ವರ್ಷದ ಕೊನೆಯ ವಾರ ಬಂದಾಗಿದೆ. ಸಿನಿಮಾ ಬಿಡುಗಡೆಯ ವಿಚಾರದಲ್ಲಿ ಕನ್ನಡ ಚಿತ್ರರಂಗ ಈ ವರ್ಷ ಭರ್ಜರಿ “ಪರ್‌ಫಾರ್ಮೆನ್ಸ್’ ನೀಡುತ್ತಲೇ ಬಂದಿದೆ. ಹಾಗೆ ನೋಡಿದರೆ ಈ ವರ್ಷದ ಮೊದಲ ವಾರ ಅಂದರೆ ಜ.07ರಂದು ಯಾವುದೇ ಸಿನಿಮಾ ಬಿಡುಗಡೆ ಕಂಡಿರಲಿಲ್ಲ. ಸಿನಿಮಾ ಬಿಡುಗಡೆ ಆರಂಭವಾಗಿದ್ದೇ ಜನವರಿ ಎರಡನೇ ವಾರದಿಂದ.
“ನಮ್ಮ ಭಾರತ’ ಎಂಬ ಚಿತ್ರ ಜ.14ರಂದು ತೆರೆಕಾಣುವ ಮೂಲಕ ಅಕೌಂಟ್ ಓಪನ್ ಮಾಡಿತು. ಆರಂಭ ಸ್ವಲ್ಪ ಮಂಕಾಗಿದ್ದರೂ ವರ್ಷಾಂತ್ಯ ಮಾತ್ರ ಭರ್ಜರಿ ರಿಲೀಸ್‌ನೊಂದಿಗೆ ಮುಗಿಯುತ್ತಿದೆ. 2022ರ ಕೊನೆಯ ವಾರ (ಡಿ.30)ಕ್ಕೆ ಬರೋಬ್ಬರಿ 9 ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಈ ಮೂಲಕ ಸ್ಯಾಂಡಲ್‌ವುಡ್ ಡಿಸೆಂಬರ್ ಸೆಂಟಿಮೆಂಟ್ ಅನ್ನು ಮತ್ತೂಮ್ಮೆ ಸಾಬೀತು ಮಾಡಿದೆ.
ಈ ವಾರ ತೆರೆಕಾಣುತ್ತಿರುವ 9 ಸಿನಿಮಾಗಳು ಯಾವುದೆಂದು ನೋಡುವುದಾದರೆ “ಜಮಾಲಿಗುಡ್ಡ’, “ಪದವಿಪೂರ್ವ’, “ನಾನು, ಅದು ಮತ್ತು ಸರೋಜ’, “ಮೇಡ್ ಇನ್ ಬೆಂಗಳೂರು’, “ದ್ವಿಪಾತ್ರ’, “ಲವ್ ಸ್ಟೋರಿ’, “ಜೋರ್ಡನ್’, “ಆಲ್ಫಾ’ ಹಾಗೂ “ರುಧೀರ ಕಣಿವೆ’ ಚಿತ್ರಗಳು ಈ ವಾರ ಅದೃಷ್ಟ ಪರೀಕ್ಷೆಗೆ ಇಳಿದಿವೆ. ಎಲ್ಲಾ ಓಕೆ, ವರ್ಷಾಂತ್ಯದ ರಶ್ ಯಾಕೆ ಎಂದು ಕೇಳಬಹುದು. ಅನೇಕರಿಗೆ ತಮ್ಮ ಸಿನಿಮಾವನ್ನು ಈ ವರ್ಷವೇ ಬಿಡುಗಡೆ ಮಾಡಬೇಕೆಂಬ ಆಸೆ ಒಂದು ಕಡೆಯಾದರೆ, ಜನವರಿ 26ರಂದು ದರ್ಶನ್ ನಟನೆಯ “ಕ್ರಾಂತಿ’ ಚಿತ್ರ ಬಿಡುಗಡೆಯಾಗುತ್ತದೆ. ಸಹಜವಾಗಿಯೇ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾದಾಗ ಚಿತ್ರಮಂದಿರ ಸಮಸ್ಯೆ ಉಂಟಾಗುತ್ತದೆ. ಇದು ಕಾರಣವಾದರೆ ಜನವರಿ ಮೊದಲ ವಾರ ಕೂಡಾ ಏಳು ಸಿನಿಮಾಗಳು ತೆರೆಕಾಣುತ್ತಿವೆ. ಈ ಎಲ್ಲಾ ಕಾರಣಗಳಿಂದಾಗಿ ಡಿಸೆಂಬರ್ ಕೊನೆಯ ವಾರ ಸಿನಿಟ್ರಾಫಿಕ್ ಜೋರಾಗಿದೆ.
ಡಿಸೆಂಬರ್‌ನಲ್ಲಿ 37 ಸಿನಿಮಾ ರಿಲೀಸ್ : 2022ರಲ್ಲಿ ಅತಿ ಹೆಚ್ಚು ಸಿನಿಮಾ ಬಿಡುಗಡೆಯಾಗಿದ್ದು, ಯಾವ ವರ್ಷ ಎಂದು ಕೇಳಿದರೆ ಅದಕ್ಕೆ ಉತ್ತರ ಡಿಸೆಂಬರ್. ಈ ವರ್ಷದಲ್ಲಿ ಡಿಸೆಂಬರ್ ಒಂದೇ ತಿಂಗಳಲ್ಲಿ 37 ಸಿನಿಮಾಗಳು ಬಿಡುಗಡೆ ಕಂಡಿವೆ. ಡಿಸೆಂಬರ್ ಮೊದಲ ವಾರ 7, ಎರಡು ಹಾಗೂ ಮೂರನೇ ವಾರ ತಲಾ 9, ನಾಲ್ಕನೇ ವಾರ 3 ಹಾಗೂ ಕೊನೆಯ ವಾರ (ಡಿ.30) 9 ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಅಲ್ಲಿಗೆ ಡಿಸೆಂಬರ್ ಲಕ್ಕಿ ನಂಬರ್ 9 ಎಂದು ಹೇಳಬಹುದು.