Advertisement

ಬಾಲಿವುಡ್‌ ಎಂಬ ಸಾಗರದಿಂದ ದೂರ ದೂರ… ಪ್ಯಾನ್‌ ಇಂಡಿಯಾ ಬದಲು ಸೌತ್‌ ಇಂಡಿಯಾ ಫೋಕಸ್‌

10:55 AM Dec 22, 2023 | Team Udayavani |

ಕನ್ನಡ ಚಿತ್ರರಂಗ, ಅಲ್ಲಿನ ಸಿನಿಮಾಗಳ ಬಗ್ಗೆ ಈಗ ಹೊರರಾಜ್ಯದವರು, ಅಲ್ಲಿನ ಚಿತ್ರರಂಗ ಮಾತನಾಡುತ್ತಿದೆ. ಸ್ಯಾಂಡಲ್‌ವುಡ್‌ ಮಂದಿ ತಮ್ಮ ಸೀಮಿತ ಮಾರುಕಟ್ಟೆಯನ್ನು ದಾಟಿ ಹೊಸದೇನೋ ಮಾಡುತ್ತಿದ್ದಾರೆ ಎಂಬ ಮೆಚ್ಚುಗೆಯ ಮಾತುಗಳು ಕೇಳಿಬರಲು ಆರಂಭಿಸಿವೆ. ಅದಕ್ಕೆ ಕಾರಣವಾಗಿದ್ದು ಕನ್ನಡ ಚಿತ್ರರಂಗ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆದ ರೀತಿ. “ಕೆಜಿಎಫ್’ ಮೂಲಕ ಒಂದು ಹೊಸ ಜಗತ್ತನ್ನು ಸ್ಯಾಂಡಲ್‌ವುಡ್‌ ತೆರೆದಿಟ್ಟಿತ್ತು. ಹಾಗೆ ನೋಡಿದರೆ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಪ್ಯಾನ್‌ ಇಂಡಿಯಾ ಕ್ರೇಜ್‌ ಹತ್ತಿಸಿದ್ದೇ ಸ್ಯಾಂಡಲ್‌ವುಡ್‌ ಎನ್ನಬಹುದು.

Advertisement

ಮೊದಲೇ ಹೇಳಿದಂತೆ ಸೀಮಿತ ಮಾರುಕಟ್ಟೆ ಹೊಂದಿದ್ದ ಕನ್ನಡ ಚಿತ್ರರಂಗದ ಸಿನಿಮಾವೊಂದರ ಅಗಾಧ ಶಕ್ತಿ, ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸಿತ್ತು. ಅಲ್ಲಿಂದ ಆರಂಭವಾದ ಸ್ಯಾಂಡಲ್‌ವುಡ್‌ ಪ್ಯಾನ್‌ ಇಂಡಿಯಾ ಜರ್ನಿ ಜೋರಾಗಿಯೇ ಸದ್ದು ಮಾಡಿತು. ನಂತರ ಬಂದ “ಕೆಜಿಎಫ್ -2′,”ಕಾಂತಾರ’, “777 ಚಾರ್ಲಿ’, “ವಿಕ್ರಾಂತ್‌ ರೋಣ’ ಚಿತ್ರಗಳು ಕೂಡಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿ ಗೆದ್ದವು. ಆದರೆ, ಈ ವರ್ಷ ಸ್ಯಾಂಡಲ್‌ ವುಡ್‌ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿಲ್ಲ ಎಂದರೆ ಸಿನಿಮಾ ಪ್ರೇಮಿಗಳಿಗೆ ಕೊಂಚ ಬೇಸರ ಆಗಬಹುದು. ಆದರೆ, ಅದು ನಿಜ ಕೂಡಾ. ಏಕೆಂದರೆ 2023ರಲ್ಲಿ ಕನ್ನಡ ಚಿತ್ರರಂಗದಿಂದ ಪ್ಯಾನ್‌ ಇಂಡಿಯಾ ರಿಲೀಸ್‌ ಆಗಿದ್ದು ಕಡಿಮೆಯೇ.

