ಕನ್ನಡ ಚಿತ್ರರಂಗಕ್ಕೆ ಈ ವರ್ಷ ಹೇಗಿತ್ತು ಎಂದು ಒಮ್ಮೆ ಹಿಂದಿರುಗಿ ನೋಡಿದಾಗ ಸೋಲು- ಗೆಲುವಿನಲ್ಲಿ ಸೋಲೇ ಹೆಚ್ಚು ತೂಗುತ್ತದೆ. ಈ ಸತ್ಯವನ್ನು ಅನಿವಾರ್ಯವಾಗಿ ಸಿನಿಮಾ ಅಭಿಮಾನಿಗಳು, ಚಿತ್ರರಂಗ ಒಪ್ಪಿಕೊಳ್ಳ ಬೇಕಾಗಿದೆ. ಸೋಲು-ಗೆಲುವುಗಳ ನಡುವೆಯೇ ಕನ್ನಡ ಚಿತ್ರರಂಗ ಸಿನಿಮಾ ಬಿಡುಗಡೆಯಲ್ಲಿ 220ರ ಸಂಖ್ಯೆಯನ್ನು ದಾಟಿದೆ. ಡಿಸೆಂಬರ್ ತಿಂಗಳ ಕೊನೆಯ ಶುಕ್ರವಾರವಾದ ಇಂದಿಗೆ ಬಿಡುಗಡೆಯಾದ ಸಿನಿಮಾಗಳನ್ನು ಲೆಕ್ಕ ಹಾಕಿ ಹೇಳುವುದಾದರೆ 220 ಪ್ಲಸ್ ಸಿನಿಮಾಗಳು ಸಿಗುತ್ತವೆ. ಇದರಲ್ಲಿ ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾದ 4 ಸಿನಿಮಾಗಳು ಕೂಡಾ ಸೇರಿವೆ. ಅನೇಕ ಸಿನಿಮಾಗಳು ನಿರ್ಮಾಪಕ, ನಿರ್ದೇಶಕ, ಕಲಾವಿದರಲ್ಲಿ ಮಂದಹಾಸ ಮೂಡಿಸಿದರೆ, ಬಹುತೇಕ ಸಿನಿಮಾಗಳು ಹೊಸಬರ ಕನಸನ್ನು ಭಗ್ನಗೊಳಿಸಿವೆ. ದಿನದಿಂದ ದಿನಕ್ಕೆ ಹೊಸ ಹೊಸ ನಿರ್ಮಾಪಕ, ನಿರ್ದೇಶಕರು ಬರುತ್ತಲೇ ಇದ್ದಾರೆ. ಬಿಡುಗಡೆಯಾದ 220 ಚಿತ್ರಗಳ ಪೈಕಿ ಕೆಲವು ಚಿತ್ರಗಳು ಮಾತ್ರ ಹಾಕಿದ ಬಂಡವಾಳವನ್ನು ವಾಪಸ್ಸು ಪಡೆಯುವುದರ ಜೊತೆಗೆ ಕೆಲವು ಕೋಟಿಗಳ ಲಾಭವಾಗಿದ್ದು ಬಿಟ್ಟರೆ, ಮಿಕ್ಕಂತೆ ಬಿಡುಗಡೆಯಾದ ಚಿತ್ರಗಳ ಪೈಕಿ ಒಟ್ಟಾರೆ 500 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿ ಸಲಾಗಿದೆ. ಈ ಪೈಕಿ, ಹೊಸಬರ ಚಿತ್ರಗಳು 200ರಿಂದ 300 ಕೋಟಿ ಕಳೆದು ಕೊಂಡಿದ್ದಾರೆ ಎಂದು ಹೇಳಲಾಗಿದೆ.
ಶಿವಣ್ಣ 2 ಸಿನಿಮಾ
ಸ್ಟಾರ್ ನಟರು ವರ್ಷಕ್ಕೆ ಎರಡು ಸಿನಿಮಾ ಮಾಡಬೇಕು ಎಂಬ ಮಾತು ಕೇಳಿಬರುತ್ತಲೇ ಇರುತ್ತದೆ. ಆದರೆ, ಆ ಬಗ್ಗೆ ಚಿಂತಿಸುವ ಸ್ಟಾರ್ ನಟರು ಮಾತ್ರ ಕಡಿಮೆ. ಈ ವಿಚಾರದಲ್ಲಿ ಈ ವರ್ಷ ಶಿವಣ್ಣ ಮಿಂಚಿದ್ದಾರೆ. 2024ರಲ್ಲಿ ಅವರ ನಟನೆಯ ಎರಡು ಸಿನಿಮಾಗಳು ತೆರೆಗೆ ಬಂದಿದೆ. ಕರಟಕ ದಮನಕ ಹಾಗೂ ಭೈರತಿ ರಣಗಲ್ ಚಿತ್ರಗಳಲ್ಲಿ ಅವರು ದರ್ಶನ ನೀಡಿದ್ದಾರೆ.
ಭೀಮನಿಂದ ಆರಂಭ
ಸಿನಿಮಾಗಳ ಗೆಲುವಿನ ವಿಚಾರಕ್ಕೆ ಬರುವುದಾದರೆ ಈ ವರ್ಷ ಭರ್ಜರಿ ಗೆಲುವಿನ ಮೂಲಕ ಭರ ವಸೆ ಮೂಡಿ ಸಿದ ಸಿನಿಮಾ “ಭೀಮ’. ದುನಿಯಾ ವಿಜಯ್ ನಟನೆ, ನಿರ್ದೇಶನದ ಈ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು. ಕನ್ನಡ ಸಿನಿಮಾಕ್ಕೆ ಈ ವರ್ಷ ಪ್ರೇಕ್ಷಕ ಯಾಕೆ ಬರುತ್ತಿಲ್ಲ ಎಂಬ ಪ್ರಶ್ನೆಯನ್ನು ಹುಸಿಗೊಳಿಸಿದ ಸಿನಿಮಾವಿದು. ಆ ನಂತರ ಫ್ಯಾಮಿಲಿ ಆಡಿಯನ್ಸ್ ಅನ್ನು ಸೆಳೆದ ಚಿತ್ರ “ಕೃಷ್ಣಂ ಪ್ರಣಯ ಸಖೀ’. ನಂತರ ಬಂದ “ಬಘೀರ’, “ಭೈರತಿ ರಣಗಲ್’, “ಯುಐ’ ಚಿತ್ರಗಳು ಕೂಡಾ ಪ್ರೇಕ್ಷಕರನ್ನು ದೊಡ್ಡ ಮಟ್ಟದಲ್ಲಿ ಸೆಳೆದು, ಭರ್ಜರಿ ಕಲೆಕ್ಷನ್ ಮಾಡಿ ಹಿಟ್‌ಲಿಸ್ಟ್ ಸೇರಿವೆ. ಇದರ ಜೊತೆಗೆ ಕೆಲವು ಸಿನಿಮಾಗಳು ಹಾಕಿದ ಬಂಡವಾಳವನ್ನು ಸ್ಯಾಟ್‌ಲೆçಟ್, ಓಟಿಟಿ ಹಾಗೂ ಅಲ್ಲಿಂದಲ್ಲಿಗೆ ಚಿತ್ರಮಂದಿರ ಕಲೆಕ್ಷನ್‌ನಿಂದ ಪಡೆದು “ಸೇಫ್’ ಎಂದು ನಿಟ್ಟುಸಿರು ಬಿಟ್ಟಿವೆ.
