Advertisement
1959ರ ಸಮಯದಲ್ಲಿ ಸಾಗರಕ್ಕೆ ನಾಟಕ ಪ್ರದರ್ಶನಕ್ಕಾಗಿ ತಮ್ಮ ಮಿತ್ರಮಂಡಳಿಯ ಜತೆಗೆ ಕುಟುಂಬ ಸಮೇತ ಬಂದಿದ್ದ ಹಿರಣ್ಣಯ್ಯ ವರದಪುರದ ಶ್ರೀಧರ ಸ್ವಾಮಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡ ಸಂದರ್ಭದ ಕಪ್ಪು ಬಿಳುಪು ಚಿತ್ರವನ್ನು ಬೆಂಗಳೂರಿನ ಶಿವಕುಮಾರ್ ಶ್ರೀಧರಾಶ್ರಮದ ವಾಟ್ಸ್ ಆ್ಯಪ್ ಗ್ರೂಪಿನಲ್ಲಿ ಪೋಸ್ಟ್ ಮಾಡಿ, ಸಂದರ್ಭ ಸಹಿತ ವಿವರಣೆ ನೀಡಿದ್ದಾರೆ.
ಕಥೆಯೂ ಹಲವರ ನೆನಪಿನಲ್ಲಿದೆ. ಶ್ರೀಧರ ಸ್ವಾಮಿಗಳನ್ನು ತಮ್ಮ ಮನೆಗೆ ಕರೆಸಿ ಪಾದಪೂಜೆ ಮಾಡಿ,ಅವರ ಪಾದದ ಮೇಲೆ ತಮ್ಮ ಹೆಣ್ಣು ಮಗುವನ್ನು ಹಾಕಿ “ನಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ಉಳಿಯುವುದಿಲ್ಲ. ನಮ್ಮ ಮನೆಯಲ್ಲಿ ಸಾಯುವುದರ ಬದಲು ನಿಮ್ಮ ಪಾದದ ಮೇಲೆ ಸಾಯಲಿ’ ಎಂದು ಹೇಳಿದರು. ಶ್ರೀಗಳವರು ಮಗುವನ್ನೆತ್ತಿಕೊಂಡು ಹಿರಣ್ಣಯ್ಯನವರ ಪತ್ನಿಯ ಮಡಿಲಿಗೆ ಹಾಕಿ, “ಇದು ನಿಮ್ಮ ಮನೆತನದ ಅದೃಷ್ಟದ ಕೂಸು. ಇನ್ನೊಂದು ಹೆಣ್ಣು ಮಗು ಆಗುತ್ತದೆ,ಘಾಟಿ ಸುಬ್ರಹ್ಮಣ್ಯಕ್ಕೆ ಹೋಗಿ ನಾಗಪ್ರತಿಷ್ಠೆ ಮಾಡಿಸಿಕೊಂಡು ಬನ್ನಿ ಸಾಕು’ ಎಂದು ಹೇಳಿದರು.
Related Articles
Advertisement
ಅಂದಿನ ನಾಟಕ ನೋಡಿದ ದಾವಣಗೆರೆಯ ವ್ಯಕ್ತಿಯೊಬ್ಬರು ಬಹುವಾಗಿ ಮೆಚ್ಚಿ, ದಾವಣಗೆರೆಗೆ ಬಂದರೆ ಮೊದಲ ಹತ್ತು ನಾಟಕಗಳನ್ನು ತನಗೇ ಕಂಟ್ರಾಕ್ಟ್ ಕೊಡಬೇಕೆಂದು ಹೇಳಿ ಮುಂಗಡವಾಗಿ ತಮ್ಮ ಕೈಯಲ್ಲಿದ್ದ ಚಿನ್ನದ ಉಂಗುರವನ್ನು ಹಿರಣ್ಣ ಯ್ಯನವರ ಬೆರಳಿಗೆ ಹಾಕಿಬಿಟ್ಟರು!. ಆ ಉಂಗುರ ದಿಂದಲೇ ಪಾದುಕೆ ತಯಾರಿಸಿ ವರದಳ್ಳಿಗೆ ಹೋಗಿ ಗುರುಗಳ ಮುಂದಿಟ್ಟು ನಮಸ್ಕರಿಸಿದಾಗ ಗುರುಗಳು “ಬಂಗಾರ ಸಿಗ್ತೀನೋ….ತಮ್ಮಾ..’ ಎಂದು ನಕ್ಕು 14 ದಿನಗಳ ನಂತರ ಬರುವಂತೆ ಹೇಳಿದರು. 14 ದಿನಗಳ ನಂತರ ಹೋದಾಗ ತಮ್ಮ ದಿವ್ಯಾನುಗ್ರಹ ತುಂಬಿದ ಪಾದುಕೆ ನೀಡಿ ಹರಸಿದರು. ಇಂದಿಗೂ ಅದೇ ನನ್ನ ಸರ್ವಸ್ವ ಎನ್ನುತ್ತಿದ್ದರು ಮಾಸ್ಟರ್ ಹಿರಣ್ಣಯ್ಯ. ಈ ಕುರಿತು ಗುರುಪಾದ ಸಚ್ಚಿದಾನಂದ ಸ್ವಾಮಿ ರಚಿಸಿದ ಸದ್ಗುರು ಶ್ರೀಧರ ಚರಿತ್ರೆಯಲ್ಲಿ ಸವಿವರವಾದ ಚಿತ್ರಣವಿದೆ.
ರವೀಂದ್ರ ಕಲಾಕ್ಷೇತ್ರಕ್ಕೆ ಬೇಡಹಿರಣ್ಣಯ್ಯ ಅವರ ನಿಧನ ಸುದ್ದಿ ತಿಳಿದಾಗ ಅವರ ಸ್ವಗೃಹಕ್ಕೆ ಧಾವಿಸಿದ ಹಿರಿಯ ಕಲಾವಿದರು ರವೀಂದ್ರ ಕಲಾಕ್ಷೇತ್ರದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡುವ ಕುರಿತು ಕುಟುಂಬ ಸದಸ್ಯರ ಬಳಿ ಪ್ರಸ್ತಾಪ ಮಾಡಿದ್ದಾರೆ. ಅದನ್ನು ನಿರಾಕರಿಸಿದ ಕುಟುಂಬ ಸದಸ್ಯರು ತಂದೆ ಆಸೆಯಂತೆಯೇ ಸ್ವಗೃಹದಲ್ಲಿ ಸರಳವಾಗಿ ಅಂತಿಮ ನಮನ ಸಲ್ಲಿಸುವುದಾಗಿ ತಿಳಿಸಿದರು. “ನಾನು ಮೃತಪಟ್ಟಾಗ ನನ್ನ ಪಾರ್ಥಿವ ಶರೀರವನ್ನು ಮನೆಯ ಬಳಿಯೇ ಅಂತಿಮ ದರ್ಶನಕ್ಕೆ ಇಡಬೇಕು ಹಾಗೂ ಸರಳವಾಗಿ ಅಂತಿಮ ವಿಧಿವಿಧಾನ ಮುಗಿಸಬೇಕು’ ಎಂದು ಮಾಸ್ಟರ್ ಹಿರಣ್ಣಯ್ಯ ಅವರು ತಮ್ಮ ಕುಟುಂಬ ವರ್ಗದ ಬಳಿ ಹೇಳಿಕೊಂಡಿದ್ದರಂತೆ. ಹೀಗಾಗಿ, ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರಕ್ಕೆ ಕೊಂಡೊಯ್ಯಲಿಲ್ಲ ಎಂದು ಮೂಲಗಳು ತಿಳಿಸಿವೆ.