Advertisement
ಬಾಗಲೂರಿನ ಮುಜಾಹಿದ್ದೀನ್ ಉಲ್ಲಾ(24) ಬಂಧಿತ. ಈತ ಒಂದೇ ತಿಂಗಳ ಅವಧಿಯಲ್ಲಿ ವಿಧಾನಸೌಧ ಆಸು-ಪಾಸಿನಲ್ಲಿರುವ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ನಿವಾಸ, ಆಕಾಶವಾಣಿ (ಪ್ರಸಾರ ಭಾರತಿ) ಕೇಂದ್ರ, ಮಂತ್ರಿಗಳ ಬಂಗಲೆಗಳು (ಸವೆನ್ ಮಿನಿಸ್ಟರ್ ಕ್ವಾಟ್ರರ್ಸ್), ಬಿಷಪ್ ಕಾಟನ್ ಶಾಲೆ, ಎಂಬೆಸ್ಸಿ ಅಪಾರ್ಟ್‌ಮೆಂಟ್ ಹಾಗೂ ಇನ್ನಿತರೆ ಕಡೆಗಳಲ್ಲಿ ಶ್ರೀಗಂಧದ ಮರಗಳನ್ನು ಕಳವು ಮಾಡಿದ್ದ ಎಂದು ಪೊಲೀಸರು ಹೇಳಿದರು.
Related Articles
Advertisement
ಬಲಗಾಲಿಗೆ ಗುಂಡೇಟು: ತನಿಖೆ ವೇಳೆ ಆರೋಪಿಗಳು ಆಂಧ್ರಪ್ರದೇಶ, ತಮಿಳುನಾಡು ಹಾಗೂ ಚಿಕ್ಕಬಳ್ಳಾಪುರದಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ಸಂಗ್ರಹಿಸಿದ್ದ ವಿಶೇಷ ತಂಡ, ಡಿ.10ರ ರಾತ್ರಿ ಮುಜಾಹಿದ್ದೀನ್ ಇಬ್ಬರು ಸಹೋದರರನ್ನು ಚಿಕ್ಕಬಳ್ಳಾಪುರದಲ್ಲಿ ವಶಕ್ಕೆ ಪಡೆದುಕೊಂಡಿತ್ತು.
ಬಳಿಕ ಡಿ.11ರ ನಸುಕಿನ 1.30ರ ಸುಮಾರಿಗೆ ಹೆಚ್ಚಿನ ವಿಚಾರಣೆಗಾಗಿ ಕಬ್ಬನ್‌ಪಾರ್ಕ್ ಠಾಣೆಗೆ ಕರೆತರುವಾಗ ಮುಜಾಹಿದ್ದೀನ್ ಉಲ್ಲಾ, ಮಾರ್ಗಮಧ್ಯೆ ಜೀಪ್‌ನಲ್ಲಿದ್ದ ಪೊಲೀಸ್ ಸಿಬ್ಬಂದಿ ಕೃಷ್ಣಮೂರ್ತಿ ಅವರನ್ನು ಕೆಳಗೆ ತಳ್ಳಿ ತಪ್ಪಿಸಿಕೊಂಡು ಓಡಿದ್ದಾನೆ. ಇದನ್ನು ಕಂಡ ಇನ್‌ಸ್ಪೆಕ್ಟರ್ ಐಯ್ಯಣ್ಣರೆಡ್ಡಿ ತಂಡ ಆರೋಪಿಯನ್ನು ಓಡದಂತೆ ಎಚರಿಸಿದ್ದಾರೆ.
ಆದರೂ, ಆರೋಪಿ ಕೈಕೋಳದ ಸಮೇತ ಕಬ್ಬನ್‌ಪಾರ್ಕ್ ಒಳಭಾಗದಲ್ಲಿ ಪರಾರಿಯಾಗುತ್ತಿದ್ದ. ಇದೇ ವೇಳೆ ರಾತ್ರಿ ಗಸ್ತಿನಲ್ಲಿದ್ದ ಪಿಎಸ್‌ಐ ರಹೀಂ ಮತ್ತು ತಂಡವನ್ನು ಸ್ಥಳಕ್ಕೆ ಕರೆಸಿಕೊಂಡ ಇನ್‌ಸ್ಪೆಕ್ಟರ್ ಐಯ್ಯಣ್ಣರೆಡ್ಡಿ ಕಬ್ಬನ್‌ಪಾರ್ಕ್ ಸುತ್ತ ನಾಕಾಬಂದಿ ಹಾಕಿದ್ದರು ಎಂದು ತಿಳಿಸಿದ್ದಾರೆ.