“ಕಬj’ ಚಿತ್ರ ಪ್ಯಾನ್‌ ಇಂಡಿಯಾ ರಿಲೀಸ್‌ ಆಗಿದ್ದು ಬಿಟ್ಟರೆ ಮಿಕ್ಕಂತೆ ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ ಎಂದುಕೊಂಡು ಬಿಡುಗಡೆಯಾದ ಚಿತ್ರಗಳು ಈ ವರ್ಷ ಕಡಿಮೆಯೇ. ಹಾಗಂತ ಪ್ಯಾನ್‌ ಇಂಡಿಯಾ ಕ್ರೇಜ್‌ ತಗ್ಗಿತೇ ಎಂಬ ಪ್ರಶ್ನೆ ಬರೋದು ಸಹಜ. ಆರಂಭದ ಕ್ರೇಜ್‌ನಲ್ಲಿ ಒಂದಷ್ಟು ಸಿನಿಮಾಗಳು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಕೈ ಕಚ್ಚಿಕೊಂಡ ಉದಾಹರಣೆಗಳು ಕೂಡಾ ಸ್ಯಾಂಡಲ್‌ವುಡ್‌ನಲ್ಲೇ ಇದೆ. ಏಕೆಂದರೆ ಪ್ಯಾನ್‌ ಇಂಡಿಯಾ ರಿಲೀಸ್‌ಎಂಬುದು ಸಾಗರದಂತೆ. ಅದಕ್ಕೆ ಅದರದ್ದೇ ಆದ ಪೂರ್ವತಯಾರಿ ಬೇಕು. ಜೊತೆಗೆ ಪ್ರಚಾರ ಕೂಡಾ. ಈ ವಿಚಾರದಲ್ಲಿ ಹಲವು ಸಿನಿಮಾಗಳು ಎಡವಿದ್ದು ಸುಳ್ಳಲ್ಲ.

ಇನ್ನು, ಈ ವರ್ಷ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸಿನಿಮಾಗಳು ರಿಲೀಸ್‌ ಆಗದೇ ಇದ್ದರೂ ಸೌತ್‌ ಇಂಡಿಯಾ ರಿಲೀಸ್‌ ಆಗಿವೆ. ರಕ್ಷಿತ್‌ ಶೆಟ್ಟಿ ನಟನೆಯ “ಸಪ್ತಸಾಗರದಾಚೆ ಎಲ್ಲೋ- ಸೈಡ್‌ ಎ’ ಮೊದಲು ಕನ್ನಡದಲ್ಲಿ ಬಿಡುಗಡೆಯಾಗಿ ಹಿಟ್‌ಲಿಸ್ಟ್‌ ಸೇರಿದ ಬಳಿಕ ಚಿತ್ರವನ್ನು ತೆಲುಗಿನಲ್ಲಿ ಬಿಡುಗಡೆ ಮಾಡಲಾಯಿತು. ಅಲ್ಲೂ ಚಿತ್ರ ಮೆಚ್ಚುಗೆ ಪಡೆಯಿತು. ಬಳಿಕ “ಸಪ್ತಸಾಗರದಾಚೆ ಎಲ್ಲೋ- ಸೈಡ್‌ ಬಿ’ ಚಿತ್ರ ಹಿಂದಿ ಬಿಟ್ಟು ಕನ್ನಡ, ತಮಿಳು, ತೆಲುಗು, ಮಲಯಾಳಂನಲ್ಲಿ ಬಿಡುಗಡೆಯಾಯಿತು. ಶಿವರಾಜ್‌ಕುಮಾರ್‌ ಅವರ “ಘೋಸ್ಟ್‌’ ಕೂಡಾ ಕನ್ನಡದ ಬಳಿಕ ತಮಿಳು, ತೆಲುಗಿನಲ್ಲಿ ತೆರೆಕಂಡಿತು. ಈ ವರ್ಷದ ಮೊದಲ ಬಿಗ್‌ ಹಿಟ್‌ ಎನಿಸಿಕೊಂಡ “ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ಚಿತ್ರ ಕೂಡಾ ಕನ್ನಡದ ಬಳಿಕ ತೆಲುಗಿನಲ್ಲಿ ರಿಲೀಸ್‌ ಮಾಡಲಾಯಿತು.

