ಮುಂಬೈ: ಕಳೆದ ವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ನ ಮಿನಿ ಹರಾಜಿನಲ್ಲಿ ಹಲವು ಯುವ ಆಟಗಾರರು ಭರ್ಜರಿ ಮೊತ್ತವನ್ನು ಪಡೆದಿದ್ದಾರೆ. ಇದುವರೆಗೆ ಹೆಸರು ಕೇಳದ ಕೆಲವು ವಿದೇಶಿ ಆಟಗಾರರು ಕೂಡಾ ಕೋಟ್ಯಾಂತರ ರೂ ಬಾಚಿಕೊಂಡಿದ್ದಾರೆ. ಆದರೆ ಇದೇ ವೇಳೆ ಅನುಭವಿ ಆಟಗಾರರು ಯಾರಿಗೂ ಬೇಡವಾಗಿದ್ದಾರೆ.
ಈ ಹಿಂದೆ ಸನ್ ರೈಸರ್ಸ್ ಹೈದರಾಬಾದ್ ಪರ ಮಿಂಚಿದ್ದ ವೇಗಿ ಸಂದೀಪ್ ಶರ್ಮಾ ಈ ಬಾರಿ ಸೇಲ್ ಆಗಲೇ ಇಲ್ಲ. ತನ್ನ ಪವರ್ ಪ್ಲೇ ಬೌಲಿಂಗ್ ನಲ್ಲಿ ಸದ್ದು ಮಾಡಿದ್ದ ಸಂದೀಪ್ ಶರ್ಮಾ ಬಿಕರಿಯಾಗದೇ ಉಳಿದಿರುವುದು ಅಚ್ಚರಿ ಮೂಡಿಸಿದೆ. ಇದು ಸ್ವತಃ ಸಂದೀಪ್ ಶರ್ಮಾ ಅವರಿಗೆ ಬೇಸರ ಮೂಡಿಸಿದೆ.
ತಾನು ಮಾರಾಟವಾಗದೆ ಹೋಗುತ್ತಿರುವುದನ್ನು ನೋಡಿ ‘ಆಘಾತ ಮತ್ತು ನಿರಾಶೆ’ ಆಗಿದೆ ಎಂದು ಪಂಜಾಬ್ ವೇಗಿ ಸಂದೀಪ್ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ:ತುನಿಶಾ, ವೈಶಾಲಿ, ಪಲ್ಲವಿ.. 2022 ರಲ್ಲಿ ಪ್ರೀತಿಯಲ್ಲೇ ಅಂತ್ಯ ಕಂಡ ಕಿರುತೆರೆ ನಟಿಯರು ಇವರು..
“ನಾನು ಏಕೆ ಮಾರಾಟವಾಗದೆ ಹೋದೆ ಎಂದು ನನಗೆ ತಿಳಿದಿಲ್ಲ. ನಾನು ಯಾವ ತಂಡಕ್ಕಾಗಿ ಆಡಿದ್ದೀನೋ ಅಲ್ಲೆಲ್ಲಾ ಉತ್ತಮ ಪ್ರದರ್ಶನ ನೀಡಿದ್ದೇನೆ. ಕೆಲವು ತಂಡಗಳು ನನಗೆ ಬಿಡ್ ಮಾಡುತ್ತದೆ ಎಂದು ನಾನು ಪ್ರಾಮಾಣಿಕವಾಗಿ ಭಾವಿಸಿದ್ದೆ. ನಿಜ ಹೇಳಬೇಕೆಂದರೆ, ನಾನು ಇದನ್ನು (ಅನ್ ಸೋಲ್ಡ್) ನಿರೀಕ್ಷಿಸಿರಲಿಲ್ಲ. ದೇಶೀಯ ಕ್ರಿಕೆಟ್‌ನಲ್ಲಿ, ನಾನು ಉತ್ತಮ ಪ್ರದರ್ಶನ ನೀಡುತ್ತಿದ್ದೇನೆ. ರಣಜಿ ಟ್ರೋಫಿಯಲ್ಲಿ ಹಿಂದಿನ ಸುತ್ತಿನಲ್ಲಿ, ನಾನು ಏಳು ವಿಕೆಟ್‌ಗಳನ್ನು ಪಡೆದಿದ್ದೇನೆ, ನಾನು ಸೈಯದ್ ಮುಷ್ತಾಕ್ ಅಲಿಯಲ್ಲಿ ಚೆನ್ನಾಗಿ ಮಾಡಿದ್ದೇನೆ. ಆದರೂ ಎಲ್ಲಿ ತಪ್ಪಾಗಿದೆ ಎಂದು ನನಗೆ ತಿಳಿದಿಲ್ಲ” ಎಂದು ಸಂದೀಪ್ ಬೇಸರ ತೋಡಿಕೊಂಡಿದ್ದಾರೆ.
ಐಪಿಎಲ್ ನಲ್ಲಿ ಪ್ರತಿ ಇನ್ನಿಂಗ್ಸ್ ಗೆ ವಿಕೆಟ್ ಗಳ ಅನುಪಾತಕ್ಕೆ ಬಂದಾಗ, ಸಂದೀಪ್ ಅವರ ಹೆಸರಿಗೆ 1.09 ವಿಕೆಟ್ ಗಳೊಂದಿಗೆ ಸಾರ್ವಕಾಲಿಕ ಪಟ್ಟಿಯಲ್ಲಿ 7 ನೇ ಸ್ಥಾನದಲ್ಲಿದ್ದಾರೆ.