ಬೆಂಗಳೂರು: ತನ್ನ ಟೈಟಲ್ ಮತ್ತು ಫಸ್ಟ್‌ಲುಕ್ ಮೂಲಕ ಅಭಿಮಾನಿಗಳ ಗಮನ ಸೆಳೆದಿರುವ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿನಯದ 123ನೇ ಚಿತ್ರ “ಬೈರಾಗಿ’ಯ ಚಿತ್ರೀಕರಣ ಬಹುತೇಕ ಪೂರ್ಣ ಗೊಂಡಿದೆ.
ತಮಿಳಿನ ಖ್ಯಾತ ಛಾಯಾಗ್ರಹಕ ಮತ್ತು ನಿರ್ದೇಶಕ ವಿಜಯ್ ಮಿಲ್ಟನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಬೈರಾಗಿ’ ಚಿತ್ರಕ್ಕೆ ಬರೋಬ್ಬರಿ ನೂರಕ್ಕೂ ಹೆಚ್ಚು ದಿನಗಳ ಶೂಟಿಂಗ್ ನಡೆಸಲಾಗಿದೆ. “ಟಗರು’ ಚಿತ್ರದ ಸಕ್ಸಸ್ ಬಳಿಕ ಮತ್ತೂಮ್ಮೆ ನಟ ಶಿವರಾಜಕುಮಾರ್ ಹಾಗೂ ಡಾಲಿ ಧನಂಜಯ್ ಈ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು, ಇಬ್ಬರೂ ಕೂಡ ಎರಡು ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.
ಇತ್ತೀಚೆಗೆ ನಟ ಶಿವರಾಜಕುಮಾರ್ ಹುಟ್ಟುಹಬ್ಬದ ವೇಳೆ ಬಿಡುಗಡೆಯಾಗಿದ್ದ “ಬೈರಾಗಿ’ ಟೈಟಲ್ ಮತ್ತು ಟೀಸರ್ ಶಿವಣ್ಣ ಅಭಿಮಾನಿಗಳ ಗಮನ ಸೆಳೆಯುತ್ತಿದ್ದು, ಹುಲಿವೇಷದಲ್ಲಿ ಮತ್ತು ಡಿಫರೆಂಟ್ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಂಡಿರುವ ಶಿವಣ್ಣ ಲುಕ್ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು.
ಇದಾದ ಬಳಿಕ ಚಿತ್ರೀಕರಣ ಚಟುವಟಿಕೆಯನ್ನು ಚುರುಕುಗೊಳಿಸಿದ್ದ ಚಿತ್ರತಂಡ, ಅಂದುಕೊಂಡಂತೆ ಇದೀಗ “ಬೈರಾಗಿ’ಯ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಳಿಸಿದ್ದು, ಬಾಕಿಯಿರುವ ಹಾಡಿನ ಚಿತ್ರೀಕರಣಕ್ಕೆ ಶೀಘ್ರದಲ್ಲೇ ಮೈಸೂರಿನತ್ತ ತೆರಳುವ ಯೋಚನೆ ಯಲ್ಲಿದೆ.
ಇನ್ನು”ಬೈರಾಗಿ’ ಚಿತ್ರದಲ್ಲಿ ಅಂಜಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, “ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್, ಶಶಿಕುಮಾರ್ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸುತ್ತಿದ್ದಾರೆ. “ಕೃಷ್ಣ ಕ್ರಿಯೇಷನ್ಸ್’ ಬ್ಯಾನರ್‌ನಲ್ಲಿ ಕೃಷ್ಣ ಸಾರ್ಥಕ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.