ಬಾಲಿವುಡ್‌ನಿಂದ ದೂರ ಯಾಕೆ?

Advertisement

ನೀವೇ ಗಮನಿಸಿದಂತೆ ಈ ಬಾರಿ ಕನ್ನಡ ಸಿನಿಮಾಗಳು ಬಾಲಿವುಡ್‌ನಿಂದ ದೂರ ಉಳಿದು ಸೌತ್‌ ಇಂಡಿಯಾ ಚಿತ್ರರಂಗವನ್ನಷ್ಟೇ ಫೋಕಸ್‌ ಮಾಡಿವೆ. ಅದಕ್ಕೆ ಕಾರಣ ಬಜೆಟ್‌. ಯಾವುದೇ ಒಂದು ಪ್ರಾದೇಶಿಕ ಭಾಷೆಯ ಚಿತ್ರವನ್ನು ಬಾಲಿವುಡ್‌ಗೆ ಕೊಂಡೊಯ್ದು ಹಿಂದಿಯಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಸುಲಭವಲ್ಲ. ಅದಕ್ಕೆ ದೊಡ್ಡ ಕ್ಯಾನ್ವಾಸ್‌ ಬೇಕು. ಅಲ್ಲಿನ ವಿತರಕರನ್ನು ಹಿಡಿದು ಸಿನಿಮಾ ತೋರಿಸಿ, ಪ್ರಮೋಶನ್‌ ಪ್ಲಾನ್‌ ಮಾಡೋದು ಮತ್ತೂಂದು ಸಾಹಸದ ಕೆಲಸ. ಅಲ್ಲಿನ ಪ್ರಮೋಶನ್‌ ಶೈಲಿ ಕೂಡಾ ಬೇರೆಯದ್ದೇ ಆಗಿರುವುದರಿಂದ ಅದರ ಬಜೆಟ್‌ ಮಿತಿ ಕೂಡಾ ದೊಡ್ಡದೇ ಇದೆ. ಈ ಎಲ್ಲಾ ಕಾರಣಗಳಿಂದಾಗಿ ಸೌತ್‌ ಇಂಡಿಯಾವೇ ಸಾಕು ಎಂಬ ನಿರ್ಧಾರಕ್ಕೆ ಕೆಲವು ನಿರ್ಮಾಪಕರು ಬಂದಿದ್ದಾರೆ.

ಈ ಹಿಂದೆ ತಮ್ಮ “ಸಪ್ತಸಾಗರದಾಚೆ ಎಲ್ಲೋ- ಸೈಡ್‌ ಬಿ’ಯನ್ನು ಯಾಕೆ ಬಾಲಿವುಡ್‌ ನಲ್ಲಿ ರಿಲೀಸ್‌ ಮಾಡುತ್ತಿಲ್ಲ ಎಂಬ ಪ್ರಶ್ನೆ ರಕ್ಷಿತ್‌ ಶೆಟ್ಟಿಗೆ ಎದುರಾಗಿತ್ತು. ಆಗ ಅವರು ಕೊಟ್ಟ ಉತ್ತರ, “ಬಾಲಿವುಡ್‌ ಸಾಗರ. ಅಲ್ಲಿ ಸಿನಿಮಾ ರಿಲೀಸ್‌ ಮಾಡಬೇಕಾದರೆ ಪ್ರಮೋಶನ್‌ ಸೇರಿದಂತೆ ಇತರ ಅಂಶಗಳಿಗೆ ದೊಡ್ಡ ಬಜೆಟ್‌ ಬೇಕು’ ಎಂದು. ಅಲ್ಲಿಗೆ ಒಂದು ಸ್ಪಷ್ಟ ಪ್ಯಾನ್‌ ಇಂಡಿಯಾ ಮಾಡಲು ಎಲ್ಲಾ ಕಡೆ ಸಲ್ಲುವ ಕಥೆಯ ಜೊತೆಗೆ ಸಿನಿಮಾ ಪ್ರಚಾರಕ್ಕೆಂದೇ ದೊಡ್ಡ ಬಜೆಟ್‌ ಅನ್ನೇ ಮೀಸಲಿಡಬೇಕು.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next