ಮ್ಯಾಕ್ಸ್‌ಗೆ ಮೆಚ್ಚುಗೆ
ಸುದೀಪ್ ನಟನೆಯ “ಮ್ಯಾಕ್ಸ್’ ಚಿತ್ರ ಡಿ.25ರಂದು ತೆರೆಕಂಡು ಭರ್ಜರಿ ಓಪನಿಂಗ್ ಪಡೆದಿದೆ. ಒಂದು ಮಾಸ್ ಕಂ ಆ್ಯಕ್ಷನ್ ಚಿತ್ರವಾಗಿ ಮೂಡಿಬಂದಿರುವ ಈ ಚಿತ್ರಕ್ಕೆ ನೋಡಿದವರಿಂದಲೂ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಗೆಲುವಿನ ಸೂಚನೆ ನೀಡಿದೆ. ಈ ಮೂಲಕ ಸುದೀಪ್ ಖುಷಿ ಆಗಿದ್ದಾರೆ. ಆದರೆ, ಒಂದು ಸಿನಿಮಾದ ಸೋಲು- ಗೆಲುವನ್ನು ಎರಡು ದಿನದಲ್ಲಿ ನಿರ್ಧರಿಸು ವುದು ಕಷ್ಟ. ಹಾಗಾಗಿ, “ಮ್ಯಾಕ್ಸ್’ ಚಿತ್ರದ ಫಲಿತಾಂಶ ವನ್ನು ಈಗಲೇ ಹೇಳಿದರೆ ತಪ್ಪಾದೀತು.
ಹೊಸಬರಿಗೆ ನಿರಾಸೆ
ವಾರ ವಾರ ಚಿತ್ರಮಂದಿರಗಳಿಗೆ ಸಿನಿಮಾ ನೀಡುತ್ತಾ ಬಂದಿರುವ ಹೊಸಬರಿಗೆ ಈ ವರ್ಷವೂ ಕಾಡಿದ್ದು ಗೆಲುವಿನ ಸಮಸ್ಯೆ. 185ಕ್ಕೂ ಹೆಚ್ಚು ಹೊಸಬರ ಸಿನಿಮಾಗಳಲ್ಲಿ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಿದ, ಪ್ರೇಕ್ಷಕರ ಬಾಯಲ್ಲಿ ಕುಣಿದಾಡಿದ ಸಿನಿಮಾ ಯಾವುದೆಂದು ಕೇಳಿದರೆ ಉತ್ತರಿಸೋದು ಕಷ್ಟ. ಸ್ಟಾರ್‌ಗಳ ಸಿನಿಮಾಕ್ಕಿಂತ ಹೆಚ್ಚಾಗಿ ಇವತ್ತು ಗೆಲುವಿನ ಅಗತ್ಯವಿರೋದು ಹೊಸಬರಿಗೆ. ಆದರೆ, ಈ ವರ್ಷ ಹೊಸಬರಿಗೆ ಹೇಳಿ ಕೊಳ್ಳುವಂಥ ಗೆಲುವು ಸಿಗಲಿಲ್ಲ ಎಂಬುದು ಕಟುಸತ್ಯ.
ಪ್ಯಾನ್ ಇಂಡಿಯಾ ಮಂಕು
“ಕೆಜಿಎಫ್’, “ಕಾಂತಾರ’ ಮೂಲಕ ಪ್ಯಾನ್ ಇಂಡಿಯಾದಲ್ಲಿ ಸದ್ದು ಮಾಡಿದ ಕನ್ನಡ ಚಿತ್ರರಂಗ ಈ ವರ್ಷ ಮಾತ್ರ ಪ್ಯಾನ್ ಇಂಡಿಯಾದಲ್ಲಿ ಮಂಕಾಗಿದ್ದು ಸುಳ್ಳಲ್ಲ. ಪ್ಯಾನ್ ಇಂಡಿಯಾ ಎಂದು ಬಿಡುಗಡೆಯಾದ “ಮಾರ್ಟಿನ್’, “ಯು-ಐ’ ಸೇರಿ ಯಾವ ಚಿತ್ರವೂ ಹೊರ ರಾಜ್ಯಗಳಲ್ಲಿ ದೊಡ್ಡ ಮಟ್ಟದ ಕಮಾಲ್ ಮಾಡಲೇ ಇಲ್ಲ. ಹಾಗೆ ಪರರಾಜ್ಯಗಳಲ್ಲಿ ಈ ಚಿತ್ರಗಳಿಗೆ ಸಿಕ್ಕ ಶೋಗಳ ಸಂಖ್ಯೆ ಹಾಗೂ ಟೈಮಿಂಗ್ ನೋಡಿದರೆ ನಿಜಕ್ಕೂ ಬೇಸರವಾಗುತ್ತದೆ.
