆ ಕೋರ್ಟ್ ಕೂಡಲೇ ಶಹಜಹಾನ್ ನನ್ನು ಹಾಜರುಪಡಿಸುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಪಶ್ಚಿಮಬಂಗಾಳ ಪೊಲೀಸರು ಬರೋಬ್ಬರಿ 55 ದಿನಗಳ ಬಳಿಕ ಶಹಜಹಾನ್ ನನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದರು.