ಈ ವಾರ ಎರಡು ಕನ್ನಡ ಚಿತ್ರಗಳು ತೆರೆಕಾಣುತ್ತಿವೆ. ಅದಿತ್ಯ ನಟನೆಯ “ಮುಂದುವರೆದ ಅಧ್ಯಾಯ’ ಹಾಗೂ ರಾಘವ್ ದ್ವಾರ್ಕಿ ನಿರ್ದೇಶನದ “ಒಂದು ಗಂಟೆಯ ಕಥೆ’ ಚಿತ್ರಗಳು ತೆರೆಕಾಣುತ್ತಿವೆ.
ಆದಿತ್ಯ ಅವರ “ಮುಂದುವರೆದ ಅಧ್ಯಾಯ’ ಚಿತ್ರದ ಟ್ರೇಲರ್ ಹಿಟ್ ಆಗಿದ್ದು, ಸಿನಿಮಾ ಬಗ್ಗೆಯೂ ನಿರೀಕ್ಷೆ ಇದೆ. ಅವರ ಈ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ, “ಮುಂದುವರೆದ ಅಧ್ಯಾಯ’ ವಿಭಿನ್ನವಾಗಿದೆ.
ಈ ನಂಬಿಕೆ ಸ್ವತಃ ಆದಿತ್ಯ ಅವರಿಗೂ ಇದೆ. ಬಹುತೇಕ ಅಂಡರ್‌ವರ್ಲ್ಡ್ ಹಿನ್ನೆಲೆಯ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಆದಿತ್ಯ ಈ ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ “ಕಣಜ ಎಂಟರ್‌ಪ್ರೈಸಸ್’ನಡಿ ನಿರ್ಮಾಣವಾಗಿದ್ದು, ಬಾಲು ಚಂದ್ರಶೇಖರ್ ನಿರ್ದೇಶಿಸಿದ್ದಾರೆ
ಒಂದು ಗಂಟೆಯ ಕಥೆ
ಈ ಚಿತ್ರವನ್ನು ಈ ಹಿಂದೆ “ಮತ್ತೆ ಮುಂಗಾರು’ ಚಿತ್ರವನ್ನು ನಿರ್ದೇಶಿಸಿದ್ದ ರಾಘವ್ ದ್ವಾರ್ಕಿ ಈ ಚಿತ್ರಕ್ಕೆ ಚಿತ್ರಕಥೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. “ರಿಯಲ್ ವೆಲ್ತ್ ವೆಂಚರ್ ಪ್ರೊಡಕ್ಷನ್’ ಬ್ಯಾನರ್‌ನಲ್ಲಿ ಕಶ್ಯಪ್ ದಾಕೋಜು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನೈಜ ಘಟನೆಯೊಂದನ್ನು ಆಧಾರವಾಗಿಟ್ಟುಕೊಂಡು ಈ ಸಿನಿಮಾ ಮಾಡಿದ್ದು, ಸಮಾಜಕ್ಕೆ ಒಂದೊಳ್ಳೆಯ ಸಂದೇಶವಿದೆಯಂತೆ.
ಜೊತೆಗೆ ಇಂದಿನ ಯುವಕರ ಜೀವನ ಶೈಲಿ ಮತ್ತು ಅಭಿರುಚಿ, ಜವಾಬ್ದಾರಿಗಳ ಕುರಿತು ಹೇಳಲಾಗಿದೆ ಎನ್ನುವುದು ನಿರ್ದೇಶಕ ರಾಘವ್ ಅವರ ಮಾತು. ಚಿತ್ರದ ಹಾಡುಗಳಿಗೆ ಡೆನ್ನಿಸ್ ವಲ್ಲಭನ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಸೂರ್ಯಕಾಂತ್ ಛಾಯಾಗ್ರಹಣವಿದೆ. ಗಣೇಶ್ ಮಲ್ಲಯ್ಯ ಸಂಕಲನವಿದೆ. ಚಿತ್ರದಲ್ಲಿ ಅಜಯ್ ರಾಜ್ (ನಂಜುಂಡ) ಶನಾಯ ಕಾಟ್ಲೆ, ಸ್ವಾತಿ ಶರ್ಮ, ಚಿದಾನಂದ್, ಪ್ರಶಾಂತ್ ಸಿದ್ಧಿ, ಪ್ರಕಾಶ್ ತುಮಿನಾಡು, ಚಂದ್ರಕಲಾ, ಯಶವಂತ್ ಸರದೇಶಪಾಂಡೆ ನಟಿಸಿದ್ದಾರೆ.