ಟಿಕೆಟ್ ದರ ಹೋರಾಟ
ರಾಜ್ಯದಲ್ಲಿ ಪ್ರತಿ ಬಾರಿ ಪರಭಾಷಾ ಚಿತ್ರಗಳು ಬಿಡುಗಡೆಯಾದಾಗ ಮತ್ತು ಆ ಚಿತ್ರಗಳ ಟಿಕೆಟ್ ದರ ದುಪ್ಪಟ್ಟಾದಾಗ ಕೇಳಿಬರುವ ಹೋರಾಟದ ಕೂಗು ಈ ವರ್ಷವೂ ಕೇಳಿಬಂತು. ಪರಭಾಷಾ ಚಿತ್ರಗಳು ರಾಜ್ಯದ ಪ್ರೇಕ್ಷಕರ ಹಣವನ್ನು ಲೂಟಿ ಮಾಡುತ್ತಿವೆ, ಈ ನಿಟ್ಟಿನಲ್ಲಿ ಏಕರೂಪ ಟಿಕೆಟ್ ದರ ಜಾರಿಯಾಗಬೇಕು ಎಂದು ಸರ್ಕಾರವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಒತ್ತಾಯಿಸಿ, ಪ್ರತಿಭಟನೆ ಕೂಡಾ ಮಾಡಿತು. ಆದರೆ, ಹೋರಾಟಕ್ಕೆ ಯಾವ ಫಲವೂ ಸಿಗಲಿಲ್ಲ.
30 @ ಫೆಬ್ರವರಿ
2024ರಲ್ಲಿ ಅತಿ ಹೆಚ್ಚು ಸಿನಿಮಾ ತೆರೆಕಂಡ ತಿಂಗಳು ಯಾವುದೆಂದು ಕೇಳಿದರೆ ಅದಕ್ಕೆ ಉತ್ತರ ಫೆಬ್ರವರಿ. ಈ ತಿಂಗಳಲ್ಲಿ ಬರೋಬ್ಬರಿ 30 ಸಿನಿಮಾಗಳು ತೆರೆಕಂಡಿವೆ. ಅತಿ ಕಡಿಮೆ ತೆರೆಗೆ ಬಂದ ತಿಂಗಳು ಡಿಸೆಂಬರ್. ಈ ತಿಂಗಳಲ್ಲಿ ಕೇವಲ ಕನ್ನಡ 4 ಸಿನಿಮಾಗಳಷ್ಟೇ ಬಿಡುಗಡೆಯಾಗಿವೆ.
ಗೆದ್ದ ಸಿನಿಮಾಗಳು
ಭೀಮ, ಬಘೀರ, ಕೃಷ್ಣಂ ಪ್ರಣಯ ಸಖೀ, ಭೈರತಿ ರಣಗಲ್, ಯು-ಐ
ಮೆಚ್ಚುಗೆ ಪಡೆದ ಚಿತ್ರಗಳು
ಒಂದು ಸರಳ ಪ್ರೇಮಕಥೆ, ಬ್ಯಾಚುಲರ್ ಪಾರ್ಟಿ, ಶಾಖಾಹಾರಿ, ಬ್ಲಿಂಕ್, ಕೆರೆಬೇಟೆ, ಧೈರ್ಯಂ ಸರ್ವತ್ರ ಸಾಧನಂ, ಕರಟಕ ಧಮನಕ, ಜಡ್ಜ್ಮೆಂಟ್, ಶಿವಮ್ಮ ಯರೆಹಂಚಿನಾಳ, ಗೌರಿ, ಲಾಫಿಂಗ್ ಬುದ್ಧ, ಇಬ್ಬನಿ ತಬ್ಬಿದ ಇಳೆಯಲಿ, ರಾನಿ, ಭೈರಾದೇವಿ, ಆರಾಮ್ ಅರವಿಂದ ಸ್ವಾಮಿ, ಉಪಾಧ್ಯಕ್ಷ, ರೂಪಾಂತರ, ಮರ್ಫಿ, ಓ2, ಶೆಫ್ ಚಿದಂಬರ, ಮೂರನೇ ಕೃಷ್ಣಪ್ಪ, ಮರ್ಯಾದೆ ಪ್ರಶ್ನೆ.
ಓಟಿಟಿ ರಿಲೀಸ್: ಎಂಥ ಕಥೆ ಮಾರಾಯ, ಹ್ಯಾಪಿ ಬರ್ತ್‌ಡೇ ಟು ಮಿ, ಹ್ಯಾಪಿ ಮ್ಯಾರೀಡ್ ಲೈಫ್, ಮೂರು ಕಾಸಿನ ಕುದುರೆ.
ಅಗಲಿದವರು: ಕೆ.ಶಿವರಾಮ್, ದ್ವಾರಕೀಶ್, ಅಪರ್ಣಾ ವಸ್ತಾರೆ, ಸೌಂದರ್ಯ ಜಗದೀಶ್, ವಿನೋದ್ ದೊಂಡಾಳೆ, ರೀಟಾ ಅಂಚನ್, ದೀಪಕ್ ಅರಸ್, ರಾಮೋಜಿ ರಾವ್, ತಿಮ್ಮಯ್ಯ, ಗುರುಪ್ರಸಾದ್, ಶೋಭಿತಾ, ಕೆ.ಪ್ರಭಾಕರ್, ಚಿ.ದತ್ತರಾಜು, ಶಾಮಸುಂದರ್ ಕುಲಕರ್ಣಿ, ಪ್ರಕಾಶ್ ಹೆಗ್ಗೊàಡು, ಸತೀಶ್ ಬಾಬು, ಡ್ಯಾನಿಯಲ್ ಬಾಲಾಜಿ
ಗುನುಗಿದ ಹಾಡು
ಬ್ಯಾಡ್ ಬಾಯ್ಸ, ಡೋಂಟ್ ವರಿ ಬೇಬಿ ಚಿನ್ನಮ್ಮ (ಭೀಮ)
ದ್ವಾಪರ, ಚಿನ್ನಮ್ಮ, ಹೇ ಗಗನ (ಕೃಷ್ಣಂ ಪ್ರಣಯ ಸಖೀ)
ಜೀವ ನೀನೇ (ಮಾರ್ಟಿನ್)
ನನಗೆ ನೀನು ನಿನಗೆ ನಾನು (ಉಪಾಧ್ಯಕ್ಷ)
ನೀನ್ಯಾರೆಲೇ (ಒಂದು ಸರಳ ಪ್ರೇಮಕಥೆ)
ಹಿತ್ತಲಕ ಕರಿಬ್ಯಾಡ ಮಾವ (ಕರಟಕ…)
ಟ್ರೋಲ್ ಸಾಂಗ್ (ಯು-ಐ)
ಪರಿಚಯವಾದೆ (ಬ àರ)
ಓ ಅನಾಹಿತ, ರಾಧೆ (ಇಬ್ಬನಿ ತಬ್ಬಿದ ಇಳೆಯಲಿ)
ಗಮನ ಸೆಳೆದ ನವನಟಿಯರು
ಮಲೈಕಾ (ಉಪಾಧ್ಯಕ್ಷ), ರಿಷಿಕಾ (ಜೂನಿ, ಪುರುಷೋತ್ತಮ), ಸ್ವಾದಿಷ್ಟ (ಒಂದು ಸರಳ ಪ್ರೇಮಕಥೆ), ಸಂಜನಾ ದಾಸ್ (ಕೆಟಿಎಂ), ಬಿಂದು (ಕೆರೆಬೇಟೆ), ಮೋಕ್ಷಾ (ಕೋಟಿ), ಅಶ್ವಿನಿ (ಭೀಮ), ಅಂಕಿತಾ (ಇಬ್ಬನಿ ತಬ್ಬಿದ ಇಳೆಯಲಿ, ಮೈ ಹೀರೋ), ಸಮೀಕ್ಷಾ (ರಾನಿ), ಇಳಾ (ಮರ್ಫಿ), ಸ್ಫೂರ್ತಿ (ಎಲ್ಲಿಗೆ ಪಯಣ…), ಸಾನ್ಯಾ ಅಯ್ಯರ್ (ಗೌರಿ), ಕಾಜಲ್ ಕುಂದರ್ (ಪೆಪೆ, ಲೈನ್‌ಮ್ಯಾನ್, ಕೆಟಿಎಂ)
ಮತ್ತೆ ಮತ್ತೆ ತೆರೆಯ ಮೇಲೆ
ಆಶಿಕಾ (ಅವತಾರ ಪುರುಷ 2, ಓ2)
ರುಕ್ಮಿಣಿ ವಸಂತ್ (ಬಘೀರ, ಭೈರತಿ)
ಮಿಲನಾ (ಫಾರ್ ರಿಜಿಸ್ಟ್ರೇಶನ್, ಅರವಿಂದ್ ಸ್ವಾಮಿ)
ಅಮೃತಾ (ಅಬ್ಬಬ್ಟಾ, ಜೀಬ್ರಾ)
ಚೈತ್ರಾ ಆಚಾರ್ (ಬ್ಲಿಂಕ್, ಹ್ಯಾಪಿ ಬರ್ತ್‌ಡೇ ಟು ಮಿ-ಓಟಿಟಿ)
ತೆರೆಗೆ ಬಾರದವರು
ಯಶ್, ದರ್ಶನ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಪ್ರಜ್ವಲ್, ಅಜಯ್ ರಾವ್, ಪ್ರೇಮ್, ನಿಖಿಲ್.
4 ಸಿನಿಮಾಗಳಲ್ಲಿ ಧನ್ಯಾ
ರಾಜ್ ಕುಟುಂಬದ ಕುಡಿ ಧನ್ಯಾ ರಾಮ್‌ಕುಮಾರ್ ಈ ವರ್ಷ ಬರೋಬ್ಬರಿ 4 ಸಿನಿಮಾಗಳ ಮೂಲಕ ತೆರೆಮೇಲೆ ಮಿಂಚಿದ್ದಾರೆ. “ಹೈಡ್ ಆ್ಯಂಡ್ ಸೀಕ್’, “ದಿ ಜಡ್ಜ್ಮೆಂಟ್’, “ಪೌಡರ್’, “ಕಾಲಾಪತ್ಥರ್’ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಸದ್ದು ಮಾಡಿದ ವಿವಾದಗಳು
ಕನ್ನಡ ಚಿತ್ರರಂಗದಲ್ಲಿ ಕೆಲವು ಕಾಂಟ್ರವರ್ಸಿಗಳು ಸದ್ದು ಮಾಡಿವೆ. ಆದರೆ, ಆ ಯಾವ ವಿವಾದಗಳೂ ತೀವ್ರ ಸ್ವರೂಪಕ್ಕೆ ಹೋಗದೇ, ಬೇಗನೇ ತಣ್ಣಗಾಗಿವೆ ಎಂಬುದು ಸಮಾಧಾನಕರ ಸಂಗತಿ. ಮುಖ್ಯವಾಗಿ “ಮಾರ್ಟಿನ್’ ಚಿತ್ರದ ನಿರ್ಮಾಪಕ, ನಿರ್ದೇಶಕರ ವಿವಾದ, ಫೈರ್ ಸಂಸ್ಥೆಯ ಮೀ ಟೂ ಹೋರಾಟ, “ಉಸಿರೇ ಉಸಿರೇ’ ಚಿತ್ರದ ನಿರ್ಮಾಪಕ-ನಿರ್ದೇಶಕರ ನಡುವಿನ ವಿವಾದಗಳು ತಣ್ಣಗೆ ಸದ್ದು ಮಾಡಿದರೆ, ಜೂನ್‌ನಿಂದ ದರ್ಶನ್ ಹಾಗೂ ಗ್ಯಾಂಗ್‌ನ ಸುದ್ದಿಯೇ ಜೋರಾಗಿ ಸದ್ದು ಮಾಡಿತು.