ಬಳಿಕ ಪಾರ್ಕ್‌ನ ಬಿದಿರು ಮೆಳೆಯಲ್ಲಿ ಅವಿತುಕೊಂಡಿದ್ದ ಆರೋಪಿಯನ್ನು ಗಮನಿಸಿದ ಪಿಎಸ್‌ಐ ರಹೀಂ ಆತನನ್ನು ಹಿಡಿಯಲು ಮುಂದಾದಾಗ, ಅವರನ್ನು ಕೆಳಗೆ ತಳ್ಳಿ ಕುತ್ತಿಗೆ ಹಿಡಿದು ಕೊಲೆಗೆ ಯತ್ನಿಸಿದ್ದಾನೆ. ಆಗ ಇನ್‌ಸ್ಪೆಕ್ಟರ್ ಐಯ್ಯಣ್ಣರೆಡ್ಡಿ, ಪೊಲೀಸರ ಮೇಲೆ ಹಲ್ಲೆ ನಡೆಸದಂತೆ ಸೂಚಿಸಿದ್ದಾರೆ. ಆದರೂ ಆರೋಪಿ ಹಲ್ಲೆಗೆ ಮುಂದಾಗಿದ್ದಾನೆ. ಆಗ, ಇನ್ಸ್‌ಪೆಕ್ಟರ್ ತಮ್ಮ ಪಿಸ್ತೂಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಗಾಬರಿಗೊಂಡ ಮುಜಾಹಿದ್ದೀನ್ ಉಲ್ಲಾ, ಪಿಎಸ್‌ಐ ರಹೀಂ ಅವರನ್ನು ಪಕ್ಕಕ್ಕೆ ತಳ್ಳಿ, ಅಲ್ಲೇ ಇದ್ದ ಬಿದಿರು ದೊಣ್ಣೆಯನ್ನು ಹಿಡಿದು ಪೊಲೀಸ್ ಸಿಬ್ಬಂದಿ ಕಡೆ ಬಿಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ ಐಯ್ಯಣ್ಣರೆಡ್ಡಿ ಆರೋಪಿ ಬಲ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಬಳಿಕ ಆರೋಪಿಗೆ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಪಿಎಸ್‌ಐ ರಹೀಂ ಮತ್ತು ಸಿಬ್ಬಂದಿ ಕೃಷ್ಣಮೂರ್ತಿ ಅವರಿಗೂ ಚಿಕಿತ್ಸೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದರು.
ಕೃತ್ಯಕ್ಕೆ ಸಂಚು: ಆರೋಪಿಗಳ ಪೈಕಿ ಲಕ್ಷ್ಮಣ ಈ ಹಿಂದೆ ಬಿಬಿಎಂಪಿಯ ಅರಣ್ಯ ವಿಭಾಗದಲ್ಲಿ ಗುತ್ತಿಗೆ ನೌಕರನಾಗಿದ್ದು, ಸರ್ಕಾರಿ ಅಧಿಕಾರಿಗಳ ನಿವಾಸಗಳು, ಪ್ರತಿಷ್ಠಿತ ವ್ಯಕ್ತಿಗಳ ಮನೆಗಳು, ಕಚೇರಿಗಳು ಹಾಗೂ ಶಾಲಾ ಆವರಣದಲ್ಲಿರುವ ಒಣಗಿರುವ ಮರಗಳನ್ನು ಕಡಿಯಲು ಹೋಗುತ್ತಿದ್ದ. ಈ ವೇಳೆ ಆರೋಪಿ ಶ್ರೀಗಂಧದ ಮರಗಳಿರುವ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದ.
ಬಳಿಕ ತಮಿಳುನಾಡಿನ ತನ್ನ ತಂಡದ ಮುಖಸ್ಥ ಇಳಯರಾಜನಿಗೆ ತಿಳಿಸುತ್ತಿದ್ದ. ಕೆಲ ದಿನಗಳಲ್ಲೇ ತಮಿಳುನಾಡಿನ ಸೇಲಂನಿಂದ ಇಬ್ಬರು ವ್ಯಕ್ತಿಗಳು ನಗರಕ್ಕೆ ಆಗಮಿಸಿ ಯಾವ ಯಾವ ಸ್ಥಳಗಳಲ್ಲಿ ಶ್ರೀಗಂಧದ ಮರಗಳಿವೆ. ಭದ್ರತೆ ಹೇಗಿದೆ ಎಂಬುದನ್ನು ಗಮನಿಸಿ ಇಳಯರಾಜನಿಗೆ ಮಾಹಿತಿ ನೀಡಿದ್ದಾರೆ. ಅವನು ಮುಜಾಹಿದ್ದೀನ್ ಸೋದರರಿಗೆ ತಿಳಿಸಿದ್ದಾನೆ. ಅವರು ಸ್ಥಳ ವೀಕ್ಷಿಸಿ ಕೃತ್ಯಕ್ಕೆ ಒಪ್ಪಿದ್ದರು.
ತಮಿಳುನಾಡು ತಂಡದಿಂದ ಕೃತ್ಯ: ಶ್ರೀಗಂಧದ ಮರಗಳನ್ನು ಕಡಿಯಲು ಬರುತ್ತಿದ್ದ ತಮಿಳುನಾಡು ತಂಡಕ್ಕೆ ನಗರದಲ್ಲಿ ಮುಜಾಹಿದ್ದೀನ್ ಉಲ್ಲಾ ಮತ್ತು ಇಮಾªದ್ ಉಲ್ಲಾ ಆಶ್ರಯ ನೀಡಿ, ಸಂಚರಿಸಲು ಕಾರು, ಕೃತ್ಯಕ್ಕೆ ಬೇಕಾದ ಉಪಕರಣಗಳನ್ನು ಒದಗಿಸುತ್ತಿದ್ದರು. ಈ ತಂಡ ಕೇವಲ 15 ನಿಮಿಷದಲ್ಲೇ ಮರಗಳನ್ನು ಕಡಿದು ಕ್ಷಣಾರ್ಧದಲ್ಲಿ ತುಂಡುಗಳನ್ನಾಗಿ ಮಾಡಿ ವಾಹನದಲ್ಲಿ ತುಂಬುತ್ತಿದ್ದರು.
ಮರಗಳನ್ನು ಗುರುತ್ತಿಸುತ್ತಿದ್ದ ಲಕ್ಷ್ಮಣನಿಗೆ 10ಸಾವಿರ ರೂ. ಹಾಗೂ ಇತರೆ ಆರೋಪಿಗಳಿಗೆ ಇಂತಿಷ್ಟು ಹಣ ನಿಗದಿಯಾಗಿತ್ತು. ನಂತರ ಮುಜಾಹಿದ್ದೀನ್ ಉಲ್ಲಾ ಸಹೋದರರು ತಮಿಳುನಾಡು, ಆಂಧ್ರಪ್ರದೇಶ, ಚಿಕ್ಕಮಗಳೂರು ಕಡೆಗಳಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.
ತಂದೆ, ಮಕ್ಕಳಿಂದ ದಂಧೆ: ಪ್ರಾಥಮಿಕ ತನಿಖೆಯಲ್ಲಿ ಬಂಧಿತ ಸಹೋದರರು ಮಾತ್ರವಲ್ಲದೆ, ಇವರ ತಂದೆ ಅಮ್ಜದ್ ಉಲ್ಲಾ ಕೂಡ ದಂಧೆಯಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ. ಆರೋಪಿಗಳು ಕಳೆದ ಐದಾರು ವರ್ಷಗಳಿಂದ ಶ್ರೀಗಂಧದ ಮರ ಕಳ್ಳತನ ದಂಧೆಯಲ್ಲಿ ತೊಡಗಿದ್ದಾರೆ.
