Advertisement

ಸ್ಯಾಂಡಲ್‌ವುಡ್‌ನ‌ ಹಿರಿಯ ನಟ ಅಂಬಿ ಇನ್ನಿಲ್ಲ

06:00 AM Nov 25, 2018 | |

ಬೆಂಗಳೂರು: ಸ್ಯಾಂಡಲ್‌ವುಡ್‌ನ‌ ಹಿರಿಯ ನಟ ಹಾಗೂ ರಾಜಕಾರಣಿ ರೆಬೆಲ್‌ಸ್ಟಾರ್‌ ಅಂಬರೀಷ್‌(66) ಶನಿವಾರ ರಾತ್ರಿ ತೀವ್ರ ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ.

Advertisement

ಕಿಡ್ನಿ, ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಅಂಬರೀಷ್‌ ಅವರನ್ನು ಶನಿವಾರ ರಾತ್ರಿಯೇ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಸ್ಪತ್ರೆಗೆ ಕರೆತರುವಾಗಲೇ ಅವರು ನಿಧನರಾಗಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅಂಬರೀಷ್‌ ಅವರ ನಿಧನಕ್ಕೆ ಸಿಎಂ ಕುಮಾರಸ್ವಾಮಿ, ಡಿ.ಕೆ.ಶಿವಕುಮಮಾರ್‌, ಪುನೀತ್‌ ರಾಜಕುಮಾರ್‌ ಸೇರಿದಂತೆ ಚಿತ್ರರಂಗದ ಹಿರಿ-ಕಿರಿಯ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ ಆಸ್ಪತ್ರೆ ಮುಂದೆ ಅಭಿಮಾನಿಗಳು ಸೇರುತ್ತಿದ್ದು, ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಸ್ವತಃ  ಬೆಂಗಳೂರು ಪೊಲೀಸ್‌ ಆಯುಕ್ತ ಸುನೀಲ್‌ ಕುಮಾರ್‌ ಮತ್ತು ಹೆಚ್ಚುವರಿ ಪೊಲೀಸ್‌ ಆಯುಕ್ತ ಬಿ.ಕೆ. ಸಿಂಗ್‌ ಭದ್ರತೆ ವ್ಯವಸ್ಥೆ ನೋಡುತ್ತಿದ್ದಾರೆ. ಅಲ್ಲದೆ ಆಸ್ಪತ್ರೆಗೆ ಒಳಗೆ ಹತ್ತಿರದ ಸಂಬಂಧಿಕರನ್ನು ಬಿಟ್ಟರೆ ಉಳಿದವರ್ಯಾರನ್ನೂ ಬಿಡುತ್ತಿಲ್ಲ.

1952ರ ಮೇ 29 ರಂದು ಮಂಡ್ಯ ಜಿಲ್ಲೆಯ ದೊಡ್ಡರಸಿನ ಕೆರೆಯಲ್ಲಿ ಜನಿಸಿದ್ದ ಅಂಬರೀಷ್‌ ಕನ್ನಡ ಚಿತ್ರರಂಗದಲ್ಲಿ ದೊಡ್ಡಣ್ಣ ಎಂದೇ ಗುರುತಿಸಿಕೊಂಡಿದ್ದರು. ಅಲ್ಲದೆ ಪೀಟಿಲು ಚೌಡಯ್ಯ ಅವರ ಮೊಮ್ಮಗನಾಗಿದ್ದ ಅಂಬರೀಷ್‌ ಅವರ ಹುಟ್ಟು ಹೆಸರು ಮಳವಳ್ಳಿ ಹುಚ್ಚೇಗೌಡ ಅಮರನಾಥ್‌. ಮಂಡ್ಯದಲ್ಲೇ ಶಾಲಾ ಶಿಕ್ಷಣ ಪಡೆದ ಅಂಬರೀಷ್‌ ಅವರು, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ತೆರಳಿದ್ದರು.

ಪುಟ್ಟಣ್ಣ ಕಣಗಾಲ್‌ ಅವರ ನಾಗರಹಾವು ಚಿತ್ರದ ಮೂಲಕ ವಿಷ್ಣುವರ್ಧನ್‌ ಮತ್ತು ಅಂಬರೀಷ್‌ ಅವರು ಏಕಕಾಲಕ್ಕೆ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಈ ಚಿತ್ರದಲ್ಲಿನ ಏ ಬುಲ್‌ ಬುಲ್‌ ಮಾತಾಡಕಿಲ್ವಾ ಎಂಬ ಡೈಲಾಗ್‌ ಇಂದಿಗೂ ಜನಜನಿತ. ಪುಟ್ಟಣ್ಣ ಕಣಗಾಲ್‌ ಗರಡಿಯಲ್ಲೇ ಅಂಬರೀಷ್‌ ಅವರು, ಪಡುವಾರಳ್ಳಿ ಪಾಂಡವರು, ಶುಭಮಂಗಳ, ಮಸಣದ ಹೂವು ಮತ್ತು ರಂಗನಾಯಕಿ ಚಿತ್ರಗಳನ್ನು ಪೂರೈಸಿದರು.

Advertisement

ಇದುವರೆಗೆ ಅಂಬರೀಷ್‌ ಅವರು 208 ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಕನ್ನಡ ಚಿತ್ರರಂಗದ ಹಿರಿಯಣ್ಣ ಎಂದೇ ಗುರುತಿಸಿಕೊಂಡಿದ್ದರು. ರಾಜಕುಮಾರ್‌ ಮತ್ತು ವಿಷ್ಣುವರ್ಧನ್‌ ಅವರ ನಿರ್ಗಮನದ ನಂತರ ಚಿತ್ರರಂಗವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next