ರಾಜ್ಯದಲ್ಲಿ ಪರಭಾಷಾ ಚಿತ್ರಗಳ ಭರ್ಜರಿ ಗಳಿಕೆ
ಈ ವರ್ಷ ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳು ಅತೀ ಹೆಚ್ಚು ಗಳಿಕೆ ಮಾಡಿವೆ. ಈ ಪೈಕಿ “ಪುಷ್ಪ 2′ ಮತ್ತು “ಕಲ್ಕಿ 2898 ಎಡಿ’ ಚಿತ್ರಗಳು ತಲಾ 70 ಕೋಟಿ ರೂ.ಗಳಿಗೂ ಹೆಚ್ಚು ರಾಜ್ಯದಲ್ಲಿ ಗಳಿಕೆ ಮಾಡಿರುವ ಸುದ್ದಿ ಇದೆ. ನಂತರದ ಸ್ಥಾನಗಳಲ್ಲಿ “ದೇವರ’, “ಗೋಟ್’, “ವೆಟ್ಟಾಯನ್’, “ಹನುಮಾನ್’, “ತಂಗಳಾನ್’, “ಕ್ಯಾಪ್ಟನ್ ಮಿಲ್ಲರ್’ ಮತ್ತು “ಇಂಡಿಯನ್ 2′, “ಭೂಲ್ ಬುಲಯ್ಯ 3′, “ಸಿಂಗಂ ಅಗೇನ್ 2′, “ಫೈಟರ್’, “ಸ್ತ್ರೀ 2′, “ಮಂಜುಮ್ಮೆಲ್ ಬಾಯ್ಸ್’, “ಆವೇಶಂ’, “ಆಡುಜೀವಿತಂ’ ಮುಂತಾದ ಕೆಲವು ಚಿತ್ರಗಳು ಕರ್ನಾಟಕದಲ್ಲಿ ತಕ್ಕ ಮಟ್ಟಿಗೆ ಗಳಿಕೆ ಮಾಡಿವೆ. ಈ ಎಲ್ಲಾ ಚಿತ್ರಗಳು ರಾಜ್ಯದಲ್ಲಿ ಸೂಪರ್ ಹಿಟ್ ಅಲ್ಲದಿದ್ದರೂ, ನಿರೀಕ್ಷೆ ಹೆಚ್ಚಿದ್ದರಿಂದ ಆರಂಭಿಕ ಗಳಿಕೆ ಚೆನ್ನಾಗಿದೆ. ಇವೆಲ್ಲವನ್ನೂ ಸೇರಿಸಿದರೆ ಕರ್ನಾಟಕದಲ್ಲಿ ಈ ವರ್ಷ ಪರಭಾಷಾ ಚಿತ್ರಗಳು 200ರಿಂದ 300 ಕೋಟಿ ರೂ. ಗಳಿಗೂ ಹೆಚ್ಚು ಗಳಿಕೆ ಮಾಡಿವೆ ಎಂಬ ಸುದ್ದಿ ಇದೆ. ಇದಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಕನ್ನಡ ಚಿತ್ರಗಳೇ ಇಷ್ಟೊಂದು ಗಳಿಕೆ ಮಾಡಿಲ್ಲ ಎಂಬುದು ಗಮನಾರ್ಹ.