ಆದರೆ, ಇದುವರೆಗೂ ಯಾವ ಪೊಲೀಸರ ಬಲೆಗೆ ಬಿದ್ದಿರಲಿಲ್ಲ. ಇದೀಗ ಕಬ್ಬನ್‌ಪಾರ್ಕ್ ಪೊಲೀಸರ ವಿಶೇಷ ತಂಡಕ್ಕೆ ಸಿಕ್ಕಿಬಿದ್ದಿದ್ದಾರೆ. ಅಲ್ಲದೆ ಬಂಧಿತ ಸಹೋದರರು ಬಾಗಲೂರಿನಲ್ಲಿ ಸ್ವಂತ ಮನೆ ಕಟ್ಟಿಕೊಂಡಿದ್ದಾರೆ. ನಾಲ್ಕು ತಿಂಗಳಿಗೊಮ್ಮೆ ಮನೆ ಬದಲಿಸುತ್ತಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಎಲ್ಲೇಲ್ಲಿ ಕಳ್ಳತನ?: 2014ರಿಂದ ಇದುವರೆಗೂ ಆರೋಪಿಗಳು ನಗರದ ಪ್ರತಿಷ್ಠಿತ ವ್ಯಕ್ತಿಗಳ ಮನೆ ಮತ್ತು ಕಚೇರಿಗಳ ಆವರಣಗಳಲ್ಲಿರುವ ಶ್ರೀಗಂಧದ ಮರಗಳನ್ನು ಕಳವು ಮಾಡಿದ್ದಾರೆ. ಆರೋಪಿಗಳ ಬಂಧನದಿಂದ ಕಬ್ಬನ್ ಪಾರ್ಕ್ ಠಾಣೆ ವ್ಯಾಪ್ತಿಯ 4, ಹೈಗ್ರೌಂಡ್ಸ್ ಠಾಣೆಯ 2, ಕೋರಮಂಗಲ ಠಾಣೆಯ 4, ಮಹದೇವಪುರ ಠಾಣೆಯ 2, ವಿಧಾನಸೌಧ ಠಾಣೆಯ 3, ಸದಾಶಿವನಗರದ 1, ಮಲ್ಲೇಶ್ವರಂ ಠಾಣೆಯ 1, ಯಶವಂತಪುರ ಠಾಣೆಯ 1, ಕೊಡಿಗೇಹಳ್ಳಿಯ 1 ಒಟ್ಟು 19 ಪ್ರಕರಣಗಳು ಪತ್ತೆಯಾಗಿವೆ.
ಸಿ.ವಿ. ರಾಮನ್ ಮನೆ ಬಳಿಯೂ ಕಳವು!: ಆರೋಪಿಗಳು ಶ್ರೀಗಂಧದ ಮರಗಳ ಕತ್ತರಿಸಲು ಬ್ಯಾಟರಿ ಚಾಲಿತ ಮರಕೊಯ್ಯುವ ಯಂತ್ರ, ಗರಗಸ ಬಳಸುತ್ತಿದ್ದರು. ಹೀಗೆ ನಗರದ 60 ಕಡೆಗಳಲ್ಲಿ ಕೃತ್ಯವೆಸಗಿದ್ದಾರೆ. ಪ್ರಮುಖವಾಗಿ ಮಲ್ಲೇಶ್ವರಂನಲ್ಲಿರುವ ವಿಜ್ಞಾನಿ ದಿ. ಸಿ.ವಿ.ರಾಮನ್ ಅವರ ಮನೆ, ಕೆಎಸ್‌ಆರ್‌ಪಿ ಆವರಣ, ಹೈಕೋರ್ಟ್ ಮುಖ್ಯನ್ಯಾಯಮೂರ್ತಿ, ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಮನೆಗಳಲ್ಲಿ ಕೃತ್ಯವೆಸಗಿರುವುದು ತಿಳಿದು ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.